ತುಮಕೂರು: ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗುತ್ತಿರುವ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದ ಕಾಮಗಾರಿಯನ್ನು ಸೆಪ್ಟೆಂಬರ್ ತಿಂಗಳೊಳಗೆ ಮುಗಿಸಲು ಶಾಸಕ  ಜಿ.ಬಿ.ಜ್ಯೋತಿಗಣೇಶ್ ಸಂಬಂಧಿಸಿದ ಇಂಜಿನಿಯರುಗಳಿಗೆ ಸೂಚಿಸಿದ್ದಾರೆ.

ಕ್ರೀಡಾಂಗಣದ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಶಾಸಕರು, ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಮಟ್ಟದ ಎಂಟು ಲೈನ್‌ಗಳುಳ್ಳ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಗಲಿದೆ. ಅಲ್ಲದೆ ಕ್ರೀಡಾಂಗಣ ಸಮತಟ್ಟು ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ತುಮಕೂರು ನಗರದ ಎಂ.ಜಿ.ಕ್ರೀಡಾಂಗಣವು ಬೆಂಗಳೂರು ನಗರದಲ್ಲಿರುವ ಕ್ರೀಡಾಂಗಣಗಳಿಗೆ ಪರ್ಯಾಯವಾಗಿ ಅಭಿವೃದ್ಧಿಯಾಗಬೇಕು. ಇಲ್ಲಿನ ಪ್ರತಿಭೆಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸುವಂತೆ ಆಗಬೇಕು, ಇದಕ್ಕಾಗಿ ಎಲ್ಲಾ ರೀತಿಯಲ್ಲೂ ಕ್ರೀಡಾಂಗಣಕ್ಕೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಕ್ರೀಡಾಂಗಣದಲ್ಲಿ ಏನೆಲ್ಲಾ ಅವಶ್ಯಕತೆ ಇದೆ ಎಂಬುದನ್ನು ವಿವಿಧ ಕ್ರೀಡಾ ಸಂಘದವರಿಂದ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಿಂದ ಮಾಹಿತಿ ಪಡೆದರು.

ಇದೇ ವೇಳೆ  ಕ್ರೀಡಾಂಗಣದಲ್ಲಿ ನಿರ್ಮಾಣವಾಗುತ್ತಿರುವ ಸಿಂಥೆಟಿಕ್ ಟ್ರ್ಯಾಕ್ ಪಕ್ಕ ಪಶ್ಚಿಮ ಭಾಗದಲ್ಲಿ ಎರಡು ಲಾಂಗ್‌ಜಂಪ್ ಪಿಟ್‌ಗಳು ನಿರ್ಮಾಣವಾಗುತ್ತಿದ್ದು, ಇದರ ಜೊತೆಗೆ ಪೂರ್ವ ಭಾಗದಲ್ಲೂ ಎರಡು ಲಾಂಗ್‌ಜಂಪ್ ಪಿಟ್‌ಗಳನ್ನು ನಿರ್ಮಾಣ ಮಾಡಿಕೊಡುವಂತೆ ಹಾಗೂ ಕ್ರೀಡಾಂಗಣದ ಮೇಲ್ಬಾಗದಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣವಾಗುತ್ತಿದ್ದು, ಇದಕ್ಕೆ ಗ್ರಿಲ್ ಅಳವಡಿಸಬೇಕಾಗಿದೆ. ಜೊತೆಗೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಮೀಡಿಯಾ ಸೆಂಟರ್ ಅನ್ನು ನಿರ್ಮಿಸುವ ಅಗತ್ಯವಿದೆ. ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ಅಥ್ಲೆಟಿಕ್ ಸಿಂಥಟಿಕ್ ಟ್ರ್ಯಾಕ್‌ಗೆ ಹೊಂದಿಕೊಂಡಂತೆ ಫೋಟೋ ಫಿನಿಷಿಂಗ್ ಸೆಂಟರ್ ಅನ್ನು ಒದಗಿಸಬೇಕು, ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಕ್ರೀಡಾಪಟುಗಳ ತರಬೇತಿಗೆ ಮತ್ತು ಸ್ಪರ್ಧೆಗೆ ಅತ್ಯಾಧುನಿಕ ವೈಟ್‌ಲಿಫ್ಟಿಂಗ್ ಸೆಂಟರ್ ಅನ್ನು ಕಲ್ಪಿಸಬೇಕು, ಕ್ರೀಡಾಂಗಣದಲ್ಲಿ ರಿ-ಯಬಿಲಿಟೇಷನ್ ಸೆಂಟರ್‌ಅನ್ನು (ಕ್ರೀಡಾ ತರಬೇತಿ ಮತ್ತು ಸ್ಪರ್ಧೆಗಳಿಗೆ ಅನುಕೂಲವಾಗುವಂತೆ) ಪಾರಂಭಿಸುವುದು ಅಗತ್ಯವಾಗಿದೆ. ವಿವಿಐಪಿ ಸಭಾಂಗಣ, ಅಡುಗೆ ಕೋಣೆ ನಿರ್ಮಿಸಬೇಕು, ಯೋಗ ಮತ್ತು ಮೆಡಿಟೇಷನ್ ಸೆಂಟರ್‌ನ್ನು ಕೂಡ ನಿರ್ಮಿಸುವಂತ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಅಥ್ಲೆಟಿಕ್ ಕೋಚ್ ಶಿವಪ್ರಸಾದ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು, ರಾಕ್‌ಲೈನ್ ರವಿಕುಮಾರ್, ಪ್ರದೀಪ್, ಗುರುಪ್ರಸಾದ್, ಪ್ರಭಾಕರ್, ಅನಿಲ್, ಚೇತನ್ ಸೇರಿದಂತೆ ಹಲವರು ಹಾಜರಿದ್ದರು.

 

 

By admin