ಚಾಮರಾಜನಗರ: ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುವವರೆಗೆ ಜಿಲ್ಲೆಯಲ್ಲಿರುವ ಎಲ್ಲಾ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ವಸತಿ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿಯಲ್ಲಿ ಕ್ವಾರಿ ಗುಡ್ಡ ಕುಸಿತ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಬಳಿಕ ಗುಂಡ್ಲುಪೇಟೆ ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಚಿವರು ಈ ವಿಷಯ ತಿಳಿಸಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲ ಕಲ್ಲು ಗಣಿಗಳ ಪರಿಶೀಲನೆಗಾಗಿ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಈ ತಂಡ ನಾಳೆಯಿಂದಲೇ ಜಿಲ್ಲೆಯಲ್ಲಿರುವ ಎಲ್ಲಾ ಗಣಿಗಾರಿಕೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ. ಕಾನೂನು ಬದ್ದವಾಗಿ ಹಾಗೂ ನಿಯಮಾನುಸಾರ ಗಣಿಗಾರಿಕೆ ನಡೆಸುತ್ತಿದ್ದರೆ ಗಣಿಗಾರಿಕೆ ಮುಂದುವರೆಸಲು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ತಕ್ಷಣವೇ ಅವಕಾಶ ನೀಡಲಿದೆ. ಅಕ್ರಮ ಕಂಡು ಬಂದರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಒಂದು ಎಕರೆ, ಎರಡು ಎಕರೆಯಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಪಡೆದು, ಜಾಗ ಒತ್ತುವರಿ ಮಾಡಿ ಹೆಚ್ಚು ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ದೂರುಗಳು ಇವೆ. ಅಧಿಕಾರಿಗಳು ಈ ಬಗ್ಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಿದ್ದಾರೆ. ಅಕ್ರಮವಾಗಿ ನಡೆಯುತ್ತಿದೆ ಎಂದು ತಿಳಿದು ಬಂದರೆ ಗಣಿಯನ್ನು ಸ್ಥಗಿತಗೊಳಿಸಲಾಗುವುದು. ಒಂದು ತಿಂಗಳ ಅವಧಿಯಲ್ಲಿ ಪರಿಶೀಲನಾ ಕಾರ್ಯ ಪೂರ್ಣಗೊಳ್ಳಲಿದೆ. ಆಗ ಜಿಲ್ಲೆಯಲ್ಲಿ ನಡೆಯುತ್ತಿರುವ ಸಕ್ರಮ ಹಾಗೂ ಅಕ್ರಮ ಗಣಿಗಾರಿಕೆ ಬಗ್ಗೆ ಸ್ಪ? ಚಿತ್ರಣ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದರು.
ದುರಂತ ನಡೆದ ಮಡಹಳ್ಳಿ ಕ್ವಾರಿಯ ಗಣಿ ಗುತ್ತಿಗೆ ಪಡೆದಿದ್ದ ಸ್ಥಳೀಯ ವ್ಯಕ್ತಿ ಕೇರಳದವರೊಬ್ಬರಿಗೆ ಉಪ ಗುತ್ತಿಗೆ ನೀಡಿದ್ದಾರೆ. ಇದಕ್ಕೆ ನಿಯಮದಲ್ಲಿ ಅವಕಾಶ ಇದೆಯೇ ಎಂಬ ಬಗ್ಗೆ ಅಧಿಕಾರಿಗಳಿಗೆ ಪರಿಶೀಲಿಸಲು ತಿಳಿಸಲಾಗಿದೆ. ತಕ್ಷಣದಿಂದಲೇ ಈ ಕ್ವಾರಿಯನ್ನು ಸ್ಥಗಿತಗೊಳಿಸಲಾಗಿದೆ. ಗಣಿಗಾರಿಕೆ ಸಂಬಂಧ ಪರವಾನಗಿಯನ್ನು ವಾಪಸ್ಸು ಪಡೆಯಲು ನಿರ್ದೇಶನ ನೀಡಲಾಗಿದೆ. ಗಣಿ ಗುತ್ತಿಗೆ ಪಡೆದಿರುವ ಮಹೇಂದ್ರಪ್ಪ, ಉಪ ಗುತ್ತಿಗೆ ಪಡೆದಿರುವ ಕೇರಳದ ಹಕೀಂ ಹಾಗೂ ಮ್ಯಾನೇಜರ್ ನವೀದ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದರು.
ಇನ್ನು ಮುಂದೆ ಮಡಹಳ್ಳಿ ಕ್ವಾರಿಯಂತಹ ದುರಂತಗಳು ಜಿಲ್ಲೆಯಲ್ಲಿ ಪುನರಾವರ್ತನೆಯಾಗಬಾರದು. ಗಣಿಗಾರಿಕಾ ಪ್ರದೇಶಗಳ ಪರಿಶೀಲಿಸಿ ಅಕ್ರಮ ಕಂಡು ಬಂದಲ್ಲಿ ಕ್ರಮ ಕೈಗೊಳ್ಳುವ ಗುರುತರ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಯವರಿಗೆ ನೀಡಲಾಗಿದೆ. ಯಾರೇ ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನಿನ ಚೌಕಟ್ಟಿನಡಿಯಲ್ಲಿಯೇ ಕ್ರಮ ವಹಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ಶಾಸಕರಾದ ಸಿ.ಎಸ್. ನಿರಂಜನ್‌ಕುಮಾರ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಟಿ. ಮಹಾಂತೇಶ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.