ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನದಲ್ಲಿ ಅಕ್ರಮ ಪ್ರವೇಶ ಪಡೆದು ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಶೆಡ್ ಗಳನ್ನು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿರುವ ಘಟನೆ ಹಿನಕಲ್ ನಲ್ಲಿ ನಡೆದಿದೆ.
ಹಿನಕಲ್ ಗ್ರಾಮದ ಸರ್ವೆ ನಂಬರ್ 09ರಲ್ಲಿ 0.33 ಗುಂಟೆ ಜಾಗವಿದ್ದು, ಈ ನಿವೇಶನವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸಂಬಂಧಿಸಿದ ಭೂಮಾಲೀಕರಿಗೆ ಪರಿಹಾರದ ಮೊಬಲಗನ್ನು ಪಾವತಿಸಿ ಭೂಸ್ವಾಧೀನ ಪಡಿಸಿಕೊಂಡಿತ್ತು. ಸದ್ಯ ಈ ನಿವೇಶನದ ಮೊಬಲಗು ಸುಮಾರು 7 ಕೋಟಿ 90 ಲಕ್ಷ ರೂ.ಗಳಾಗಿದೆ. ಆದರೆ ಖಾಲಿಯಿದ್ದ ನಿವೇಶನಕ್ಕೆ ಅನಧಿಕೃತವಾಗಿ ಪ್ರವೇಶ ಮಾಡಿದ ಭೂಮಾಲೀಕರು ಅನಧಿಕೃತವಾಗಿ ಶೆಡ್ ಗಳನ್ನು ನಿರ್ಮಿಸಿದ್ದರು.
ಈ ಸಂಬಂಧ ಜೂ.28 (ಸೋವಾರ) ರಂದು ಬೆಳಿಗ್ಗೆ 6 ಗಂಟೆ ವೇಳೆಯಲ್ಲಿ ಮುಡಾ ಆಯುಕ್ತರಾದ ಡಾ.ಬಿ.ನಟೇಶ್, ಕಾರ್ಯಪಾಲಕ ಅಭಿಯಂತರರಾದ ಪಾಂಡುರಂಗ, ಸತ್ಯನಾರಾಯಣ ಜೋಷಿ, ವಿಶೇಷ ಭೂಸ್ವಾಧೀನಾಧಿಕಾರಿ ಹರ್ಷವರ್ಧನ್, ವಲಯಾಧಿಕಾರಿ ಕೆ.ಆರ್.ಮಹೇಶ್, ಭಾಸ್ಕರ್, ರವೀಂದ್ರಕುಮಾರ್, ರವಿಶಂಕರ್, ಮೋಹನ್, ನಾಗೇಶ್, ಹೆಚ್.ಪಿ.ಶಿವಣ್ಣ ಮತ್ತು ಸಿಬ್ಬಂದಿ ತೆರಳಿ ಕಾರ್ಯಾಚರಣೆ ನಡೆಸುವ ಮೂಲಕ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಶೆಡ್ ಗಳನ್ನು ತೆರವುಗೊಳಿಸಲಾಗಿದೆ.