* ಶಿವಕುಮಾರ ಮಾಹಾಸ್ವಾಮೀಜಿಗಳ ಗದ್ದುಗೆಗೆ ಭೇಟಿ, ಪೂಜೆ
* ನಾವು ಎಸ್ ಬಿಎಂ ಒಂದೇ, ಬೇರೆ ಅಲ್ಲ; ಸಚಿವ ಎಸ್ ಟಿ ಎಸ್
ತುಮಕೂರು: ಸಹಕಾರ ಸಚಿವರಾದ ಶ್ರೀ ಎಸ್.ಟಿ.ಸೋಮಶೇಖರ್ ಅವರು ಹಾಗೂ ಮಾನ್ಯ ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ. ಬಸವರಾಜು ಅವರು ಸೋಮವಾರ ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಬಳಿಕ ಸಚಿಬದ್ವಯರು ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಮಾಹಾಸ್ವಾಮೀಜಿಗಳ ಗದ್ದುಗೆಗೆ ಭೇಟಿ ನೀಡಿ ಪೂಜೆ ನೆರವೇರಿಸಿದರು.
ನಾವು ಎಸ್ ಬಿಎಂ ಒಂದೇ, ಬೇರೆ ಅಲ್ಲ
ಶಾಸಕರಾದ ಮುನಿರತ್ನ ಹಾಗೂ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವು ಎಸ್ ಬಿಎಂ ಒಂದೇ ಆಗಿದ್ದೇವೆ. ನಾವು ಬೇರೆ ಅಲ್ಲ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಆಗ ನಡೆದ ಚುನಾವಣೆಯಲ್ಲಿ ನಾನು, ಬಿ.ಎ. ಬಸವರಾಜು ಅವರು ಗೆದ್ದು ಮಂತ್ರಿ ಆಗಿದ್ದೇವೆ. ಆಗ ಎಸ್ ಬಿ ಎಂದು ಕರೆಯಲ್ಪಟ್ಟೆವು. ಮುನಿರತ್ನ ಅವರು ಮಂತ್ರಿಯಾದಾಗ ಮತ್ತೆ ಎಸ್ ಬಿಎಂ ಎಂದು ನೀವೇ ಹೇಳುತ್ತೀರ ಎಂದು ಮಾಧ್ಯಮದವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಅವರು ಕೊಟ್ಟ ಮಾತಿಗೆ ಎಂದೂ ತಪ್ಪಿಲ್ಲ. ಮಾತು ಕೊಟ್ಟಂತೆ ಸೋತವರಿಗೂ ಸಹ ಮಂತ್ರಿ ಸ್ಥಾನವನ್ನು ಕೊಟ್ಟವರು ಅವರು. ಹೀಗಾಗಿ ಮುಖ್ಯಮಂತ್ರಿಗಳೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಆರ್. ಶಂಕರ್, ಎಂಟಿಬಿ ನಾಗರಾಜ್, ಮುನಿರತ್ನ ಸೇರಿದಂತೆ ಐವರು ಸಚಿವ ಸ್ಥಾನದ ಆಕಾಂಕ್ಷಿತರಿದ್ದಾರೆ. ಹೀಗಾಗಿ ಪಕ್ಷದ ಎಲ್ಲರಿಗೂ ಸೂಕ್ತ ಸಂದರ್ಭದಲ್ಲಿ ಸ್ಥಾನ ನೀಡಬೇಕು. ಪಕ್ಷದಲ್ಲಿ ಮೊದಲಿನಿಂದಲೂ ದುಡಿದವರು ಸಹ ಇದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಅವರು ಮಾತನಾಡಿರಬಹುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
67ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ದಾವಣಗೆರೆಯಲ್ಲಿ ನೆರವೇರಿಸಿದ್ದೇವೆ. ಒಟ್ಟು 7 ದಿನ ಕಾರ್ಯಕ್ರಮವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಹಮ್ಮಿಕೊಂಡಿದ್ದೇವೆ. ಈಗಾಗಲೇ ಬೆಂಗಳೂರು, ಮಂಗಳೂರು ಹಾಗೂ ದಾವಣಗೆರೆಯಲ್ಲಿ ಕಾರ್ಯಕ್ರಮ ನಡೆದಿದ್ದು, ನಾಳೆ ಚಿಕ್ಕಬಳ್ಳಾಪುರದಲ್ಲಿದೆ ಎಂದ ಸಚಿವರು, ನಾನು ಈ ಮಾರ್ಗವಾಗಿ ಸಂಚರಿಸುವಾಗೆಲ್ಲ ತುಮಕೂರು ಶ್ರೀಮಠಕ್ಕೆ ಭೇಟಿ ನೀಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದೇನೆ ಎಂದು ತಿಳಿಸಿದರು.
ಈ ವೇಳೆ ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜು ಇದ್ದರು.