ಗುಂಡ್ಲುಪೇಟೆ: ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ, ಮಾರಾಟ ಗುಮಾಸ್ತ ಸಂಘದ ಹಣ ದುರುಪಯೋಗ, ದಾಸ್ತಾನು ಕೊರತೆ, ದುರುಪಯೋಗದ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕು ಹಾಗು ದುರುಪಯೋಗ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಆದೇಶ ಹೊರಡಿಸಿದ್ದಾರೆ.

ನಾಗೇಶ್ ದೂರು: ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ವಿ.ಕುಮಾರ್ ಹಾಗು ಮಾರಾಟ ಗುಮಾಸ್ತ ನಾಗೇಂದ್ರರ ಸಂಘದಲ್ಲಿ ಕರ್ತವ್ಯದ ಸಮಯದಲ್ಲಿ ಸುಮಾರು 18 ಲಕ್ಷ ರೂ. ಹಣ ದುರುಪಯೋಗ ನಡೆಸಿದ್ದಾರೆ ಎಂದು ಬ್ಯಾಂಕ್ ನಿರ್ದೇಶಕರಾಗಿದ್ದ ಪುರಸಭೆ ಸದಸ್ಯ ನಾಗೇಶ್ ದೂರು ಸಲ್ಲಿಸಿದ್ದರು.

ದೂರಿನಾಧರದ ಮೇಲೆ ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಜಿ.ವಿ.ಕುಮಾರ್, ಮಾರಾಟ ಗುಮಾಸ್ತ ನಾಗೇಂದ್ರ ಅಮಾನತ್ತು ಗೊಂಡಿದ್ದಾರೆ.

ಅಂದಿನ ದೂರಿನ ಮೇರೆಗೆ ಗುಂಡ್ಲುಪೇಟೆ ಸಹಕಾರ ಅಭಿವೃದ್ಧಿ ಅಧಿಕಾರಿ ವಿಚಾರಣೆ ನಡೆಸಿ ವಿಚಾರಣೆ ವರದಿಯನ್ನು ಸಲ್ಲಿಸಿದ್ದು ವರದಿಯಲ್ಲಿ ಸಂಘದ ಸಿಇಒ, ಮಾರಾಟ ಗುಮಾಸ್ತರು ದುರುಪಯೋಗದ ಮೊಬಲಗು ಸಂಘದ ಬಂಡವಾಳದ ಕೊರತೆಗೆ ಕಾರಣವಾಗಿದ್ದು ಸಂಘದ ವ್ಯವಹಾರ ಕುಂಠಿತವಾಗಲು ಕಾರಣವಾಗಿ ಲಾಭಾಂಶಗಳಿಸಲು ಸಾದ್ಯವಾಗದೇ ನಷ್ಟ ಉಂಟಾಗುತ್ತದೆ. ಈ ನಷ್ಟ ಭರ್ತಿಗೆ ಮೇಲ್ಕಂಡವರಿಂದ ದುರುಪಯೋಗವಾದ ಹಣಕ್ಕೆ ಶೇ.18 ರಷ್ಟು ಬಡ್ಡಿದರದಂತೆ ವಸೂಲು ಮಾಡಲು ಆದೇಶಿಸಿದ್ದಾರೆ.

ಆದೇಶವೇನು: ಸಹಕಾರ ಸಂಘಗಳ ಸಹಾಯಕ ನಿಬಂಧಕ ಜಿ.ವಾಸುದೇವ ಆದೇಶದಂತೆ ಸಹಕಾರ ಸಂಘಗಳ ಕಾಯದೆ ಕಲಂ 64ರ ವಿಚಾರಣಾ ವರದಿಯಲ್ಲಿ ಕಂಡು ಬಂದಿರುವ ನ್ಯೂನತೆಗಳು, ಆಕ್ಷೇಪಣೆಗಳು, ಹಣ ದುರುಪಯೋಗ ಪ್ರಕರಣಗಳು, ದಾಸ್ತಾನು ಕೊರತೆ, ದುರುಪಯೋಗದ ಮೊತ್ತವನ್ನು ಬಡ್ಡಿ ಸಮೇತ ಸಂಬಂಧಿಸಿದವರಿಂದ ವಸೂಲು ಮಾಡಬೇಕು. ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕು. ಸಂಬಂಧಿಸಿದವರ ಮೇಲೆ ಕಾಯ್ದೆ ಕಲಂ 69 ರಂತೆ ಅಧಿಭಾರ ಅರ್ಜಿ ದಾಖಲಿಸಬೇಕು. ದುರುಪಯೋಗ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸಂಘದ ಸಿಇಒಗೆ ಆದೇಶ ನೀಡಿದ್ದಾರೆ.

‘ಟೌನ್ ಪ್ರಾಥಮಿಕ ಕೃಷ ಪತ್ತಿನ ಸಹಕಾರ ಸಂಘದ ಸಿಇಒ, ಮಾರಾಟ ಗುಮಾಸ್ತರು ಸಂಘದಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ದೂರು ನೀಡಿದ್ದೇ. ದೂರಿನಾಧರದ ಮೇಲೆ ವಿಚಾರಣೆ ನಡೆದು ಹಲವು ವರ್ಷಗಳ ಬಳಿಕ ತೀರ್ಪು ಬಂದಿದೆ. ತಡವಾದರೂ ತೀರ್ಪು ನಮ್ಮ ಪರವಾಗಿ ಬಂದಿದೆ. ಇದು ಸತ್ಯಕ್ಕೆ ಸಂದ ಜಯ.

  • ನಾಗೇಶ್,ಪುರಸಭೆ ಸದಸ್ಯ

ವರದಿ: ಬಸವರಾಜು ಎಸ್.ಹಂಗಳ