ಚಾಮರಾಜನಗರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಮಾರ್ಚ್ ೧೨ರಂದು ಜಿಲ್ಲೆಯಾದ್ಯಂತ ಮೆಗಾ ಲೋಕ್ ಅದಾಲತ್ ಆಯೋಜಿಸಲಾಗಿದ್ದು, ಅದಾಲತ್‌ನಲ್ಲಿ ರಾಜೀಯಾಗಬಹುದಾದ ೫ ಸಾವಿರ ಪ್ರಕರಣಗಳ ಇತ್ಯರ್ಥಕ್ಕೆ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಸೆಷೆನ್ಸ್ ನ್ಯಾಯಾದೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿರುವ ವ್ಯಾಜ್ಯ ಪೂರ್ವ ಕೇಂದ್ರದ ಸಭಾಂಗಣದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದನ್ವಯ ಮಾರ್ಚ್ ೧೨ರಂದು ರಾಜ್ಯಾದ್ಯಂತ ಬೃಹತ್ ಲೋಕ್ ಅದಾಲತ್ ನಡೆಯುತ್ತಿದೆ. ಈ ಪ್ರಯುಕ್ತ ಜಿಲ್ಲೆಯಲ್ಲಿಯು ಲೋಕ್ ಅದಾಲತ್ ಏರ್ಪಡಿಸಲಾಗಿದ್ದು, ಅಂದು ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಯಳಂದೂರು ತಾಲೂಕು ನ್ಯಾಯಾಲಯಗಳಲ್ಲಿಯೂ ಸಹ ಬೈಟಕ್‌ಗಳನ್ನು ಏರ್ಪಡಿಸಿ ಸಂಧಾನಕಾರರನ್ನು ನೇಮಿಸುವ ಮೂಲಕ ಅದಾಲತ್‌ನ್ನು ಯಶಸ್ವಿಯಾಗಿ ನಡೆಸಬೇಕಾಗಿದೆ ಎಂದರು.
ಕಳೆದ ಸಾಲಿನಲ್ಲಿ ನಾಲ್ಕು ಅದಾಲತ್‌ಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು. ಪ್ರಸ್ತುತ ವರ್ಷದ ಮೊದಲ ಲೋಕ್ ಅದಾಲತ್ ಆಗಿದೆ. ಲೋಕ್ ಅದಾಲತ್‌ನಲ್ಲಿ ವಕೀಲರು, ಕಕ್ಷಿದಾರರು ಸಂಧಾನಕಾರರು ನೀಡುವ ಸಲಹೆಗಳನ್ನು ಆಲಿಸಿ, ಒಪ್ಪಿಗೆಯಾಗಿ ಸದರಿ ಸಲಹೆಗಳನ್ನು ಪಾಲಿಸಿದಲ್ಲಿ ಉಭಯ ಪಕ್ಷಾಗಾರರು ಪರಸ್ಪರ ಒಪ್ಪಿ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಅದಾಲತ್‌ಗೆ ವಕೀಲರು, ಕಕ್ಷಿದಾರರು, ವಿಮಾ ಕಂಪನಿಗಳು, ಪೊಲೀಸರು, ವಿವಿಧ ಇಲಾಖೆಗಳು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು.
ಲೋಕ್ ಅದಾಲತ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಹೊರತುಪಡಿಸಿ ಇತರೆ ಯಾವುದೇ ಬಗೆಯ ಸಿವಿಲ್ ಪ್ರಕರಣಗಳು, ದಾಂಪತ್ಯಕ್ಕೆ ಸಂಬಂಧಿಸಿದ ಹಕ್ಕುಗಳ ಪುನರ್‌ಸ್ಥಾಪನೆ, ಜೀವನಾಂಶ, ಮಕ್ಕಳ ಸಂರಕ್ಷಣೆಯ ಎಲ್ಲಾ ಪ್ರಕರಣಗಳು, ವಾಹನ ಅಪಘಾತ, ಕೈಗಾರಿಕಾ ವಿವಾದ ಸೇರಿದಂತೆ ಇತರೆ ಎಲ್ಲಾ ಸ್ವರೂಪದ ಪ್ರಕರಣಗಳನ್ನು ಅದರಲ್ಲೂ ರಾಜೀ ಯೋಗ್ಯ ಕ್ರಿಮಿನಲ್ ಪ್ರಕರಣಗಳು, ವಿಶೇಷ ಕಾನೂನಿನಿಂದ ಶಿಕ್ಷಿಸಲ್ಪಟ್ಟ ಅಪರಾಧಗಳಾದ ಚೆಕ್ಕುಗಳ ಅಮಾನ್ಯ, ಕಾರ್ಮಿಕ, ವಿದ್ಯುಚ್ಚಕ್ತಿ ಕಳುವಿಗೆ ಸಂಬಮಧಿಸಿದ ಪ್ರಕರಣಗಳು, ಅಕ್ರಮ ಕಲ್ಲು, ಮರಳು ಸಾಗಾಣಿಕೆ, ಇತರೆ ಯಾವುದೇ ಅಪರಾಧಿಕ ಸ್ವರೂಪದ ರಾಜೀಯೋಗ್ಯ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ ಎಂದರು.
ಲೋಕ್ ಅದಾಲತ್‌ನಿಂದ ಸಾಕಷ್ಟು ಅನುಕೂಲಗಳಿವೆ. ವ್ಯಾಜ್ಯಗಳನ್ನು ಶೀಘ್ರವಾಗಿ ಇತ್ಯರ್ಥ ಮಾಡಿಕೊಳ್ಳಬಹುದು. ಅದಾಲತ್‌ನಲ್ಲಿ ಪ್ರಕರಣಗಳು ಇತ್ಯರ್ಥವಾದರೇ ಪಕ್ಷಾಗಾರರು ಸಂದಾಯ ಮಾಡಿದ ಸಂಪೂರ್ಣ ನ್ಯಾಯಾಲಯದ ಶುಲ್ಕವನ್ನು ಪಾವತಿಸಿದ ಪಕ್ಷಾಗಾರರಿಗೆ ಹಿಂತಿರುಗಿಸಲಾಗುವುದು. ಅದಾಲತ್ ನಲ್ಲಿ ಪಕ್ಷಾಗಾರರು ಮುಕ್ತವಾಗಿ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಇದರಿಂದ ಸಮಯ, ಹಣ ಉಳಿತಾಯವಾಗಲಿದೆ. ಕುಟುಂಬದ ಅಭಿವೃದ್ದಿ ಹಾಗೂ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ ಸಾಮರಸ್ಯದ ಜೀವನ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಲೋಕ್ ಅದಾಲತ್‌ನಲ್ಲಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಈಗಾಗಲೇ ವಿಮಾ ಕಂಪನಿಗಳು, ಬ್ಯಾಂಕು, ಭೂ ಸ್ವಾಧೀನಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್ ಸೇರಿದಂತೆ ವಿವಿಧ ವಿಭಾಗದ ನ್ಯಾಯಾಧೀಶರು ಹಾಗೂ ವಕೀಲರೊಂದಿಗೆ ಪೂರ್ವಭಾವಿಯಾಗಿ ಚರ್ಚಿಸಿದೆ. ರಾಜೀಯೋಗ್ಯ ಪ್ರಕರಣಗಳನ್ನು ಗುರುತಿಸಿ ಉಭಯ ಪಕ್ಷಾಗಾರರನ್ನು ಒಂದೆಡೆ ಕಲೆಹಾಕಿ ಸಮಾಲೋಚಿಸುವ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಲೋಕ್ ಅದಾಲತ್ ಉತ್ತಮ ವೇದಿಕೆಯಾಗಬೇಕು ಎಂದು ಜಿಲ್ಲಾ ನ್ಯಾಯಾಧೀಶರಾದ ಭಾರತಿ ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಎಂ. ಶ್ರೀಧರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಕಾರ್ಯದರ್ಶಿ ವಿರೂಪಾಕ್ಷ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.