ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣಿಸದಂತೆ ಪರಿಸ್ಥಿತಿ ನಿಯಂತ್ರಣಕ್ಕೆ ಅಧಿಕಾರಿಗಳು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲೆಯಲ್ಲಿ ಕೋವಿಡ್-೧೯ ಸಂಬಂಧ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ ಮೈಮರೆಯುವಂತಿಲ್ಲ. ಕೋವಿಡ್ ಪರಿಸ್ಥಿತಿ ಸದ್ಯಕ್ಕೆ ಗಂಭೀರವಾಗಿಲ್ಲದಿದ್ದರೂ ದಿನೇ ದಿನೇ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಪ್ರತೀ ತಾಲೂಕುಗಳಲ್ಲಿಯೂ ಅತ್ಯಂತ ಸೂಕ್ಷ್ಮವಾಗಿ ಸೋಂಕು ನಿಯಂತ್ರಣಕ್ಕೆ ಗಮನಹರಿಸಬೇಕು. ಕೋವಿಡ್ ಹರಡದಂತೆ ವಹಿಸಬೇಕಿರುವ ಎಲ್ಲಾ ಕ್ರಮಗಳನ್ನು ಬಿಗಿಯಾಗಿ ಜಾರಿ ಮಾಡಬೇಕು ಎಂದರು.
ಸೋಂಕು ನಿಯಂತ್ರಣಕ್ಕೆ ಅಗತ್ಯವಾಗಿರುವ ಲಸಿಕೆ ನೀಡುವ ಕಾರ್ಯ ಶೇ.೧೦೦ರಷ್ಟು ಆಗಬೇಕು. ಅರ್ಹರೆಲ್ಲರು ಲಸಿಕೆ ಪಡೆಯುವಂತಾಗಬೇಕು. ಮಕ್ಕಳಿಗೆ ನೀಡುವ ಲಸಿಕಾಕರಣ ಸಹ ಅತ್ಯಂತ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಕೋವಿಡ್ ತಡೆಯುವಲ್ಲಿ ಪೂರಕವಾಗಿರುವ ಕ್ರಮಗಳು ಜಿಲ್ಲೆಯಲ್ಲಿ ಸಕಾರಾತ್ಮಕ ಬೆಳವಣಿಗೆಯಾಗಬೇಕು ಎಂದು ತಿಳಿಸಿದರು.
ಗಡಿ ಭಾಗಗಳ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕಾರ್ಯವಾಗಬೇಕು. ಸೋಂಕು ಹರಡದಂತೆ ತಡೆಯಬೇಕಿರುವ ಕ್ರಮಗಳಲ್ಲಿ ಯಾವುದೇ ಲೋಪವಾಗಬಾರದು. ಜವಾಬ್ದಾರಿಯುತವಾಗಿ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಸಚಿವರು ಸೂಚಿಸಿದರು.
ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಅಧಿಕಾರಿಗಳ ಜೊತೆ ಜನಪ್ರತಿನಿಧಿಗಳು ಸಹ ಕೈ ಜೋಡಿಸುತ್ತಿದ್ದಾರೆ. ಸರ್ಕಾರ ಸೋಂಕು ತಡೆಗೆ ಅವಶ್ಯವಿರುವ ಎಲ್ಲಾ ನೆರವು ನೀಡುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಹತೋಟಿಗೆ ತರುವ ಕಾರ್ಯದಲ್ಲಿ ಅಧಿಕಾರಿಗಳು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಕೋವಿಡ್ ಪ್ರಕರಣಗಳ ಹಿನ್ನಲೆಯಲ್ಲಿ ಶಾಲೆಗಳಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಹಲವು ಪೋಷಕರು ತಮ್ಮ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳು ವಸ್ತುಸ್ಥಿತಿ ಅವಲೋಕಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು.
ಶಾಸಕರಾದ ಆರ್. ನರೇಂದ್ರ ಅವರು ಮಾತನಾಡಿ ಕೋವಿಡ್ ಸೋಂಕಿತರಿಗೆ ನೀಡುವ ಚಿಕಿತ್ಸೆಯಲ್ಲಿ ಯಾವುದೇ ಕೊರತೆಯಾಗಬಾರದು. ತಮ್ಮ ಕ್ಷೇತ್ರ ವ್ಯಾಪ್ತಿಯ ಟಿಬೆಟಿಯನ್ ಸೆಟಲ್‌ಮೆಂಟ್ ಪ್ರದೇಶದಲ್ಲಿ ವಿದೇಶಕ್ಕೆ ಹೋಗಿ ಬರುವವರು ಕೂಡಲೇ ಕೋವಿಡ್ ಪರೀಕ್ಷೆಗೆ ಒಳಪಟ್ಟು ಕ್ವಾರೈಂಟೈನ್ ನಲ್ಲಿರಬೇಕು. ಹನೂರಿನಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕೋವಿಡ್ ಕೇರ್ ಕೇಂದ್ರ ತೆರೆಯಬೇಕು. ಪ್ರಕರಣಗಳು ಹೆಚ್ಚಳವಾದಲ್ಲಿ ರಾಮಾಪುರ, ಮಲೆಮಹದೇಶ್ವರ ಬೆಟ್ಟದಲ್ಲಿಯೂ ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯುವಂತಾಗಬೇಕು ಎಂದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗಳಿಗೆ ತೆರಳಲು ತಕ್ಷಣವೇ ಆಂಬ್ಯುಲೆನ್ಸ್ ವ್ಯವಸ್ಥೆಯಾಗಬೇಕು. ಈಗಾಗಲೇ ಶಾಸಕರ ಅನುದಾನವನ್ನು ಆಂಬ್ಯುಲೆನ್ಸ್ ಖರೀದಿಗೆ ನೀಡಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಎಂ.ಆರ್.ಐ ಸ್ಕ್ಯಾನ್, ಎಂಡೋಸ್ಕೋಪಿ, ಕಿಡ್ನಿ ಕಲ್ಲು ಚಿಕಿತ್ಸೆಗಳಿಗೆ ಅಗತ್ಯ ವೈದ್ಯಕೀಯ ಪರಿಕರಗಳ ವ್ಯವಸ್ಥೆ ಲಭ್ಯವಾಗಬೇಕು. ಇದರಿಂದ ರೋಗಿಗಳು ಜಿಲ್ಲಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ ಎಂದರು.
ಶಾಸಕರಾದ ಸಿ.ಎಸ್. ನಿರಂಜನ್‌ಕುಮಾರ್ ಅವರು ಮಾತನಾಡಿ ಶಾಲೆಗಳಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಶಾಲಾ ಮುಖ್ಯೋಪಾಧ್ಯಯರು ಹೆಚ್ಚಿನ ನಿಗಾ ವಹಿಸಬೇಕು. ಮಕ್ಕಳಿಗೆ ನೀಡುವ ಲಸಿಕೆ ಕಾರ್ಯವನ್ನು ವೇಗವಾಗಿ ಪೂರ್ಣಗೊಳಿಸಬೇಕು. ಮಕ್ಕಳಲ್ಲಿ ಕೋವಿಡ್ ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ಪರೀಕ್ಷೆಗೆ ಒಳಪಡಿಸಬೇಕು. ತಾಲೂಕುಗಳಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಈ ಹಿಂದೆ ಇದ್ದಂತೆ ಟಾಸ್ಕ್ ಪೋರ್ಸ್‌ಗಳು ಸಕ್ರಿಯವಾಗಿ ಇರಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ ಅವರು ಮಾತನಾಡಿ ಜಿಲ್ಲಾ ಕೇಂದ್ರದ ಆಸ್ಪತ್ರೆಯಂತೆ ತಾಲೂಕು ಆಸ್ಪತ್ರೆಗಳಿಗೂ ಹೆಚ್ಚಿನ ಸೌಲಭ್ಯ ಒದಗಿಸಿ. ಕೋವಿಡ್ ಕೇರ್ ಕೇಂದ್ರಗಳಿಗೆ ವೈದ್ಯರ ನಿಯೋಜನೆಯೂ ಸಮರ್ಪಕವಾಗಿ ಆಗಲಿ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನರ್ಸ್‌ಗಳ ನೇಮಕವೂ ಸರಿಯಾಗಿ ಆಗಬೇಕು. ಹೋಂ ಐಸೋಲೇಷನ್‌ನಲ್ಲಿ ಇರುವವರ ಬಗ್ಗೆಯೂ ಹೆಚ್ಚಿನ ಕಾಳಜಿವಹಿಸಿ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ನಗರದಲ್ಲಿ ಈಗಾಗಲೇ ಎರಡು ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಲ್ಲ. ತುರ್ತು ಚಿಕಿತ್ಸೆಗಳಿಗೆ ವೈದ್ಯರ ನಿಯೋಜನೆಗೆ ಕ್ರಮ ವಹಿಸಲಾಗಿದೆ. ಮುಂದಿನ ತಿಂಗಳು ಶಾಲೆಗಳಲ್ಲಿ ಪರೀಕ್ಷೆಗಳು ಆರಂಭವಾಗುವುದರಿಂದ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರು ಮಾತನಾಡಿ ಗಡಿ ಭಾಗದ ಚೆಕ್ ವಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ದೂರುಗಳಿಗೆ ಅವಕಾಶವಾಗದಂತೆ ಚೆಕ್‌ಪೋಸ್ಟ್ ಗಳಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿ ದೇವಿ,ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೆಶಕರಾದ ಸಂತೋಷ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಎಂ. ವಿಶ್ವೇಶ್ವರಯ್ಯ ಇತರೆ ಅಧಿಕಾರಿಗಳು ಹಾಜರಿದ್ದರು.
