
ಮಂಡ್ಯ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ಕಳೆದ ಜನವರಿ ೯ರಂದ ಶುರುವಾಗಿತ್ತು. ಕೊರೊನಾ ಸಾಂಕ್ರಾಮಿಕದ ಪರಿಣಾಮ ಕೋರ್ಟ್ ಸೂಚನೆ ಮೇರೆಗೆ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆಯನ್ನು ರಾಮನಗರದಲ್ಲಿ ಅರ್ಧಕ್ಕೆ ಮೊಟಕುಗೊಳಿಸಿದ್ದರು. ಇದೀಗ ಅದೇ ಸ್ಥಳದಿಂದ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ೨.೦ಗೆ ಚಾಲನೆ ನೀಡುತ್ತಿದ್ದಾರೆ.

ಇಂದಿನಿಂದ ಮತ್ತೆ ಪ್ರಾರಂಭಗೊಳ್ಳುವ ಮೇಕೆದಾಟು ೨ನೇ ಹಂತದ ಪಾದಯಾತ್ರೆ ಅಂತಿಮವಾಗಿ ಮಾರ್ಚ್ ೩ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನ ತಲುಪಲಿದೆ.
ಪಾದಯಾತ್ರೆಗೆ ಕಾಂಗ್ರೆಸ್ ನಾಯಕರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ಬಿಜೆಪಿ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದರೆ, ತಮ್ಮ ಸರ್ಕಾರವಿದ್ದಾಗ ಯೋಜನೆಯನ್ನು ಏಕೆ ಜಾರಿ ಮಾಡಿಲ್ಲವೆಂದು ಬಿಜೆಪಿ ತಿರುಗೇಟು ನೀಡಿದೆ.
ಮಾರ್ಗ ಬದಲಾವಣೆಗೆ ಸಾರ್ವಜನಿಕರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು

ಮೇಕೆದಾಟು ಪಾದಯಾತ್ರೆ ೨.೦ ಗಾಗಿ ಮಂಡ್ಯದಿಂದ ಬೆಂಗಳೂರಿಗೆ ಹೊರಡಲು ಬದಲಿ ಮಾರ್ಗ ಮಾಡಿದ್ದು, ಮಂಡ್ಯದ ಮದ್ದೂರು ಬಳಿ ಪ್ರಯಾಣಿಕರು ಶಾಪ ಹಾಕುತ್ತಿದ್ದಾರೆ. ಬದಲಿ ಮಾರ್ಗದಲ್ಲಿ ಹೋದರೆ ಸಮಯ ವ್ಯರ್ಥವಾಗುತ್ತೆ, ಸಮಸ್ಯೆಯಾಗುತ್ತೆ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿದ್ದು, ಯಾವ್ನೋ ಮಾಡ್ತಾನೆ ಅಂತಾ ಜನರಿಗೆ ಯಾಕ್ರಿ ತೊಂದರೆ ಕೊಡ್ತೀರಾ ಎಂದು ಪ್ರಯಾಣಿಕನೊಬ್ಬ ಅವಾಚ್ಯ ಶಬ್ದಗಳನ್ನು ಬಳಿಸಿ ಪೊಲೀಸರಿಗೆ ಪ್ರಶ್ನಿಸಿದ್ದಾನೆ.