ಚಾಮರಾಜನಗರ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ ಯೋಜನೆಯಡಿ ಆರ್ಥಿಕ ನೆರವು ಪಡೆದಿರುವ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿರುವ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನಕ್ಕಾಗಿ ಮಾಸಿಕ ಸಂತೆಗಳನ್ನು ಆಯೋಜನೆ ಮಾಡುವ ಮೂಲಕ ಅವರ ಆರ್ಥಿಕ ಅಭಿವೃದ್ದಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿಂದು ಜಿಲ್ಲಾ ಪಂಚಾಯತ್ ವತಿಯಿಂದ ಏರ್ಪಾಡಾಗಿದ್ದ ಎನ್.ಆರ್.ಎಲ್.ಎಂ ಸಂಜೀವಿನಿ ಯೋಜನೆಯಡಿ ಆರ್ಥಿಕ ನೆರವು ಪಡೆದಿರುವ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿರುವ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನದ ಮಾಸಿಕ ಸಂತೆ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಎನ್.ಆರ್.ಎಲ್.ಎಂ ಸಂಜೀವಿನಿ ಯೋಜನೆಯಡಿ ಸೌಲಭ್ಯ ಪಡೆದು ಮನೆಯಲ್ಲಿಯೇ ಹಲವು ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಈ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದೊಂದಿಗೆ ಮಾಸಿಕ ಸಂತೆಗಳನ್ನು ಏರ್ಪಾಡು ಮಾಡಲಾಗುತ್ತಿದೆ ಎಂದರು.
ಈ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಮಾಸಿಕ ಸಂತೆಗೆ ಚಾಲನೆ ನೀಡಲಾಗಿದೆ. ಪ್ರಸ್ತುತ ಕೆಲವು ಸಂಘಗಳಿಗೆ ಅವಕಾಶ ದೊರಕಿದೆ. ಮುಂದಿನ ದಿನಗಳಲ್ಲಿ ಇತರೆ ತಾಲೂಕುಗಳಲ್ಲಿ ಆಯೋಜಿಸಲಾಗುವ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನದ ಮಾಸಿಕ ಸಂತೆಯಲ್ಲಿ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳಿಗೆ ಅವಕಾಶ ಕಲ್ಪಿಸಲಿದ್ದೇವೆ. ಈ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡಲಿದ್ದೇವೆ ಎಂದು ಅವರು ತಿಳಿಸಿದರು.
ಮುಂದೆ ಆಯೋಜಿಸಲಾಗುವ ಮಾಸಿಕ ಸಂತೆಗಳಲ್ಲಿ ಹೆಚ್ಚಿನ ಸ್ವಸಹಾಯ ಸಂಘಗಳು ಪಾಲ್ಗೊಳ್ಳಬೇಕು. ತಯಾರಿಸಿರುವ ಉತ್ಪನ್ನಗಳ ಗುಣಮಟ್ಟ ಹಾಗೂ ಪರಿಶುದ್ದತೆ ಬಗ್ಗೆ ಮನವರಿಕೆ ಮಾಡುವ ಮುಖೇನ ಹೆಚ್ಚು ಪ್ರಚಾರಗೊಳಿಸಬೇಕು. ವ್ಯವಸ್ಥಿತವಾಗಿ ಏರ್ಪಾಡು ಮಾಡಲಾಗುವ ಮಾಸಿಕ ಸಂತೆಗೆ ನೊಂದಣಿ ಮಾಡಿಕೊಳ್ಳಬೇಕು ಎಂದರು.
ಮಹಿಳೆಯರು ಆರ್ಥಿಕ ಸಹಾಯ ಪಡೆದು ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸಿದ್ದಾರೆ. ಈ ಉತ್ಪನ್ನಗಳ ಖರೀದಿಗೆ ಹೆಚ್ಚು ಬೆಂಬಲ ನೀಡಬೇಕಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಉತ್ಪಾದಿಸುವ ವಸ್ತುಗಳು, ತಿನಿಸುಗಳನ್ನು ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಖರೀದಿಸಲಾಗುವುದು. ಸಾರ್ವಜನಿಕರು, ಅಧಿಕಾರಿಗಳು ಮಹಿಳೆಯರ ಶ್ರಮ ಗುರುತಿಸಿ ಅವರ ಪ್ರಗತಿಗೆ ಮುಂದಾಗಬೇಕೆಂದು ಗಾಯತ್ರಿ ಅವರು ಸಲಹೆ ಮಾಡಿದರು.
ಇದೇ ವೇಳೆ ಹನೂರು ತಾಲೂಕಿನ ಕಣ್ಣೂರು ಗ್ರಾಮ ಪಂಚಾಯಿತಿಯ ಸರಸ್ವತಿ ಮಹಿಳಾ ಸಂಘದ ವಿ. ನಾಗರತ್ನ ಅವರು ಅನಿಸಿಕೆ ವ್ಯಕ್ತಪಡಿಸಿ ಗ್ರಾಮೀಣ ಭಾಗದಲ್ಲಿಯೇ ಬೆಳೆಯಲಾಗುವ ವಸ್ತುಗಳನ್ನು ಬಳಸಿ ಮನೆ ಬಳಕೆಗಾಗಿ ವಿವಿಧ ಬಗೆಯ ಹಪ್ಪಳ, ಉಪ್ಪಿನಕಾಯಿ, ಖಾರದಪುಡಿ ಇತರೆ ವಸ್ತುಗಳನ್ನು ತಯಾರಿಸುತ್ತಿದ್ದೇವೆ. ಮಹಿಳೆಯರ ಈ ಚಟುವಟಿಕೆಗಳಿಗೆ ಎಲ್ಲರ ಪ್ರೋತ್ಸಾಹ ಅಗತ್ಯವಿದೆ ಎಂದರು.
ಜಿಲ್ಲಾ ಪಂಚಾಯತ್‌ನ ಯೋಜನಾ ನಿರ್ದೇಶಕರಾದ ಕೃಷ್ಣರಾಜು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್‌ಕುಮಾರ್, ರೈತ ಸಂಘಟನೆಯ ಮುಖಂಡರಾದ ಹೊನ್ನೂರುಪ್ರಕಾಶ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.