ಗುಂಡ್ಲುಪೇಟೆ: ಬ್ಯಾಂಕ್ ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಣ್ಣ ರೈತರಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಈ ಬಗ್ಗೆ ಎಲ್ಲಾ ಬ್ಯಾಂಕ್ ಅಧಿಕಾರಿಗಳ ಜೊತೆಗೆ ತಾಲ್ಲೂಕು ಆಡಳಿತ ಸಭೆ ನಡೆಸಿ ಸಮಸ್ಯೆ ಬಗೆಹರಿಸುಂತೆ ಒಕ್ಕೂರಲಿನ ಒತ್ತಾಯ ಕೇಳಿ ಬಂತು.
ತಾಲ್ಲೂಕು ಕಚೇರಿಯ ಸಭಾ ಭವನದಲ್ಲಿ ನಡೆದ ತಾಲ್ಲೂಕು ಮಟ್ಟದ ಪರಿಶಿಷ್ಟ ಜನಾಂಗ ಮತ್ತು ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಭೆಯಲ್ಲಿ ಈ ಮೇಲಿನ ವಿಚಾರವಾಗಿ ಚರ್ಚೆ ನಡೆಯಿತು.
ಪರಿಶಿಷ್ಟ ಜನಾಂಗದ ಮುಖಂಡ ಲಕ್ಕೂರು ಗಿರೀಶ್ ಮಾತನಾಡಿ, ಎಸ್ ಇಪಿ/ಟಿಎಸ್ ಪಿ ಯೋಜನೆಯಡಿಯಲ್ಲಿ ಸರ್ಕಾರಿ ಸೌಲಭ್ಯಗಳು ಸರಿಯಾಗಿ ಜನರಿಗೆ ತಲುಪುತ್ತಿಲ್ಲ. ಅತಿ ಹೆಚ್ಚು ಜನರಿಗೆ ತಲುಪುವ ಪ್ರಮುಖ ಇಲಾಖೆ ಬ್ಯಾಂಕ್ ಗಳು. ಆದರೆ ಎಸ್ಸಿ, ಎಸ್ಟಿ ಜನರಿಗೆ ಯಾವುದೇ ಸಾಲ ಸೌಲಭ್ಯಗಳು ಸರಿಯಾದ ರೀತಿಯಲ್ಲಿ ಕೊಡುತ್ತಿಲ್ಲ ಎಂದು ದೂರಿದರು.
ಜಿಲ್ಲೆಯಲ್ಲಿ ಸುಮಾರು120 ಬ್ಯಾಂಕ್ ಗಳಿದ್ದು, ಮುಂದ್ರ ಯೋಜನೆ, ಕೈಗಾರಿಕಾ ನಿರ್ಮಾಣ, ಕೃಷಿ ಗೆ ಸಂಬಂಧ ಪಟ್ಟಂತೆ ಸರ್ಕಾರಿ ಸೌಲಭ್ಯಗಳು ಯಾವುದೇ ಬ್ಯಾಂಕ್ ಗಳಲ್ಲಿ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಬ್ಯಾಂಕ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸಿದರು.
ಕೃಷಿಕ ಸಮಾಜದಲ್ಲಿ ಎಸ್ಸಿ, ಎಸ್ಟಿ ಜನಾಂದವರು ಒಬ್ಬರು ಮಾತ್ರ ಇದ್ದಾರೆ. ಹೆಚ್ಚು ಮಾಡುವಂತೆ ಮತ್ತು ಅಧ್ಯಕ್ಷರು ಹಾಗೂ ಸದಸ್ಯರನ್ನು ಬದಲಾವಣೆ ಮಾಡುವಂತೆ ವಕೀಲ ಕಾಂತರಾಜು ಅಸುರ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶ್ 2015-16 ಸಾಲಿನಲ್ಲಿ ಚುನಾವಣೆ ನಡೆಯಬೇಕಿತ್ತು. ಕಾರಣಾಂತರಗಳಿಂದ ತಡೆಯಾಜ್ಞೆ ತಂದಿದ್ದರಿಂದಾಗಿ ಇನ್ನೂ ಚುನಾವಣೆ ನಡೆದಿಲ್ಲ ಎಂದು ತಿಳಿಸಿದರು.
ಪುರಸಭೆ ವತಿಯಿಂದ ನಿರ್ಮಿಸಿರುವ ಐಡಿಎಸ್ ಎಂಟಿ ಯೋಜನೆಗೆ ಇರುವ ಕಾನೂನು ಸಲಹಾಗಾರರನ್ನು ಬದಲಾವಣೆ ಮಾಡಬೇಕು ಮತ್ತು ಎಸ್ಸಿ,ಎಸ್ಟಿ ಜನಾಂಗದ ಬಗ್ಗೆ ಕಾಳಜಿ ಇರುವವರನ್ನು ನೇಮಕ ಮಾಡಬೇಕು. ಹೆಚ್ಚು ವಕೀಲರನ್ನು ನೇಮಿಸಿಕೊಳ್ಳಲು ಮನವಿ ಮಾಡಿದರು.
ಕಳೆದ ಸಭೆಗೆ ಗೈರು ಹಾಜರಾದ ಅಧಿಕಾರಿಗಳ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಅವರಿಗೆ ಮುಖಂಡರು ತರಾಟೆಗೆ ತೆಗೆದುಕೊಂಡರು. ಕೋವಿಡ್ ಸಮಯದಲ್ಲಿ ಯಾವುದೇ ಕ್ರಮ ಜರುಗಿಸಲು ಆಗಿಲ್ಲ, ಜಿಲ್ಲಾ ಹಂತದ ಅಧಿಕಾರಿಗಳು ನಮ್ಮ ಹಿಡಿತದಲ್ಲಿ ಇರುವುದಿಲ್ಲ ಎಂದು ಸಭೆಯಲ್ಲಿ ಇದ್ದವರಿಗೆ ಮನವರಿಕೆ ಮಾಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಪ್ರಮೋದ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಕುಲದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ, ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ಸೇರಿದಂತೆ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯರು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ