ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ವಸತಿ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಭೇಟಿ ನೀಡಿ ಭಕ್ತಾದಿಗಳಿಗೆ ಮತ್ತಷ್ಟು ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಸ್ಥಳ ಪರಿಶೀಲನೆ ನಡೆಸಿದರು. ಕ್ಷೇತ್ರದಲ್ಲಿ ಪ್ರಸ್ತುತ ಕಲ್ಪಿಸಿರುವ ಸೌಕರ್ಯಗಳ ಕುರಿತು ಪರಿವೀಕ್ಷಣೆ ಮಾಡಿದರು. 
ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ವಿಶಾಲ ಹಾಗೂ ಸುವ್ಯವಸ್ಥಿತವಾದ ದಾಸೋಹ ಭವನ ನಿರ್ಮಾಣಕ್ಕಾಗಿ ಸ್ಥಳ ಪರಿಶೀಲನೆ ನಡೆಸಿದರು. ಪ್ರಸ್ತುತ ಇರುವ ದಾಸೋಹ ಭವನಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲಿನ ವ್ಯವಸ್ಥೆಗಳನ್ನು ವೀಕ್ಷಿಸಿದರು. ಪ್ರಸಾದ ವಿತರಣೆ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಈಗಿನ ದಾಸೋಹ ಭವನಕ್ಕೆ ಅಗತ್ಯವಿರುವ ದುರಸ್ತಿ ಕೆಲಸವನ್ನು ಕೈಗೊಳ್ಳುವಂತೆ ಸೂಚಿಸಿದರು.
ಕ್ಷೇತ್ರದಲ್ಲಿ ಕೈಗೆತ್ತಿಕೊಂಡಿರುವ ಒಳಚರಂಡಿ ಕಾಮಗಾರಿ, ಒಳಚರಂಡಿ ನೀರು ಸಂಸ್ಕರಣಾ ಘಟಕ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಕಾಮಗಾರಿ ವಿಳಂಬವಾಗಿ ನಿರ್ವಹಿಸುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಸಾಕಷ್ಟು ಸಮಯದ ಹಿಂದೆಯೇ ಯೋಜನೆ ಆರಂಭವಾಗಿದ್ದರೂ ಇನ್ನು ಪೂರ್ಣಗೊಂಡಿಲ್ಲ. ಇನ್ನೆಷ್ಡು ಸಮಯ ಬೇಕು? ಶೀಘ್ರ ಕಾಮಗಾರಿ ಪೂರೈಸಿ ಎಂದು ಸಚಿವರು ತಾಕೀತು ಮಾಡಿದರು.
ಬಳಿಕ ಈ ಹಿಂದಿನ ಅಂತರಗಂಗೆ ಸ್ಥಳ ವೀಕ್ಷಿಸಿದ ಸಚಿವರು  ಅಲ್ಲಿ  ಶುಚಿತ್ವ ಇಲ್ಲದಿರುವುದನ್ನು ಕಂಡು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.  ನೀರು ಶುದ್ಧವಾಗಿಲ್ಲದಿರುವುದು ಹಾಗೂ ಒಂದೆಡೆ ನೀರು ನಿಂತಿರುವುದನ್ನು ಗಮನಿಸಿದ ಸಚಿವರು ಈ ಬಗೆಯ ನಿರ್ಲಕ್ಷ್ಯ ಸಹಿಸುವುದಿಲ್ಲ. ಕೂಡಲೇ ಸ್ವಚ್ಚತೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹೊಸದಾಗಿ ನಿರ್ಮಾಣಗೊಂಡು ಬಳಕೆಯಲ್ಲಿರುವ ಕಲ್ಯಾಣಿಗೆ ಭೇಟಿ ನೀಡಿ ಅಲ್ಲಿಯೂ ಕೆಲ ಬದಲಾವಣೆಗಳನ್ನು ಮಾಡುವಂತೆ ನಿರ್ದೇಶನ ನೀಡಿದರು. ನೀರು ಶುದ್ಧೀಕರಣ ಕಾರ್ಯ ಸಮರ್ಪಕವಾಗಿ ಆಗಬೇಕು. ಶುದ್ಧ ನೀರು ಪೂರೈಕೆಗೆ ಅಗತ್ಯವಿರುವ ನೂತನ ತಂತ್ರಜ್ಞಾನ ಅಳವಡಿಕೆಗೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ಇದಕ್ಕೆ ತುರ್ತುಕ್ರಮ ಆಗಬೇಕು. ಮತ್ತೊಂದು ಕಲ್ಯಾಣಿಯನ್ನು ಭಕ್ತಾದಿಗಳಿಗೆ ಕಲ್ಪಿಸುವ ನಿಟ್ಟಿನಲ್ಲಿ ಪರಿಶೀಲನೆ ಮಾಡುವಂತೆ ತಿಳಿಸಿದರು.

ಹೆಲಿಪ್ಯಾಡ್‌ಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು ಮತ್ತೊಂದು ಹೆಲಿಪ್ಯಾಡ್ ನಿರ್ಮಾಣ ಆಗಬೇಕಿದೆ. ಈ ಸಂಬಂಧ ಸೂಕ್ತ ಯೋಜನೆಗೆ ರೂಪುರೇಷೆ ಸಿದ್ದಪಡಿಸಬೇಕಿದೆ ಎಂದರು. ಭಕ್ತಾದಿಗಳ ವಿಶಾಲ ತಂಗುದಾಣ ಪ್ರದೇಶವನ್ನು ವೀಕ್ಷಿಸಿದ ವೇಳೆ ನೈರ್ಮಲ್ಯ ಇಲ್ಲದಿರುವುದನ್ನು ಗಮನಿಸಿದ ಸಚಿವರು ಶುಚಿತ್ವ ಕೆಲಸಗಳಿಗೆ ಹೆಚ್ಚು ಗಮನ ಹರಿಸಬೇಕು ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗಬಾರದು ಎಂದು ತಾಕೀತು ಮಾಡಿದರು. 
ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು ಮಲೆ ಮಹದೇಶ್ವರ ಕ್ಷೇತ್ರಕ್ಕೆ ತನ್ನದೇ ಆದ ದೊಡ್ಡ ಇತಿಹಾಸವಿದೆ. ಎಲ್ಲೆಡೆಯಿಂದ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಕೆಲವೊಮ್ಮೆ ಲಕ್ಷಾಂತರ ಜನರು ಒಮ್ಮೆಲೇ ಬರುತ್ತಾರೆ. ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಪ್ರಾಧಿಕಾರದಿಂದ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಒತ್ತು ನೀಡಲಾಗಿದೆ. ಮತ್ತೆ ಕ್ಷೇತ್ರಕ್ಕೆ ಭೇಟಿ ನೀಡಿ ಸೌಕರ್ಯಗಳನ್ನು ಒದಗಿಸುವ ಸಂಬಂಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.

ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಉಪಕಾರ್ಯದರ್ಶಿ ಬಸವರಾಜು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸದಾಶಿವಮೂರ್ತಿ, ಒಳಚರಂಡಿ ನಿರ್ಮಾಣ ಮಂಡಳಿಯ ಸಹಾಯಕ ಎಂಜಿನಿಯರ್ ಉಮೇಶ್ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು. ಬಳಿಕ ಕೊಳ್ಳೇಗಾಲ ಪಟ್ಟಣಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಕಚೇರಿ ಆವರಣದಲ್ಲಿ ಐ.ಎಫ್.ಎಸ್. ಅಧಿಕಾರಿ ದಿವಂಗತ ಪಿ. ಶ್ರೀನಿವಾಸ್ ಅವರ ಹೆಸರಿನಲ್ಲಿ ಉನ್ನತೀಕರಿಸಿರುವ ಅರಣ್ಯ ಇಲಾಖೆಯ ಅರಣ್ಯ ಅತಿಥಿಗೃಹ ಉಧ್ಘಾಟಿಸಿದರು. ಶ್ರೀನಿವಾಸ್ ಅವರು ಎಸ್.ಟಿ.ಎಫ್. ಕಾರ್ಯಾಚರಣೆಯಲ್ಲಿ ಉಪಯೋಗಿಸುತ್ತಿದ್ದ ಇಲಾಖಾ ವಾಹನದ ಪ್ರದರ್ಶನ ಹಾಗೂ ಛಾಯಾಚಿತ್ರ ಇನ್ನಿತರ ವಸ್ತುಗಳ ಸಂಗ್ರಹಗಾರಕ್ಕೆ ಚಾಲನೆ ನೀಡಿದರು. ಶಾಸಕರಾದ ಎನ್. ಮಹೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾದೇಶಿಕ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಡಾ. ಸಂತೋಷ್ ಕುಮಾರ್, ವನ್ಯಜೀವಿ ಮಂಡಳಿ ಸದಸ್ಯರಾದ ಮಲ್ಲೇಶಪ್ಪ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಏಳುಕೊಂಡಲು ಇನ್ನಿತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.