ಅನಾದಿ ಕಾಲದಿಂದಲೂ ಬಂಡವಾಳ ಶಾಹಿಗಳ ಐಶಾರಾಮ ಬದುಕನ್ನು ಕಟ್ಟಿ ಕೊಟ್ಟವರು ನಮ್ಮ ಕಾರ್ಮಿಕರು. ಸಿರಿವಂತರು ಚಿನ್ನದ ತಟ್ಟೆಯಲ್ಲಿ ತಿಂದು ಬೆಳ್ಳಿ ಲೋಟದಲ್ಲಿ ಕುಡಿದು ಸುಖದ ಸುಪ್ಪತ್ತಿಗೆಯಲ್ಲಿ ಮಲಗುತ್ತ ಜೀವನ ನಡೆಸಲು ಮೂಲ ಕಾರಣವೇ ಈ ಶ್ರಮಿಕ ವರ್ಗ.
ಸಮಾಜದಲ್ಲಿ ದುಡಿಯುವ ಶಾಪಕ್ಕೆಂದೇ ಒಂದು ವರ್ಗವು ಬದ್ಧವಾಗಿದ್ದರೆ ಸುಖಿಸುವ ವರಕ್ಕೇನೆ ಇನ್ನೊಂದು ವರ್ಗವು ಸಿದ್ಧವಾಗಿರುತ್ತದೆ. “ಹಣೆಬರಹ; ವಿಧಿವಿಲಾಸ; ಪಾಲಿಗೆಬಂದದ್ದು ಪಂಚಾಮೃತ” ಮುಂತಾದ ಒಣ ವೇದಾಂತದ ಮಾತುಗಳನ್ನು ಒತ್ತಟ್ಟಿಗಿಟ್ಟು ಸೈದ್ಧಾಂತಿಕ ಸಾಮಾಜಿಕ ವೈಜ್ಞಾನಿಕ ಹಾಗೂ ತಾಂತ್ರಿಕ ಆಧಾರದ ಮೇಲೆ ನಾವು ಚಿಂತಿಸಿದಾಗ ಒಂದು ಪ್ರಾಮಾಣಿಕ ಪರಿಣಾಮ ಲಭಿಸಿ ಸತ್ಯವಾದ ಫ಼ಲಿತಾಂಶವೂ ದೊರಕುತ್ತದೆ?!
ಸದಾ ದುಡಿವವರ ಮತ್ತು ಕೂತು ತಿನ್ನುವವರ ನಡುವಿನ ತಾರತಮ್ಯ ದೂರವಾಗಿ ಬಡವ-ಬಲ್ಲಿದ ಭೇದ-ಭಾವ ಮಾಯವಾಗಿ ಮಾನವೀಯತೆಯ ಉನ್ನತ ಧರ್ಮವು ಉದಯವಾಗುತ್ತದೆ! ಇದು ಹೀಗಾದಾಗ ಮಾತ್ರ ದುಡಿಮೆಯ ಬಳಗಕ್ಕೆ ನ್ಯಾಯವಾಗಿ ಸಿಗಬೇಕಾದ ಲಾಭಾಂಶದ ಪಾಲು ಕೂಡ ಖಂಡಿತವಾಗಿ ದೊರಕುತ್ತದೆ. “ಸರ್ವರಿಗೂ ಸಮಪಾಲು-ಸಕಲರಿಗೂ ಸಮಬಾಳು” ಮತ್ತು
ಹಂಚಿಕೊಂಡು ತಿನ್ನುವವನೇ ಮಹಾತ್ಮ! ಎಂಬ
ನಾಣ್ಣುಡಿ ಅರ್ಥಪೂರ್ಣ ಆಗುತ್ತದೆ?
ಅಜ್ಜಹಾಕಿದ ಆಲದಮರಕ್ಕೆ ಜೋತುಬಿದ್ದು ಅಥವ ನೇತಾಡುವುದನ್ನ ಬದಿಗಿಟ್ಟು ಈಗಲಾದರೂ ಇಂದಿನ ಯುವ ಉದ್ಯಮಿಗಳು ಸ್ವಾಭಾವಿಕದ
“ಬದಲಾವಣೆ ಜಗತ್ತಿನ ನಿಯಮ”ಎಂಬುದನ್ನರಿತು ತಮ್ಮನ್ನುತಾವೇ ಬದಲಾಯಿಸಿಕೊಳ್ಳುವುದು ಸರ್ವ ವಿಧದಲ್ಲಿ ಶ್ಲಾಘನೀಯ! (ಬಾಲ-ಮಹಿಳಾ) ಕಾರ್ಮಿಕರು ಅಮೂಲ್ಯ ಜೀವ-ಜೀವನವನ್ನು ಮುಡಿಪಾಗಿಟ್ಟು ತಮ್ಮ ಧಣಿಗಳು ಜಾಗತಿಕ ಮಟ್ಟದಲ್ಲಿ ಮೇಲೇರುವಂತೆ ಹಾಗೂ ಸರ್ವತೋಮುಖವಾಗಿ ಅಭಿವೃದ್ಧಿ ಆಗುವಂತೆ ತಮ್ಮ ಬೆವರು ಹರಿಸಿ ರಕ್ತ ಸುರಿಸಿ ಹಗಲಿರುಳು ದುಡಿಯುತ್ತಾರೆ.
ಇಂಥ ನಿಸ್ವಾರ್ಥ ತ್ಯಾಗಜೀವಿ ಕಾರ್ಮಿಕರ ಜೀವನ ಶೈಲಿಯನ್ನ ಮಾರ್ಪಡಿಸಬೇಕಾದುದು ಪ್ರತಿಯೊಬ್ಬ ಮಾಲೀಕನ ಆದ್ಯ ಕರ್ತವ್ಯ? ಯಾವಾಗಲೂ
ಕಾರ್ಮಿಕರ ಮತ್ತು ಮಾಲೀಕರ ನಡುವೆ ಪರಸ್ಪರ understanding, co-operation & co-ordination ನಿರಂತರವಾಗಿ ಸಾಗಿದಾಗ ಮಾತ್ರ ಕಾರ್ಮಿಕ ಸಮಾಜವು ಸಂಪೂರ್ಣ ಪ್ರಗತಿಯನ್ನು ಸಾಧಿಸುತ್ತದೆ, ತನ್ಮೂಲಕ ಇಡೀ ದೇಶವು ಉನ್ನತ ಅಭಿವೃದ್ಧಿಯನ್ನು ಹೊಂದುತ್ತದೆ!
ಮೇಡೇ : ಐತಿಹಾಸಿಕ ಹಿನ್ನೆಲೆ:-
ಕ್ರಿ.ಶ.108ರಲ್ಲಿ ರೋಮ್ ಸಾಮ್ರಾಜ್ಯದ ಕೊಮ್ಮೊಡಸ್ ಚಕ್ರವರ್ತಿಯು ಮೊಟ್ಟಮೊದಲ ಕಾರ್ಮಿಕ ದಿನಾಚರಣೆ ಮೇಯುಮ ವನ್ನು ತಿಂಗಳುಪೂರ್ತಿ ಆಚರಿಸಿದ ಉಲ್ಲೇಖವಿದೆ. ಕ್ರಮೇಣ ಏಪ್ರಿಲ್ 27ರಿಂದ ಮೇ 3ವರೆಗೆ 1ವಾರ ಕಾಲ ಆಚರಿಸಲ್ಪಟ್ಟು 6ನೆ ಶತಮಾನದಿಂದ ಕೇವಲ 3 ದಿನಗಳಿಗೆ ಮಾತ್ರ ಸೀಮಿತವಾಯಿತು. ಈ ದಿನವನ್ನು ಯೂರೋಪ್ ರಾಷ್ಟ್ರಗಳಲ್ಲಿ ಹಬ್ಬ ವನ್ನಾಗಿ ಆಚರಿಸುವ ಪದ್ಧತಿ ಪ್ರಾರಂಭವಾಯ್ತು! 17ನೇ ಶತಮಾನದ ಜರ್ಮನಿಯಲ್ಲಿ ಮೇ1ರಂದು ಮತ್ತು ಇದರ ಹಿಂದಿನ-ಮುಂದಿನ ದಿನಗಳಂದೂ ಸಹ ಅಮೋಘ ಆಚರಣೆ ಪ್ರಾರಂಭಿಸಿದರೆ,ಫ಼್ರಾನ್ಸ್ ಮತ್ತು ರಷ್ಯ ದೇಶಗಳಲ್ಲಿ ವರ್ಣರಂಜಿತಮಯ ಅದ್ಧೂರಿಯಾಗಿ ಆಚರಿಸಲು ಶುರುವಾಯ್ತು.
1889ರಲ್ಲಿ ಪ್ಯಾರಿಸ್‍ನಲ್ಲಿ ಜರುಗಿದ ಅಂತರ್ ರಾಷ್ಟ್ರ ಸಾಮಾಜಿಕ ಮತ್ತು ಕಾರ್ಮಿಕ ಕ್ಷೇಮ ಅಭಿವೃದ್ಧಿ ಮಂಡಳಿ ಸರ್ವಸದಸ್ಯ ರಾಷ್ಟ್ರಗಳ ಸಭೆಯಲ್ಲಿ “ಮೇ-1ನ್ನು ಇಂಟರ್ ನ್ಯಾಶನಲ್ ಲೇಬರ್ ಡೇ” ಎಂದು ಅಧಿಕೃತವಾಗಿ ಘೋಷಣೆ ಮಾಡಿದ ನಂತರ 1890 ರಿಂದ ಪ್ರಪಂಚದ 108 ದೇಶಗಳು ಮೇ-ಡೇ ಆಚರಣೆ ಮಾಡಲು ಪ್ರಾರಂಭಿಸಿದರು. ಇದಕ್ಕೆ ಪೂರಕವಾಗಿ 20ನೇ ಶತಮಾನದಿಂದ “ಲೀಗ್ ಆಫ್ ನೇಶನ್ಸ್” ಸೂಚನೆಯಂತೆ ಪ್ರತಿ ವರ್ಷ ಮೇ1ರಂದು ವಿಶ್ವದ ಬಹುತೇಕ ಎಲ್ಲ ದೇಶಗಳು ಮೇ-ದಿನಾಚರಣೆ ಅಥವ ಕಾರ್ಮಿಕ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಿವೆ.
ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದ ನಂತರ ಅಂತರ್ ರಾಷ್ಟ್ರೀಯ ಕಾರ್ಮಿಕ ಸಮಸ್ಯೆಗಳಿಗೆ ಮೀಸಲಾದ ವಿಶ್ವ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಶ್ವ ಕಾರ್ಮಿಕರ ನ್ಯಾಯಾಲಯ, ವಿಶ್ವ ಕಾರ್ಮಿಕ ಕಾಯಿದೆ, ನಿಯಮ, ಕಾನೂನು, ಕಟ್ಟಳೆ ಇತ್ಯಾದಿ ಜಾರಿಗೆ ಬಂದವು. ತತ್ಪರಿಣಾಮವಾಗಿ ಇತೀಚಿನ ವರ್ಷಗಳಲ್ಲಿ ಕಾರ್ಮಿಕನೂ ಸಹ ಆಡಳಿತವರ್ಗದ
ಅಥವ ಮಾಲೀಕತ್ವ ಮಂಡಲಿಯ ಕಷ್ಟ ಸುಖ, ಲಾಭ ನಷ್ಟ, ಮುಂತಾದವುಗಳಲ್ಲಿ ಪಾಲುದಾರ ಆಗಿರುವುದು ಎಲ್ಲರೂ ಮೆಚ್ಚುವಂತಾದ್ದು.
ಭಾರತದಲ್ಲಿ ಮೊಟ್ಟಮೊದಲ ಮೇ-ದಿನಾಚರಣೆ:-
“ಲೇಬರ್ ಕಿಸಾನ್ ಪಾರ್ಟಿ ಆಫ಼್ ಹಿಂದೂಸ್ತಾನ್” ವತಿಯಿಂದ 1.5.1923ರಂದು ಮದ್ರಾಸ್ [ಚೆನ್ನೈ] ನಲ್ಲಿ ಆಚರಿಸಲ್ಪಟ್ಟಿತು! ಇದೇದಿನ ಪ್ರಥಮಬಾರಿಗೆ ಕಾರ್ಮಿಕರ ಚಿಹ್ನೆಯಾಗಿ ಕೆಂಪು ಬಾವುಟವನ್ನು ಉಪಯೋಗಿಸಲಾಯ್ತು. ಆ ನಂತರವಷ್ಟೆ ಕಮ್ಯುನಿಸ್ಟ್ ಪಕ್ಷಗಳು ಇದೇ ಕೆಂಪುಬಾವುಟವನ್ನು ತಮ್ಮ ರಾಜಕೀಯ ಪಕ್ಷದ ಗುರುತನ್ನಾಗಿಸಿ ಮಾಡಿ ಕೊಂಡವು.
ಮೇ ದಿನಾಚರಣೆಯಂದು ಪ್ರತಿಯೊಬ್ಬ ಕಾರ್ಮಿಕನ ಶ್ರಮವನ್ನು ಮಾತ್ರವಲ್ಲದೇ ಆತನ
ಮಡದಿ ಮಕ್ಕಳ ಸಾಧನೆ, ಮುಂತಾದವುಗಳನ್ನು ಗುರುತಿಸಿ ಅವರನ್ನು ಸಹ ಬಹುಮಾನಿಸಿ ಸನ್ಮಾನಿಸಿ ಗೌರವಿಸೊ ಪದ್ಧತಿ ಪ್ರಾರಂಭವಾಯ್ತು.
ನಮ್ಮ ದೇಶದಲ್ಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಂತರ್ರಾಷ್ಟ್ರೀಯ ಶ್ರಮಿಕ್ ದಿವಸ್ ಆಚರಿಸಲು ಮೇ1ರಂದು ಸಾರ್ವಜನಿಕ ರಜೆ ಘೋಷಿಸಿತು. ಈ ದಿನವನ್ನು ಹಿಂದಿಯಲ್ಲಿ ‘ಕಾಮ್ಗರ್ ದಿನ್’ ಎಂದೂ ಕನ್ನಡದಲ್ಲಿ ‘ಕಾರ್ಮಿಕರ ದಿನಾಚರಣೆ’ ಎಂದೂ ಆಚರಿಸಲ್ಪಡುತ್ತದೆ. ಜೈಕಾರ್ಮಿಕ್! ಜೈಭಾರತ್!!

ಕುಮಾರಕವಿ ಬಿ.ಎನ್.ನಟರಾಜ
9036976471