ಚಾಮರಾಜನಗರ: ಜಿಲ್ಲಾಡಳಿತ ವತಿಯಿಂದ ಎಲ್ಲರ ಸಹಕಾರದೊಂದಿಗೆ ಗಣರಾಜ್ಯೋತ್ಸವವನ್ನು ಜನವರಿ ೨೬ರಂದು ಸರ್ಕಾರದ ನಿರ್ದೇಶನ ಅನುಸಾರ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಅರ್ಥ ಪೂರ್ಣವಾಗಿ ಆಚರಿಸಲು ನಿರ್ಧಾರ ಕೈಗೊಳ್ಳಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಗಣರಾಜ್ಯೋತ್ಸವ ಆಚರಣೆ ಸಂಬಂಧ ಕುರಿತ ನಡೆದ ಪೂರ್ವಭಾವಿ ಸಭೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ಆಚರಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು.
ಸಭೆಯ ಆರಂಭದಲ್ಲಿಯೇ ಗಣರಾಜ್ಯೋತ್ಸವ ಕಾರ್ಯಕ್ರಮ ಆಚರಣೆ ಕುರಿತು ಮುಖಂಡರು ಸಲಹೆ ಅಭಿಪ್ರಾಯಗಳನ್ನು ನೀಡಿದರು.
ಮುಖಂಡರು ಮಾತನಾಡಿ ಕೊರೊನಾ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಗಣರಾಜ್ಯೋತ್ಸವ ಆಚರಣೆಯಾಗಲಿ. ಜಿಲ್ಲೆಯ ಎಲ್ಲಾ ಕೇಂದ್ರ ಕಚೇರಿಗಳು, ಬ್ಯಾಂಕುಗಳಲ್ಲಿಯೂ ಕಡ್ಡಾಯವಾಗಿ ಗಣರಾಜ್ಯೋತ್ಸವ ಆಚರಿಸುವ ಸಂಬಂಧ ಜಿಲ್ಲಾಡಳಿತದಿಂದ ನಿರ್ದೇಶನ ಹೊರಡಿಸಬೇಕು. ರಾಷ್ಟ್ರೀಯ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ನಡೆಸಬೇಕು ಎಂಬುದೂ ಸೇರಿದಂತೆ ಇನ್ನಿತರ ಸಲಹೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನ ಅನುಸಾರ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ. ಕಾರ್ಯಕ್ರಮ ಸಂಬಂಧ ನೀಡಲಾಗುವ ನಿರ್ದೆಶನಗಳನ್ನು ಪಾಲನೆ ಮಾಡಲಾಗುತ್ತದೆ ಎಂದರು.
ಪಥ ಸಂಚಲನಕ್ಕೆ ತಾಲೀಮು ನಡೆಸಬೇಕು. ಕಾರ್ಯಕ್ರಮದಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆಗೆ ಅವಕಾಶವಿಲ್ಲದಿರುವ ಕಾರಣ ಇತರೆ ಇಲಾಖೆಗಳು ಅವಶ್ಯಕ ವ್ಯವಸ್ಥೆಗಳನ್ನು ಕೈಗೊಳ್ಳಬೇಕು. ಕಾರ್ಯಕ್ರಮ ನಿರ್ವಹಣೆಗಾಗಿ ಅಧಿಕಾರಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಿದ್ದು ಆ ಪ್ರಕಾರ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಸಂಬಂಧಿಸಿದ ಅಧಿಕಾರಿಗಳು ಪೂರ್ವ ಸಿದ್ದತೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಗೂಡೂರು ಭೀಮಸೇನ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ವಿವಿಧ ಸಂಘಟನೆಗಳ ಮುಖಂಡರಾದ ಶಾ. ಮುರಳಿ, ಸಿ.ಎಂ. ಕೃಷ್ಣಮೂರ್ತಿ, ನಿಜಧ್ವನಿ ಗೋವಿಂದರಾಜು, ಸುರೇಶ್ ನಾಯಕ, ಸಿ.ಎಂ. ಮಹದೇವಶೆಟ್ಟಿ, ಕೆ. ವೆಂಕಟರಾಜು, ಚಾ.ಗು. ನಾಗರಾಜು, ಜಿ. ಬಂಗಾರು, ಸಿ.ಎಂ. ನರಸಿಂಹಮೂರ್ತಿ, ಗು. ಪುರುಷೋತ್ತಮ್, ಜಯಕುಮಾರ್, ಚಾ.ಹ.ಶಿವರಾಜು, ಶಿವಣ್ಣ, ಕಣ್ಣೇಗಾಲ ಮಹದೇವನಾಯಕ, ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
