ಚಾಮರಾಜನಗರ:ದೇವರ ದಾಸಿಮಯ್ಯ ಅವರು ಸಮಾನತೆ ಸಮಾಜದ ಜಾಗೃತಿಗಾಗಿ ನೀಡಿದ ಸಂದೇಶಗಳು ವಚನಗಳು ಇಂದಿಗೂ ಸ್ಮರಣೀಯವಾಗಿದೆ ಎಂದು ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಸಿ.ಎಸ್. ನಿರಂಜನ್ ಕುಮಾರ್ ಅವರು ತಿಳಿಸಿದರು. 
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 
ಅಂದಿನ ಕಾಲಘಟ್ಟದಲ್ಲಿಯೇ ತಮ್ಮ ವಚನಗಳ ಮೂಲಕ ದೇವರ ದಾಸಿಮಯ್ಯ ಅವರು ಉತ್ತಮ ಮೌಲ್ಯಗಳ ಸಂದೇಶವನ್ನು ಸಾರಿದ್ದಾರೆ. ಸಮಾಜದ ಜಾಗೃತಿಗೆ ಶ್ರಮಿಸಿದ್ದಾರೆ. ನೂರಾರು ವರ್ಷಗಳ ನಂತರವೂ ಅವರ ಮಾಡಿದ ಉತ್ತಮ ಕಾರ್ಯಗಳಿಗೆ ಇಂದೂ ಸಹ ನಾವು ಸ್ಮರಿಸುತ್ತೇವೆ ಎಂದರು. 
ವಚನಕಾರರು, ದಾರ್ಶನಿಕರು, ಮಹಾನ್ ಪುರುಷರ ಸ್ಮರಿಸುವ ಜಯಂತಿಗಳನ್ನು ಜಾತಿಗೆ ಸೀಮಿತಗೊಳಿಸಬಾರದು. ಸಂಕುಚಿತ ಮನೋಭಾವನೆ ಹೋಗಬೇಕಿದೆ. ಎಲ್ಲರೂ ಸೇರಿ ಭಾಗಿಯಾಗಿ ಸ್ಮರಣೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು. 
ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಎನ್. ಲಕ್ಷ್ಮೀಪತಿ ಅವರು ಮಾತನಾಡಿ ದೇವರ ದಾಸಿಮಯ್ಯ ನವರು ರಚಿಸಿದ ವಚನಗಳು ಜನ ಸಾಮಾನ್ಯರಿಗೆ ಹೆಚ್ಚು ಪ್ರಚುರವಾಗಿಲ್ಲ. ಆದರೆ ಇವರ ವಚನಗಳನ್ನು ಬಸವಣ್ಣ ನವರು ಕೊಂಡಾಡಿದ್ದಾರೆ. ನೆರೆ ಹೊರೆಯವರ ಜೊತೆ ಪ್ರೀತಿ ಸಹಬಾಳ್ವೆ ಮಾಡಬೇಕೆಂಬ ಮಹತ್ತರ ಸಂದೇಶವನ್ನು ದೇವರ ದಾಸಿಮಯ್ಯ ಅವರ ವಚನಗಳಲ್ಲಿ ಕಾಣಬಹುದಾಗಿದೆ ಎಂದರು. 
ದೇವರ ದಾಸಿಮಯ್ಯ ಅವರು ನೇಕಾರಿಕೆ ಕಾಯಕದಲ್ಲಿ ತೊಡಗುವ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ವೈಯಕ್ತಿಕ ಜೀವನಕ್ಕಾಗಿ ಬದುಕು ನಡೆಸದೇ ಹಲವರಿಗೆ ದಾರಿದೀಪವಾಗಿದ್ದಾರೆ. ಸಮಾಜದ ಅಂಕುಡೊಂಕು ಗಳನ್ನು ತಿದ್ದುವಲ್ಲಿ ಮುಂದಾಗಿದ್ದಾರೆ. ಎಲ್ಲರಿಗೂ ಆದರ್ಶ ಪ್ರಾಯರಾಗಿದ್ದಾರೆ ಎಂದು ಎನ್. ಲಕ್ಷ್ಮೀಪತಿ ಅವರು ತಿಳಿಸಿದರು.
ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ, ನಗರಸಭೆ ಅಧ್ಯಕ್ಷರಾದ ಆಶಾ ನಟರಾಜು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಕುಲಗಾಣ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗೂಡೂರು ಭೀಮಸೇನ, ಲೆಕ್ಕಾಧಿಕಾರಿ ಹೆಚ್.ಎಸ್. ಗಂಗಾಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಹೆಚ್. ಚೆನ್ನಪ್ಪ, ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.