
ಚಾಮರಾಜನಗರ: ಯಳಂದೂರು ತಾಲೂಕಿನ ಪ್ರಸಿದ್ದ ಯಾತ್ರಾ ಕ್ಷೇತ್ರ ಬಿಳಿಗಿರಿರಂಗನಬೆಟ್ಟಕ್ಕೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಇಂದು ಭೇಟಿ ನೀಡಿ ಬಿಳಿಗಿರಿರಂಗನಾಥಸ್ವಾಮಿ ರಥೋತ್ಸವ, ಜಾತ್ರಾ ಮಹೋತ್ಸವದ ಸಿದ್ದತೆಗಳನ್ನು ಪರಿಶೀಲಿಸಿದರು. ದೇವಾಲಯದ ಆವರಣದಲ್ಲಿ ಪ್ರಗತಿಯಲ್ಲಿರುವ ನೆಲಹಾಸು ಕಾಮಗಾರಿಯನ್ನು ವೀಕ್ಷಿಸಿದ ಸಚಿವರು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು. ಉದ್ದೇಶಿತ ಮೆಟ್ಟಿಲುಗಳ ನಿರ್ಮಾಣ ಕಾಮಗಾರಿ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಶಾಸಕರಾದ ಎನ್ ಮಹೇಶ್ ಅವರೊಂದಿಗೆ ಮೆಟ್ಟಿಲುಗಳ ನಿರ್ಮಾಣ ಸಂಬಂಧ ಮಾಹಿತಿ ಪಡೆದ ಸಚಿವರು, ಇದೇ ವೇಳೆ ಭಕ್ತರ ಭಾವನೆಗಳಿಗೆ ಗೌರವಿಸಿ ಉತ್ತಮವಾಗಿ ಮೆಟ್ಟಿಲುಗಳ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ದೇವಾಲಯಕ್ಕೆ ಭೇಟಿ ನೀಡಿದ ಸಚಿವರು ದೇವರ ದರ್ಶನ ಪಡೆದರು. ಬಳಿಕ ಬಿಳಿಗಿರಿರಂಗನಬೆಟ್ಟದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ರಥೋತ್ಸವ, ಜಾತ್ರಾ ಸಿದ್ದತೆಗಳ ಸಂಬಂಧ ಸಭೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಮಾತನಾಡಿ ೬ ವರ್ಷಗಳ ಬಳಿಕ ಇದೇ ಏಪ್ರಿಲ್ ೧೬ರಂದು ರಥೋತ್ಸವ ನಡೆಯುತ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಕುಡಿಯುವ ನೀರು, ಶೌಚಾಲಯ, ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ವ್ಯವಸ್ಥೆ ಸೇರಿದಂತೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಬಿಳಿಗಿರಿರಂಗನಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ರೂಪಿಸಲಾಗಿರುವ ಯೋಜನೆಗೆ ಅಗತ್ಯ ಅನುದಾನ ಒದಗಿಸಲಾಗುವುದು. ಯಾವುದೇ ಕಾರಣಕ್ಕೂ ನೀರಿನ ಕೊರತೆ ಕಾಡದಂತೆ ಅಗತ್ಯವಿರುವ ಕಾಮಗಾರಿಯನ್ನು ತುರ್ತಾಗಿ ಕೈಗೊಂಡು ಪೂರ್ಣಗೊಳಿಸುವಂತೆ ಸಚಿವರು ತಿಳಿಸಿದರು. ಇದೇ ವೇಳೆ ಮಾತನಾಡಿದ ಶಾಸಕರಾದ ಎನ್. ಮಹೇಶ್ ಅವರು ಯಳಂದೂರಿನಿಂದ ಬಿಳಿಗಿರಿರಂಗನಬೆಟ್ಟಕ್ಕೆ ರಸ್ತೆ ಅಭಿವೃದ್ದಿ ಪಡಿಸಲು ೪ ಕೋಟಿ ರೂ ಅನ್ನು ಜಿಲ್ಲಾ ಉಸ್ತುವಾರಿ ಸಚಿವರು ಒಂದೇ ದಿನದಲ್ಲಿ ಮಂಜೂರು ಮಾಡಿಸಿದ್ದಾರೆ. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ರಥೋತ್ಸವ ದಿನದಂದು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಖಾಸಗಿ ವಾಹನದಲ್ಲಿ ಬರುವ ಭಕ್ತಾದಿಗಳಿಗೆ ಬೆಟ್ಟದ ಕೆಳ ಭಾಗದಲ್ಲಿಯೇ ನಿಲುಗಡೆಗೆ ಅವಕಾಶ ನೀಡಿ ಅಲ್ಲಿಂದ ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಬೆಟ್ಟಕ್ಕೆ ಹೋಗಿ ಬರಲು ವ್ಯವಸ್ಥೆ ಮಾಡಬಹುದೆಂಬ ಸಲಹೆ ವ್ಯಕ್ತವಾಯಿತು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಭೆಯಲ್ಲಿಯೇ ಮಾತನಾಡಿ ಕೆಎಸ್‌ಆರ್‌ಟಿಸಿ ಬಸ್ಸುಗಳ ವ್ಯವಸ್ಥೆಗೆ ಸೂಕ್ತ ಏರ್ಪಾಡು ಮಾಡುವಂತೆ ಸೂಚಿಸಿದರು.

ರಥೋತ್ಸವ, ಜಾತ್ರಾ ಮಹೋತ್ಸವಕ್ಕೆ ಆಗಬಹುದಾದ ಖರ್ಚು ವೆಚ್ಚಗಳ ಬಗ್ಗೆ ಸಮಾಲೋಚಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಮುಜರಾಯಿ ಸಚಿವರಿಗೆ ದೂರವಾಣಿ ಮೂಲಕ ಮಾತನಾಡಿ ರಥೋತ್ಸವ ಸಂಬಂಧಿ ವೆಚ್ಚಗಳಿಗೆ ೨೫ ಲಕ್ಷ ರೂ ನೀಡುವಂತೆ ಮನವಿ ಮಾಡಿದರು.
ದೇವಾಲಯ ಹಾಗೂ ಕ್ಷೇತ್ರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಮುಖೇನ ಸಚಿವರು ನಿರ್ದೇಶನ ನೀಡಿದರು. ದೇವಾಲಯ ಆವರಣದಲ್ಲಿ ಕೈಗೆತ್ತಿಕೊಂಡಿರುವ ನೆಲಹಾಸು ಕಾಮಗಾರಿಯನ್ನು ಏಪ್ರಿಲ್ ೧೦ರ ವೇಳೆಗೆ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಜಾತ್ರಾ ಸಂದರ್ಭದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್, ವೈದ್ಯರ ನಿಯೋಜನೆ, ಅಗ್ನಿಶಾಮಕ ಸಿಬ್ಬಂದಿ ನೇಮಕ, ಬೀದಿದೀಪ, ಸ್ವಚ್ಚತೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳಿಗೆ ತುರ್ತಾಗಿ ಕಾರ್ಯೋನ್ಮುಖರಾಗುವ ಮೂಲಕ ವಿಜೃಂಭಣೆಯಿಂದ ಜಾತ್ರೆ ನಡೆಯಲು ಸಕಲ ಏರ್ಪಾಡು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸೂಚನೆ ನೀಡಿದರು. ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಎಂ. ರಾಮಚಂದ್ರ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾ ಅಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್, ಬಿ.ಆರ್.ಟಿ ಹುಲಿ ಸಂರಕ್ಷಣಾ ವಿಭಾಗದ ನಿರ್ದೇಶಕರಾದ ಡಾ. ಸಂತೋಷ್ ಕುಮಾರ್, ಉಪ ವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಾಣಧಿಕಾರಿ ಶ್ರೀನಿವಾಸ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಮೋಹನ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
