:-ಚಿದ್ರೂಪ ಅಂತಃಕರಣ

ಹಿಂದೊಮ್ಮೆ ಇತಿಹಾಸಕಾರ ಟಾಯ್ನಬಿ ನಾಗರಿಕತೆಯ ಚರಿತ್ರೆ ಬರೆಯುತ್ತ ಒಂದು ಮುಖ್ಯ ಸಂಗತಿಯನ್ನು ಹೇಳಿದ್ದಾನೆ: “ಪ್ರತಿ ನಾಗರಿಕತೆಯೂ ಪ್ರಗತಿಯ ಹೆಸರಿನಲ್ಲಿ ನಿರ್ವಹಣೆಗೆ ಅಸಾಧ್ಯವಾದ ರೀತಿಯಲ್ಲಿ ಬೆಳೆಯುತ್ತಾ ಹೋಗುತ್ತವೆ. ದಿಕ್ಕು ದೆಸೆಯಿಲ್ಲದ ಈ ಬೆಳೆವಣಿಗೆಯ ಒಡಲಿನಲ್ಲಿಯೇ ಅವುಗಳ ಅವನತಿ ಎಳೆಗಳೂ ಸೇರಿಕೊಳ್ಳುತ್ತವೆ. ನಿಂತು ನೋಡುವ ವ್ಯವಧಾನವಿಲ್ಲದ ಅವುಗಳ ಪ್ರಗತಿಯ ವೇಗವೇ ದುರಂತದ ಮೂಲವೂ ಹೌದು. ಇದೊಂದು ರೀತಿಯಲ್ಲಿ ಹೊಳೆಯ ಸುಳಿಯ ವೇಗದ ರೀತಿಯದು. ಹೀಗಾದಾಗ ಅವುಗಳು ತಮ್ಮ ಸಾವನ್ನು ತಾವೇ ತಂದುಕೊಳ್ಳುತ್ತವೆ. ಯಾರೋ ಕೊಂದದ್ದರಿಂದ ನಾಗರಿಕತೆಗಳು ಸಾಯುವುದಲ್ಲ; ಆತ್ಮಹತ್ಯೆಯಿಂದ ನಾಗರಿಕತೆಗಳು ಸಾಯುತ್ತವೆ. ರೋಮನ್ ನಾಗರಿಕತೆ ಗರ್ವದ ಅತಿರೇಕಕ್ಕೆ ಹೋಗಿ ಹೀಗೆ ಅವಸಾನ ಹೊಂದಿತು” ಎಂದು ವಿವರಿಸಿ ಟಾಯ್ನಬಿ ಹೇಳಿದ್ದಾನೆ.

ಈ ಮೇಲಿನ ಇತಿಹಾಸಕಾರನ ಹೇಳಿಕೆಗೂ ಮೈಂಡ್ ಅರೆಸ್ಟ್ ಮತ್ತು ಯುವಜನ ಭಾರತ ವಿಷಯಕ್ಕೂ ಖಂಡಿತ ಸಂಬಂಧವಿದೆ. ನಾನು ಗೆಳೆಯನೊಟ್ಟಿಗೆ ಪ್ರಸ್ತುತ ವಿದ್ಯಮಾನಗಳನ್ನು ಚರ್ಚಿಸುತ್ತಿರಬೇಕಾದರೆ ನನ್ನ ಮೆದುಳಿಗೆ ಹೊಳೆದಿದ್ದು ಮೈಂಡ್ ಅರೆಸ್ಟ್ ಚಿಂತನೆ. ಸ್ವತಂತ್ರ ಮತ್ತು ಅಭಿವ್ಯಕ್ತಿ ವಿಚಾರಕ್ಕೆ ಬಂದಾಗ ಬಾಲ್ಯದಲ್ಲಿ ನಮ್ಮಗಳಿಗೆ ಇದ್ದ ಸ್ವತಂತ್ರ ಮತ್ತು ಸರ್ವಮುಕ್ತ ಮಾನಸಿಕ ಸಂದರ್ಭ ನಮ್ಮೊಳಗೆ ಇದೀಗವಿಲ್ಲ. ಸಮಾಜದಲ್ಲಿನ ಕಾನೂನಿನ ಸ್ವತಂತ್ರ ಮತ್ತು ಅಭಿವ್ಯಕ್ತಿಯ ಬಗ್ಗೆ ನಾನೀಗ ವಿವರಿಸುತ್ತಿಲ್ಲ. ನಮ್ಮೊಳಗೆ ನಾವು ಕಂಡುಕೊಂಡಿರುವ ಅಥವಾ ನಿಸರ್ಗ ನಮಗೆ ನೀಡಿದ್ದ ಸ್ವತಂತ್ರದ ಬಗೆಯನ್ನು ವಿವರಿಸುತ್ತಿರುವೆ. ಬಾಲ್ಯದಲ್ಲಿ ಸಮಾಜದ ಯಾವುದೇ ಸಿದ್ಧಾಂತಗಳಿಗೆ ನಮ್ಮ ಮೆದುಳು ಸ್ಥಳ ನೀಡಿರಲಿಲ್ಲ ಹಾಗಾಗಿ ನಾವು ಸ್ವತಂತ್ರರು ಅಂದರೆ ಬಂಧ ಮುಕ್ತರು. ಇದಕ್ಕೆ ಮೂಲ ಅನುಕೂಲ ಕಾರಣ ನಾವು ಚಿಕ್ಕವರು, ಕ್ಲಿಷ್ಟತೆಯನ್ನು ತಿಳಿಯಲಾಗದವರು ಅಥವಾ ನಿಧಾನವಾಗಿ ತಿಳಿಯುತ್ತಿರುವವರು. ಈ ನಿಧಾನ ಎಂಬುವುದು ಮತ್ತು ಬಾಲ್ಯದ ಇತರ ನೈಸರ್ಗಿಕ ಚಟುವಟಿಕೆಗಳು ನಮ್ಮನ್ನು ಹೆಚ್ಚಾಗಿಯೇ ಮಾನಸಿಕವಾಗಿ ಸ್ವತಂತ್ರಗೊಳಿಸಿತ್ತು ಅಥವಾ ಬಂಧಮುಕ್ತಗೊಳಿಸಿತ್ತು ಎಂದು ನೆನಪಿಸಲು ಸಂತೋಷಿಸುತ್ತೇನೆ. ಈ ಬಂಧಮುಕ್ತ ಸಂದರ್ಭ ನಾವು ಪ್ರೌಢಾವಸ್ಥೆ ದಾಟುತ್ತಿದ್ದಂತೆಯೇ ಸ್ವಲ್ಪ ಸ್ವಲ್ಪವೇ ಕದಲುವುದಕ್ಕೆ ಆರಂಭವಾಗುತ್ತದೆ. ಈ ಸನ್ನಿವೇಶದಲ್ಲಿ ಸಮಾಜದೊಂದಿಗೆ ವ್ಯವಹಾರಿಕ ಮನಸ್ಥಿತಿಯಲ್ಲಿ ಒಡನಾಟ ಬೆಸೆಯಲು ಆರಂಭಿಕ ಹೆಜ್ಜೆಗಳನ್ನು ಇಟ್ಟಿರುತ್ತೇವೆ. ಇನ್ನು ಯೌವ್ವನದ ಹಂತಕ್ಕೆ ಬಂದಾಗ ಸಂಪೂರ್ಣವಾಗಿ ಈ ಸಮಾಜದ ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ, ಸಾಂಪ್ರದಾಯಿಕ, ಇತರೆ ವ್ಯವಸ್ಥೆಗಳ ಹೆಚ್ಚಾದ ಪ್ರಭಾವಕ್ಕೆ ಒಳಗಾಗಿರುತ್ತೇವೆ. ಇದರಿಂದ ದೈಹಿಕ ಮಾನಸಿಕ ಕ್ರಿಯೆಗಳ ಉದ್ದೀಪನದಲ್ಲಿ ಬದಲಾವಣೆ ಮತ್ತು ಬೆಳೆವಣಿಗೆಗೆ ಒಳಗಾಗಿರುತ್ತೇವೆ. ಈಗ ಸಮಾಜದ ಕಾನೂನಿನ ಸ್ವತಂತ್ರ ಮತ್ತು ಅಭಿವ್ಯಕ್ತಿ ವಿಚಾರವೂ ಸೇರಲ್ಪಡುತ್ತದೆ. 

ಈ ಸಮಾಜದ ಹಲವು ವ್ಯವಸ್ಥೆಗಳು ಯುವಸಮುದಾಯವನ್ನು ದಿಕ್ಕೆಡಿಸದ ಸ್ಥಿತಿಯಲ್ಲಿ ಸುವ್ಯವಸ್ಥಿತಗೊಂಡು ಪ್ರಭಾವಿಸಿದರೆ ಯಾವುದೇ ತೊಂದರೆ ಇಲ್ಲ.  ಆದರೆ ಈ ಸಮಾಜದ ಹಲವು ವ್ಯವಸ್ಥೆಗಳ ಧೋರಣೆಗಳು ತೀವ್ರ ಬೆಳೆವಣಿಗೆಯ ಹಾದಿಯಲ್ಲಿ ಯುವಸಮುದಾಯಕ್ಕೆ ಒತ್ತಡ ಭರಿತವಾದ, ದ್ವಂದ್ವಾತ್ಮಕವಾದ ಬದುಕಿನ ಮಾರ್ಗಗಳನ್ನು ತೋರ್ಪಡಿಸುತ್ತಿದ್ದರೆ; ಸರಿಯಾದ ಮಾರ್ಗದರ್ಶನವಿಲ್ಲದ ಯುವಸಮುದಾಯವರು ಹುಚ್ಚುಕುದರೆಯಂತೆ ಓಡಲು ಆರಂಭಿಸುತ್ತಾರೆ. ಇಲ್ಲಿ ಯಾವುದೇ ಗುರಿ ಉದ್ದೇಶಗಳ ಸ್ಪಷ್ಟತೆಯಿಲ್ಲದೆ ತೊಡಗಬಾರದ ಅನೈತಿಕ ವಿಚಾರಗಳಲ್ಲಿ ಯುವಸಮುದಾಯದವರು ಬೆರೆತು ಮಾನಸಿಕ ಸ್ವತಂತ್ರವನ್ನು ಸ್ವತಃ ನಾಶಪಡಿಸಿಕೊಳ್ಳುತ್ತಾರೆ. ತಮಗೆ ತಾವೇ ಅಪರಾಧಿಗಳಾಗಿ ತಮ್ಮ ಮನಸ್ಸಿನಲ್ಲಿಯೇ ಕಾರಾಗೃಹ ಸೇರುತ್ತಾರೆ. ಮಾನಸಿಕ ಖೈದಿಯಾಗುತ್ತಾರೆ. ಹೊರಗಿನ‌ ಸಮಾಜಕ್ಕೆ ಸ್ವತಂತ್ರ ಪ್ರಜೆಗಳಾದರೂ, ನಿರಪರಾಧಿಗಳಾದರೂ ತಮ್ಮೊಳಗಿರುವ ಅಂತರಂಗದ ವ್ಯವಸ್ಥೆಯಲ್ಲಿ ಪರಾತಂತ್ರರಾಗಿ ಅಥವಾ ಬಂಧನಕ್ಕೊಳಗಾಗಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುತ್ತಾರೆ.

ಹೊರಗಿನ ನೋಟಕ್ಕೆ ಲೌಕಿಕ ಆಯಾಮಗಳಲ್ಲಿ ಸುಖದ ಹಾದಿ ಹಿಡಿದ ಕೆಲವರು ಮನದ ಸಂತೋಷಕ್ಕೆ ನೆಮ್ಮದಿ ಎನ್ನುವ ಶ್ಲೋಕ ಹಿಡಿದು ಅಲೆಯುತ್ತಿರುತ್ತಾರೆ. ಮಧ್ಯಮ ಮತ್ತು ತಳದಲ್ಲಿರುವವರು ಸಮಾಜದ ವೇಗದ ಸ್ಥಿತಿಗೆ ಹೊಂದಾಣಿಕೆಯನ್ನು ತಂದುಕೊಳ್ಳಲಾರದೆ ಮೇಲ್ವರ್ಗದ ನಿರಂಕುಶ ಅಧೀನದ ಕುತಂತ್ರಕ್ಕೆ ಸರ್ವರೀತಿಯಲ್ಲೂ ಒಳಗಾಗಿ ತ್ರಿಶಂಕು ಸ್ಥಿತಿಯಲ್ಲಿರುತ್ತಾರೆ. ಇದು ನಿಜಕ್ಕೂ ಬೆಳೆವಣಿಗೆಯಲ್ಲ. ಇದನ್ನೇ ಟಾಯ್ನಬಿ ನಾಗರಿಕತೆಯ ಪ್ರಗತಿ ಸೂಚ್ಯದ ವೇಗಸ್ಥಿತಿ ಅಪಾಯವನ್ನು ತನ್ನೊಳಗೆ ಇಟ್ಟುಕೊಂಡಿರುತ್ತದೆ ಎಂದು ಹೇಳಿರುವುದು. 

ಯು. ಆರ್ ಅನಂತಮೂರ್ತಿ ಅವರು ಪಾಶ್ಚಾತ್ಯ ನಂಟನ್ನು ತುಂಬಾ ಹತ್ತಿರವಾಗಿ ಬೆಸುಗೆಗೊಳಿಸಿಕೊಂಡಿದ್ದವರು; ಹೀಗಾಗಿ ಅಮೆರಿಕ ದೇಶದ ಭವಿಷ್ಯವನ್ನು ಭೂತ ಮತ್ತು ವರ್ತಮಾನ ಗ್ರಹಿಸಿ ಹೀಗೆ ತಿಳಿಸಿದ್ದರು; “ಮಾರುಕಟ್ಟೆಯ ಅಮೆರಿಕವು ಈಗ ಆತ್ಮಹತ್ಯೆಯ ಹಾದಿಯಲ್ಲಿ ಇರಬಹುದು ಎಂದು ತಮ್ಮದೊಂದು ಲೇಖನದಲ್ಲಿ ಆಧುನಿಕ ಸವಾಲುಗಳನ್ನು ಪ್ರಸ್ತಾಪಿಸುತ್ತಾ ಹೇಳಿದ್ದರು. ಈ ಆತ್ಮಹತ್ಯೆ ಸೂಚ್ಯವನ್ನು ಟಾಯ್ನಬಿ ನಾಗರಿಕತೆಗಳ ಸಾವು ಕೊಲೆಯಲ್ಲ ಅವುಗಳ ಪ್ರಗತಿಯ ದೃಷ್ಟಿಯಲ್ಲಿ ಅಹಂ ತೀವ್ರತೆಯಿಂದಾದ ಅಪಾಯ ಎಂದು ಅಂದೇ ತನ್ನ ಚಿಂತನೆಯನ್ನು ಹರಿಯ ಬಿಟ್ಟಿದ್ದ. ಈ ನಾಗರಿಕತೆಗಳ ಸಾವು ಸಮೂಹ ರೂಪದಲ್ಲಿ ಆಗುವುದು ಸಮಗ್ರ ಬಗೆಯಾದರೆ; ಪ್ರತಿ ನಾಗರಿಕನ ಆತ್ಮಹತ್ಯೆ ಮತ್ತು ಮೈಂಡ್ ಅರೆಸ್ಟ್ ಸೂಕ್ಷ್ಮ ಬಗೆ. ಭಾರತ ಮಾರುಕಟ್ಟೆ ದೇಶವಾಗಿ ಅಮೆರಿಕದಂತೆ ಕಾಣಿಸಿಕೊಳ್ಳಲು ಹೊರಟಿದೆ ಈ ಮಧ್ಯೆ ರೋಮ್ ನಾಗರಿಕತೆಯ ಗರ್ವದ ಅವತಾರವನ್ನು ತಲೆಎತ್ತಿದೆ. ಭಾರತ ವಿಶ್ವಗುರುವಾಗುವುದು ಎಲ್ಲಾ ದೇಶಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಯತ್ನಿಸಿ ಯಶಸ್ವಿಯಾದಾಗಲಲ್ಲ‌. ಬದಲಿಗೆ ಎಲ್ಲ ದೇಶಗಳೊಡನೆ ವಿಶ್ವಮಾನವ ತತ್ವವನ್ನು ಸಾಧಿಸಿದಾಗ. 

ಕಾರ್ಲ್‌ ಮಾಕ್ಸ್೯ ತನ್ನ ಸಿದ್ಧಾಂತದಲ್ಲಿ ಬಂಡವಾಳ ಶಾಹಿಗಳ ಮರ್ಮವನ್ನು ಬಿತ್ತರಿಸಿ ಅಂದೇ ಎಚ್ಚರಿಸಿದರೂ ಜನ ಜಾಗೃತರಾಗಿಲ್ಲ. “ಬಂಡವಾಳಶಾಹಿ ನಾಗರಿಕತೆಯ ಗರ್ಭದಲ್ಲೇ ಸರ್ವಾಧಿಕಾರತ್ವ ಅಡಗಿರುತ್ತದೆ”. ಭಾರತ ಬಂಡವಾಳಶಾಹಿ ರಾಷ್ಟ್ರವಾಗಲೂ ಸರ್ವವಿಧದಲ್ಲೂ ಸಜ್ಜಾಗಿದೆ. ಭಾರತ ಈ ನಿಟ್ಟಿನಲ್ಲಿ ತನ್ನ ಗರ್ಭದಲ್ಲಿ ಸರ್ವಾಧಿಕಾರತ್ವ ಭ್ರೂಣವನ್ನು ಪೋಷಿಸುತ್ತಿದೆ. ಖಾಸಗಿ ಬದುಕೇ ಇಲ್ಲದ ಪರಾತಂತ್ರ ಬಂಧನದ ಯಾಂತ್ರಿಕ ಸ್ಥಿತಿಗೆ ತಲುಪುತ್ತಿದೆ. 

ಗೋಪಾಲಕೃಷ್ಣ ಅಡಿಗರು; ” ನನ್ನ ಮನವ ನನಗೆ ಕೊಡು ಓ ಸಮಾಜ ಬೈರವ, ನನ್ನ ನಗೆಯ ನನ್ನ ಬಗೆಯ ನನ್ನ ಜಗವ ನನಗೆ ಬಿಡು, ನನ್ನ ಮನವ ನನಗೆ ಕೊಡು”. ಎಂದು ಕವಿತೆಯ ಮೂಲಕ ಆಧುನಿಕ ಸಮಾಜದ ದುಷ್ಟ ಸ್ಥಿತಿಯಿಂದ ಸ್ವತಂತ್ರ ಬಯಸುತ್ತಿರುವುದನ್ನು ಈ ಯುವ ಸಮುದಾಯಕ್ಕೆ ಮೈಂಡ್ ಅರೆಸ್ಟ್ ಮತ್ತು ಯುವಜನ ಭಾರತ ವಿಚಾರದ ಮೂಲಕ ಮತ್ತೆ ಮುಂದಿಡುತ್ತಿದ್ದೇನೆ. ಯುವಜನ ಭಾರತದ ಜಾಗೃತ  ಧ್ವನಿಯಾಗಿ, ಈ ಮೈಂಡ್ ಅರೆಸ್ಟ್ ಖೈದಿಗಳ ಬಿಡುಗಡೆಗಾಗಿ, ಯುವಜನ ಭಾರತದಲ್ಲಿ ಬಂಡವಾಳಶಾಹಿಗಳ ಸರ್ವಾಧಿಕಾರತ್ವ ಭ್ರೂಣ, ಶಿಶುವಾಗಿ ಜನ್ಮತಾಳದಂತೆ ಈ ಇತಿಹಾಸ ಮಹನೀಯರ ಸರ್ವ ಸಮ್ಮತ ಚಿಂತನೆಗಳನ್ನು ಸಮಾಜಕ್ಕೆ ಈ ಮೂಲಕ ಕೃಷಿ ಮಾಡುತ್ತಿದ್ದೇನೆ.

ಚಿಮಬಿಆರ್(ಮಂಜುನಾಥ ಬಿ.ಆರ್)

ಯುವಸಾಹಿತಿ, ವಿಮರ್ಶಕ.

ಎಚ್.ಡಿ ಕೋಟೆ ಮೈಸೂರು.

ದೂರವಾಣಿ ಸಂಖ್ಯೆ; 8884684726

Gmail I’d: manjunathabr709@gmail.com