
ಚಾಮರಾಜನಗರ: ಮಲೆಯೂರಿನ ಶ್ರೀ ಕ್ಷೇತ್ರ ಕನಕಗಿರಿಯಲ್ಲಿ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಧ್ಯಾನ ಮಂದಿರ, ನಿರೀಕ್ಷಣಾಲಯ, ಬಸ್ ಶೆಲ್ಟರ್ ಹಾಗೂ ಪ್ರವಾಸಿ ಸೌಲಭ್ಯ ಕೇಂದ್ರ ಕಟ್ಟಡಗಳ ಉದ್ಘಾಟನೆ ನೆರವೇರಿಸಿದರು.
ಚಾಮರಾಜನಗರ ತಾಲೂಕು ಮಲೆಯೂರು ಗ್ರಾಮದ ಶ್ರೀಕ್ಷೇತ್ರ ಕನಕಗಿರಿಯಲ್ಲಿಂದು ನಡೆದ ಅತಿಶಯ ಮಹೋತ್ಸವ ಸಮಾರಂಭದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ೨೦೧೫-೧೬ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಡಿ ನಿರ್ಮಿಸಲಾಗಿರುವ ವಿವಿಧ ಸೌಲಭ್ಯಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಜನರ ಸೇವೆಗೆ ಸಮರ್ಪಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ವಿಶ್ವದ ಭೂಪಟದಲ್ಲಿ ಭಾರತೀಯ ಪರಂಪರೆ, ಸಾರ್ವಭೌಮತೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ ಶ್ರೀಕ್ಷೇತ್ರಗಳಲ್ಲಿ ೬೬೦ ವರ್ಷಗಳಷ್ಟು ಪ್ರಾಚೀನವಾದ ಕನಕಗಿರಿಯು ಒಂದಾಗಿದೆ. ಕನಕಗಿರಿಯು ಜೈನರಿಗೆ ಮಾತ್ರ ಸೀಮಿತವಲ್ಲ. ಪ್ರತಿಯೊಬ್ಬರಿಗೂ ಉತ್ತಮ ಜೀವನ ಸಂದೇಶ ನೀಡುವಲ್ಲಿ ಶ್ರೀಕ್ಷೇತ್ರ ಪ್ರಮುಖಪಾತ್ರ ವಹಿಸಲಿದೆ ಎಂದರು.
ಈ ಭಾಗದ ಪವಿತ್ರ ಕ್ಷೇತ್ರಗಳಾದ ಮಲೆಮಹದೇಶ್ವರ, ಬಿಳಿಗಿರಿ ರಂಗನಾಥಸ್ವಾಮಿ, ಹಿಮವರ್ ಗೋಪಾಲಸ್ವಾಮಿ ಕ್ಷೇತ್ರಗಳಂತೆ ಕನಕಗಿರಿಯೂ ಸಹ ಪುಣ್ಯಕ್ಷೇತ್ರವಾಗಿ ಜನರಿಗೆ ಅಸರೆಯಾಗಿ ನೆಲೆ ನಿಲ್ಲಲಿದೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿಯಲ್ಲಿ ಕನಕಗಿರಿ ಶ್ರೀಕ್ಷೇತ್ರಕ್ಕೂ ಆದ್ಯತೆ ನೀಡಬೇಕಾಗಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಮಾದರಿಯಲ್ಲಿ ಸರ್ಕಾರವು ಈ ಭಾಗದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಿದೆ. ಭಾರತದ ಇತಿಹಾಸ, ಪರಂಪರೆ, ನಡೆದು ಬಂದ ಹಾದಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಕನಕಗಿರಿ ಕ್ಷೇತ್ರ ನೆರವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಚಾಮರಾಜನಗರ ಜಿಲ್ಲೆ ಭೌಗೊಳಿಕವಾಗಿ ಶೇ. ೪೮ರಷ್ಟು ಅರಣ್ಯ ಭೂಪ್ರದೇಶ ಹೊಂದಿದೆ. ಈ ಪೈಕಿ ಶೇ. ೨೭ರಷ್ಟು ಸಾಗುವಳಿ ಪ್ರದೇಶದಲ್ಲಿ ಕೃಷಿಯಲ್ಲಿ ತೊಡಗಿರುವ ಸಾಕಷ್ಟು ಜನರು ಮಳೆಯನ್ನೇ ಅವಲಂಬಿಸಿ ಸಂಕಷ್ಟದಲ್ಲಿದ್ದಾರೆ. ಇದಕ್ಕೆ ಪರಿಹಾರವಾಗಿ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ಯೋಜನೆ ಕಾರ್ಯಗತಗೊಳಿಸಲಾಗಿದೆ. ಸರ್ಕಾರವು ಕೆರೆ ತುಂಬಿಸುವುದು ಹಾಗೂ ಕೃಷಿಗೆ ಆದ್ಯತೆಯಂತಹ ಪ್ರಗತಿಪರ ಚಿಂತನೆಗಳ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಲು ಉದ್ದೇಶಿಸಿದೆ ಎಂದು ಸಚಿವರು ತಿಳಿಸಿದರು.
ಕೈಗಾರಿಕೆ ಅಭಿವೃದ್ಧಿಗಾಗಿ ೧ ಸಾವಿರ ಎಕ್ಟೇರ್ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ಆದ್ಯತೆ ನೀಡಿದ್ದು, ಇದರಿಂದ ಜಿಲ್ಲೆಯಲ್ಲಿ ಸಾವಿರಾರು ಜನರಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಠಿಯಾಗಲಿವೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿಗೆ ಅವಕಾಶವಿಲ್ಲ. ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ವೇಗವನ್ನು ದ್ವಿಗುಣಗೊಳಿಸಿ ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆಯನ್ನಾಗಿಸಲು ಬದ್ಧರಾಗಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸೋಮಣ್ಣ ಅವರು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಧರ್ಮಸ್ಥಳದ ರಾಜಶ್ರೀ ಪದ್ಮಭೂಷಣ ವಿರೇಂದ್ರ ಹೆಗ್ಗಡೆ ಅವರು ಮಾತನಾಡಿ ಸರ್ಕಾರವು ಜೈನ ಸಮಾಜದ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದೆ. ಜೈನರು ಅಲ್ಪಸಂಖ್ಯಾತರಾಗಿದ್ದರೂ ಸಹ ಸಮಾಜದಲ್ಲಿ ಯಾರು ಅಲ್ಪರಲ್ಲ. ನಾವೆಲ್ಲರೂ ಸಂಘಟಿತರಾಗಿದ್ದೇವೆ, ಎಲ್ಲಾ ಸಮಾಜಗಳ ಜೊತೆಗಿದ್ದೇವೆ. ನಮ್ಮಲ್ಲಿ ಸ್ವಾಭಿಮಾನ, ಆತ್ಮಾಭಿಮಾನ ಹೆಚ್ಚಾಗಬೇಕು. ಶ್ರೀಕ್ಷೇತ್ರವು ಅನೇಕ ವಿಚಾರಗಳಿಂದ ಪ್ರಸಿದ್ಧವಾಗುತ್ತಿದೆ. ಕ್ಷೇತ್ರ ಎಂದರೆ ಸಾನಿಧ್ಯವಿರಬೇಕು. ಸಾಮಾಜಿಕತೆ, ಸಾಂಸಾರಿಕತೆ ಹಾಗೂ ವ್ಯವಹಾರಿಕ ದೋಷ ಪರಿಹಾರಕ್ಕೆ ಅವಕಾಶವಿರಬೇಕು. ಮನುಷ್ಯ ನೆಮ್ಮದಿಯುತ ಜೀವನ ನಡೆಸಲು ಇದು ಸಹಕಾರಿಯಾಗಲಿದೆ ಎಂದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಪ್ರಮುಖ ಪ್ರವಾಸೀ ತಾಣವಾಗಿರುವ ಶ್ರೀಕ್ಷೇತ್ರ ಕನಕಗಿರಿ ಪವಿತ್ರ ಕ್ಷೇತ್ರವಾಗಿಯೂ ಗುರುತಿಸಿಕೊಂಡಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ವಿಫುಲ ಅವಕಾಶಗಳಿದ್ದು, ಕನಕಗಿರಿ ಕ್ಷೇತ್ರವನ್ನು ಅಭಿವೃದ್ಧಿಗೆ ಪರಿಗಣಿಸಿ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಎಸ್. ನಿರಂಜನ್‌ಕುಮಾರ್ ಅವರು ಮಾತನಾಡಿ ಇತ್ತೀಚೆಗೆ ಸಾಕಷ್ಟು ಅಭಿವೃದ್ಧಿ ಹೊಂದಿರುವ ಶ್ರೀಕ್ಷೇತ್ರಕ್ಕೆ ಹೊರರಾಜ್ಯ, ಜಿಲ್ಲೆಗಳಿಂದ ಹೆಚ್ಚಿನ ಸಾರ್ವಜನಿಕ ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ಸರ್ಪದೋಷ, ಅಶ್ಲೇಷಾ ಸೇರಿದಂತೆ ವಿವಿಧ ದೋಷ ಪರಿಹಾರಕ್ಕಾಗಿ ಕ್ಷೇತ್ರಕ್ಕೆ ಆಗಮಿಸುವ ಯಾವುದೇ ಜನರಿಗೂ ಪ್ರಸಾದ ನೀಡಿ ಕಳುಹಿಸಿಕೊಡುವ ಉತ್ತಮ ಸಂಪ್ರದಾಯವಿದೆ ಕನಕಗಿರಿಯಲ್ಲಿ ಎಂದು ತಿಳಿಸಿದರು.
ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್‌ಸಿಂಗ್ ಅವರು ಸಮಾರಂಭದ ಜ್ಯೋತಿ ಬೆಳಗಿಸಿದರು. ಶ್ರೀಕ್ಷೇತ್ರ ಕನಕಗಿರಿಯ ಭುವನಕೀರ್ತಿ ಭಟ್ಟಾಕರ ಭಟ್ಟಾಚಾರ್ಯ ಮಹಾಸ್ವಾಮಿಗಳು ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮುಖಂಡರಾದ ಬಿ.ಎಲ್. ಸಂತೋಷ್, ಲಲೀತಕೀರ್ತಿ ಭಟ್ಟಾರಕ ಸ್ವಾಮಿ, ಧವಳಕೀರ್ತಿ ಭಟ್ಟಾರಕ ಸ್ವಾಮಿ, ಮೂಡಬಿದಿರಿಯ ಚಾರುಕೀರ್ತಿ ಭಟ್ಟಾರಕ ಸ್ವಾಮಿ, ಶಾಸಕರಾದ ಎನ್. ಮಹೇಶ್, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ, ಮಲೆಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪುಟ್ಟಸ್ವಾಮಿ, ಮಾಜಿ ಸಚಿವರಾದ ಸಿ.ಎಚ್. ವಿಜಯಶಂಕರ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜು, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ ಇತರರು ಸಮಾರಂಭದಲ್ಲಿ ಇದ್ದರು.
ಕಾರ್ಯಕ್ರಮದಲ್ಲಿ ಜೈನ ಸಾಹಿತ್ಯದ ಜೈನೇಂದ್ರ ವ್ಯಾಕರಣ ಕೋಶ, ಜೈನೇಂದ್ರ ಸುದಾಂತ ಕೋಶ ಹಾಗೂ ಜೈನೇಂದ್ರ ಸಿದ್ದಾಂತ ಕೋಶ ಕೃತಿಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಕೃತಿಗಳನ್ನು ರಚಿಸಿದ ಕೌಶಲ್ಯ ಧರಣೇಂದ್ರ ಹಾಗೂ ಸರಸ್ವತಿ ವಿಜಯಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು. ಅಲ್ಲದೇ ಶ್ರೀ ಕ್ಷೇತ್ರ ಕನಕಗಿರಿಯ ಭುವನಕೀರ್ತಿ ಭಟ್ಟಾಕರ ಭಟ್ಟಾಚಾರ್ಯ ಮಹಾಸ್ವಾಮಿ ಮತ್ತು ಧರ್ಮಸ್ಥಳದ ರಾಜಶ್ರೀ ವಿರೇಂದ್ರ ಹೆಗ್ಗಡೆ ಅವರುಗಳನ್ನು ಸರ್ಕಾರದ ವತಿಯಿಂದ ಗೌರವಿಸಲಾಯಿತು.
