
ಚಾಮರಾಜನಗರ: ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸುವುದರೊಂದಿಗೆ ಮೌಲ್ಯವರ್ದನೆ ಮಾಡುವುದರಿಂದ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡಿ ಆದಾಯ ಪಡೆಯಬಹುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು.
ತಾಲೂಕಿನ ಪುಣಜನೂರು ಗ್ರಾಮ ಪಂಚಾಯಿತಿಯಲ್ಲಿಂದು ವನ ಧನ ವಿಕಾಸ ಕೆಂದ್ರದಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಹಮ್ಮಿಕೊಳ್ಳಲಾಗಿದ್ದ ಹುಣಸೆಹಣ್ಣಿನ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಕುರಿತು ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯವಾಗಿ ಸಿಗುವಂತಹ ವಸ್ತುಗಳ ಮಾರಾಟದಿಂದ ಆರ್ಥಿಕವಾಗಿ ಸಬಲೀಕರಣವಾಗಲು ಸಾಧ್ಯವಾಗಲಿದೆ. ಸಣ್ಣ ಸಣ್ಣ ವಸ್ತುಗಳ ಮಾರಾಟದಿಂದ ಪ್ರಾರಂಭಿಸಿ ದೊಡ್ಡ ಮಟ್ಟದಲ್ಲಿಯೂ ಉದ್ಯಮ ನಡೆಸಲು ಸಹ ಅನುಕೂಲವಾಗುತ್ತದೆ ಎಂದರು.
ಈ ಭಾಗದಲ್ಲಿ ಅತಿ ಹೆಚ್ಚಾಗಿ ಹುಣಿಸೆಹಣ್ಣು ಬೆಳೆಯಲಾಗುತ್ತಿದೆ. ಇದನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡುವುದರಿಂದ ಲಾಭ ಕಡಿಮೆಯಾಗುತ್ತದೆ. ಆದರೆ ವೈಜ್ಞಾನಿಕವಾಗಿ ತರಬೇತಿ ಪಡೆಯುವುದರಿಂದ ಉತ್ಪನ್ನಗಳ ತಯಾರಿಕೆ ಹಾಗೂ ಮೌಲ್ಯವರ್ದನೆ ಮಾಡುವುದರಿಂದ ಹೆಚ್ಚಿನ ಆದಾಯಗಳಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯೋಜನಾ ನಿರ್ದೆಶಕರಾದ ಡಾ. ಕೃಷ್ಣರಾಜು ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ, ಕೃಷಿ ವಿಶ್ವ ವಿದ್ಯಾನಿಯದ ಸಂಪನ್ಮೂಲ ವ್ಯಕ್ತಿ ಡಾ. ಕಲ್ಪನ, ಡಾ. ದರ್ಶನ್, ವೀಣಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಣಿ ನಾಯಕ, ಪಂಚಾಯತ್ ರಾಜ್ ಅಭಿವೃದ್ದಿ ಅಧಿಕಾರಿ ಸಿದ್ದರಾಜು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
