ಚಾಮರಾಜನಗರ: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ ೪ರ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆಗಳಿಗೆ ನಿಗದಿಪಡಿಸಲಾದ ಅನುದಾನದಲ್ಲಿ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸೂಚಿಸಿದರು. 
ಬೆಂಗಳೂರಿನ ವಿಧಾನಸೌಧದಲ್ಲಿರುವ ಸಮಿತಿ ಸಭಾಂಗಣದಲ್ಲಿಂದು ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ ೪ರ ಯೋಜನೆಯಡಿ ಅನುದಾನ ಹಂಚಿಕೆಗೆ ಸಂಬಂಧಿಸಿದ ಕ್ರಿಯಾ ಯೋಜನೆ ಕುರಿತ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರೋತ್ಥಾನ ಯೋಜನೆಯಡಿ ರಸ್ತೆ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ದೀಪ, ಸೇರಿದಂತೆ ಇತರೆ ಮೂಲ ಸೌಕರ್ಯ ಅಭಿವೃದ್ದಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಂಡು ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು. 
ಯೋಜನೆಯಡಿ ಗುಣಮಟ್ಟದ ಕೆಲಸಗಳನ್ನು ನಿರ್ವಹಿಸಬೇಕು. ಯಾವುದೇ ಲೋಪಗಳಿಗೆ ಅವಕಾಶವಾಗಬಾರದು. ಜನರ ಅಗತ್ಯಕ್ಕೆ ಅನುಗುಣವಾಗಿ ಯೋಜನೆಯಡಿ ಕಾಮಗಾರಿ ನಿರ್ವಹಿಸಿ ಪ್ರಯೋಜನ ತಲುಪುವಂತೆ ನೋಡಿಕೊಳ್ಳಬೇಕೆಂದು ಸಚಿವರು ಸೂಚಿಸಿದರು. 
ಚಾಮರಾಜನಗರ, ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ಪುರಸಭೆ, ಹನೂರು, ಯಳಂದೂರಿನ ಪಟ್ಟಣ ಪಂಚಾಯಿತಿಗೆ ನಗರೋತ್ಥಾನದಡಿ ಕಾಮಗಾರಿ ನಿರ್ವಹಿಸಲು ಅನುದಾನ ಹಂಚಿಕೆ ಸಂಬಂಧ ವಿವರವಾಗಿ ಸಮಾಲೋಚಿಸಿದ ಸಚಿವರು ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎಲ್ಲಾ ಪ್ರದೇಶಗಳ ಅಭಿವೃದ್ದಿಯು ಆಗಬೇಕು. ಕೊಳಚೆ ಪ್ರದೇಶಗಳಿಗೂ ಸಹ ಅವಶ್ಯಕ ಸೌಕರ್ಯಗಳನ್ನು ಒದಗಿಸಿ ಅಭಿವೃದ್ದಿಗೆ ನೆರವಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ನಗರೋತ್ಥಾನ ಅನುದಾನ ಹೊರತುಪಡಿಸಿ ಜಿಲ್ಲೆಗೆ ಕೊಳಗೇರಿ ಅಬಿವೃದ್ದಿ ಮಂಡಲಿ ಅನುದಾನದಡಿ ಚಾಮರಾಜನಗರಕ್ಕೆ ೨ ಕೋಟಿ ರೂ, ಕೊಳ್ಳೇಗಾಲಕ್ಕೆ ೧.೫ ಕೋಟಿ ರೂ.  ಗುಂಡ್ಲುಪೇಟೆಗೆ ೧.೫ ಕೋಟಿ ರೂ, ಹನೂರಿಗೆ ೧ ಕೋಟಿ ರೂ, ಯಳಂದೂರಿಗೆ ೫೦ ಲಕ್ಷ ರೂ ಸೇರಿದಂತೆ ಒಟ್ಟು ೬.೫ ಕೋಟಿ ರೂ. ಗಳನ್ನು ಒದಗಿಸಲಾಗುತ್ತಿದೆ. ಈ ವಿಶೇಷ ಅನುದಾನವನ್ನು ಸಹ ಬಳಕೆ ಮಾಡಿಕೊಂಡು ಜನರಿಗೆ ಮೂಲ ಸೌಲಭ್ಯ ಅಭಿವೃದ್ದಿ ಕಾಮಗಾರಿಗಳನ್ನು ಅನುಷ್ಠಾನ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು. 
ಸಕಾಲ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವೀಕರಿಸಲಾಗಿರುವ ಅರ್ಜಿಗಳ ಕುರಿತು ಪರಾಮರ್ಶಿಸಿದ ಜಿಲ್ಲಾ ಉಸ್ತುವಾರಿ ಸಚಿವರು ನಿಯಮಾನುಸಾರ ಅರ್ಜಿಗಳ ವಿಲೇವಾರಿಯಾಗಬೇಕು. ಇನ್ನೂ ಮೂರು ದಿನಗಳೊಳಗೆ ಬಾಕಿ ಇರುವ ಅರ್ಜಿಗಳ ಬಗ್ಗೆ ತುರ್ತು ಗಮನಹರಿಸಿ ವಿಲೇವಾರಿ ಮಾಡಬೇಕು. ಈ ಕುರಿತ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. 
ಇ-ಸ್ವತ್ತು ಮಾಡಿಕೊಡುವ ಸಂಬಂಧ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಿ ಜನರ ಕುಂದು ಕೊರತೆಗಳನ್ನು ಆಲಿಸಿ ಅವರ ಕೆಲಸ ಕಾರ್ಯಗಳನ್ನು ತಕ್ಷಣವೇ ಮಾಡಿಕೊಡಬೇಕು. ಜಿಲ್ಲಾಧಿಕಾರಿಯವರು ಸ್ಥಳೀಯವಾಗಿ ಸಭೆ ನಡೆಸಿ ಇ-ಸ್ವತ್ತು ಇನ್ನಿತರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಗಬೇಕಿರುವ ಜನರ  ಕಾರ್ಯಗಳಿಗೆ ವೇಗ ನೀಡಬೇಕು.  ಅನಧಿಕೃತ ಬಡಾವಣೆಗಳು, ಇನ್ನಿತರ ಸಮಸ್ಯೆಗಳ ನಿವಾರಣೆಗಾಗಿ ತುರ್ತಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು. 
ಈಗಾಗಲೇ ಕೈಗೆತ್ತಿಕೊಂಡಿರುವ ಅಭಿವೃದ್ದಿ ಕಾಮಗಾರಿಗಳನ್ನು ಚುರುಕುಗೊಳಿಸಬೇಕು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ೪ ರಿಂದ ೫ ತಿಂಗಳೊಳಗೆ ಪೂರ್ಣಗೊಳಿಸಬೇಕು. ಆಯಾ ಭಾಗದ ಸ್ಥಳೀಯ ಜನಪ್ರತಿನಿಧಿಗಳು ಶಾಸಕರ ಗಮನಕ್ಕೆ ತಂದು ನಿಗದಿತ ಅವಧಿಯೊಳಗೆ ಅಭಿವೃದ್ದಿ ಕಾರ್ಯಗಳನ್ನು ಅನುಷ್ಠಾನ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ನಿರ್ದೇಶನ ನೀಡಿದರು. 
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರ, ಎನ್. ಮಹೇಶ್, ಸಿ.ಎಸ್. ನಿರಂಜನ್‌ಕುಮಾರ್, ಚಾಮರಾಜನಗರ ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ, ಕೊಳ್ಳೇಗಾಲ ನಗರಸಭೆ ಅಧ್ಯಕ್ಷರಾದ ಸುಶೀಲ, ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷರಾದ ಆರ್. ಗಿರೀಶ್, ಯಳಂದೂರು ಪಟ್ಣಣ ಪಂಚಾಯಿತಿ ಅಧ್ಯಕ್ಷರಾದ ಆರ್. ಪ್ರಭಾವತಿ, ಹನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಚಂದ್ರಮ್ಮ, ಜಿಲ್ಲಾಧಿಕಾರಿಯವರಾದ ಕೆ.ಎಂ. ಗಾಯತ್ರಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಕಾರ್ಯಪಾಲಕ ಎಂಜಿನಿಯರ್ ಟಿ.ಕೆ. ವರದರಾಜು, ನಗರಸಭೆ ಪೌರಾಯುಕ್ತರಾದ ಕರಿಬಸವಯ್ಯ, ಎಸ್. ನಂಜುಂಡಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಆರ್. ಹೇಮಂತರಾಜು, ಪಟ್ಣಣ ಪಂಚಾಯಿತಿಯ ಮುಖ್ಯಾಧಿಕಾರಿ ಮಲ್ಲೇಶ್, ಪರಶಿವಯ್ಯ, ಜಿಲ್ಲಾ ನಗರಾಭಿವೃದ್ದಿ ಕೋಶದ ವ್ಯವಸ್ಥಾಪಕರಾದ ವೈ. ಗಿರಿರಾಜ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.