ಚಾಮರಾಜನಗರ: ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ೭೭ನೇ ಸಾಮಾನ್ಯ ಸಭೆಯು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ.ಶಾಂತಮೂರ್ತಿ ಕುಲಗಾಣ ರವರ ಅಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಇಂದು ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಕುಲಗಾಣ ರವರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಕಡೆಗಳಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಕಾನೂನಾತ್ಮಕವಾಗಿ ಬಡಾವಣೆಗಳು ಮತ್ತು ಮನೆಗಳನ್ನು ನಿರ್ಮಾಣ ಮಾಡಬೇಕೆಂದು ತಿಳಿಸಿದರು.
ಪ್ರಾಧಿಕಾರವು ಮಹಾಯೋಜನೆ (ಪರಿಷ್ಕೃತ-೨) ತಾತ್ಕಾಲಿಕವನ್ನು ಪತ್ರಿಕಾ ಪ್ರಕಟಣೆ ಮೂಲಕ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಅದರಂತೆ, ಪ್ರಾಧಿಕಾರದ ಕಚೇರಿಯಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು. ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ಇವೆಲ್ಲವನ್ನು ಪರಿಶೀಲಿಸಿ ಸೂಕ್ತ ಮತ್ತು ಅವಶ್ಯಕತೆಗಳನ್ನು ಗಮನಿಸಿ ಪರಿಷ್ಕರಿಸಿ ಸರ್ಕಾರಕ್ಕೆ ಕಳುಹಿಸಲು ತೀರ್ಮಾನಿಸಲಾಯಿತು.
ಚಾಮರಾಜನಗರಕ್ಕೆ ಹೆಚ್ಚಿನ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ನಾಗರಿಕರು ಸೇರಿದಂತೆ ಎಲ್ಲರೂ ಸಹಕಾರ ನೀಡುವ ಮೂಲಕ ಅಭಿವೃದ್ಧಿಗೆ ಪಣ ತೊಡಬೇಕಾಗಿದೆ. ಪ್ರಾಧಿಕಾರದಿಂದ ಸಿದ್ಧಪಡಿಸಿದ ಮಹಾಯೋಜನೆಗೆ ಅನುಗುಣವಾಗಿ ಸಾರ್ವಜನಿಕರು ಸಹಕರಿಸಿದರೆ ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಭೂ ಮಾರಾಟಗಾರರು ತಮ್ಮ ವೈಯಕ್ತಿಕ ಲಾಭಕೋಸ್ಕರ ತುಂಡು ಭೂಮಿಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಿರುತ್ತಾರೆ. ಅಂತಹ ಕಡೆಗಳಲ್ಲಿ ರಸ್ತೆ, ಒಳಚರಂಡಿ, ವಿದ್ಯುಚ್ಛಕ್ತಿ ಇಲ್ಲದೆ ಮೂಲಭೂತ ಸೌಕರ್ಯಗಳಿಲ್ಲದೆ ಕೊಳಗೇರಿಗಳಾಗಿ ಪರಿವರ್ತನೆಯಾಗುತ್ತಿವೆ. ಇಂತಹ ಕಡೆಗಳಲ್ಲಿ ಕಾನೂನಿನ ಪ್ರಕಾರವಾಗಿ ಉದ್ಯಾನವನ, ನಾಗರಿಕ ಮೂಲಭೂತ ಸೌಕರ್ಯ ನಿವೇಶನ ಬಿಡದೆ ವಂಚಿಸುತ್ತಿದ್ದಾರೆ. ಇಂತಹ ಭೂಮಿಯಲ್ಲಿ ಜಾಗ ಖರೀದಿ ಮಾಡುವುದರಿಂದ ಯಾವುದೇ ರೀತಿಯಲ್ಲೂ ಅನುಕೂಲವಾಗುವುದಿಲ್ಲ.
ಖಾತೆ, ಇ-ಸ್ವತ್ತು ತೆಗೆದುಕೊಳ್ಳಲಾಗದೆ ಮುಂದಿನ ದಿನಗಳಲ್ಲಿ ಖರೀದಿದಾರರು ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಇದೇ ರೀತಿ ಅನೇಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅನಧಿಕೃತ ಭೂ ವಿಂಗಡಣೆ ಮಾಡಿ ಮಾರಾಟ ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಇಂತಹ ಕಡೆಗಳಲ್ಲಿ ಖರೀದಿದಾರರು ಯಾವುದೇ ಕಾರಣಕ್ಕೂ ಜಾಗ ಖರೀದಿಸಬಾರದು. ಖರೀದಿದಾರರು ಈಗಲೇ ಜಾಗೃತರಾಗಿ ಪ್ರಾಧಿಕಾರದಿಂದ ಅನುಮೋದನೆಯಾಗಿರುವ ಬಡಾವಣೆಗಳಲ್ಲಿ ಮಾತ್ರ ನಿವೇಶನ ಖರೀದಿಸಬೇಕೆಂದು ತಿಳಿಸಿದರು.
ಖರೀದಿದಾರರು ತಮ್ಮ ಬಹುದಿನದ ಕನಸಾದ ಮನೆ ನಿರ್ಮಾಣದ ಗುರಿಯನ್ನು ಈಡೇರಿಸಿಕೊಳ್ಳಲು ಸ್ವಂತ ಲಾಭಕೋಸ್ಕರ ಕಾರ್ಯ ನಿರ್ವಹಿಸುವ ಮಧ್ಯವರ್ತಿಗಳ ಮೊರೆ ಹೋಗಬೇಡಿ. ಇದರಿಂದ ಮಾರಾಟಗಾರರಿಗಿಂತ ಖರೀದಿದಾರರಿಗೆ ತೊಂದರೆ ಹೆಚ್ಚಾಗಲಿದೆ. ಪ್ರಾಧಿಕಾರದ ಕಚೇರಿಯಲ್ಲಿ ಮಧ್ಯವರ್ತಿಗಳ ಅವಕಾಶವಿರುವುದಿಲ್ಲ. ನಾಗರಿಕರು ನೇರವಾಗಿ ಪ್ರಾಧಿಕಾರದ ಕಚೇರಿಗೆ ಬಂದು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ, ಪ್ರಾಧಿಕಾರದ ಕಚೇರಿಗೆ ಬಾರದ ಕೆಲವರು ತಮ್ಮ ಕೆಲಸಗಳನ್ನು ಮಾಡಿಸುತ್ತೇವೆಂದು ವಂಚಿಸುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಪ್ರಾಧಿಕಾರ ವಿರುವುದು ಸಾರ್ವಜನಿಕರ ಸೇವೆಯ ಜೊತೆಗೆ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸಲು. ಆದ್ದರಿಂದ ಅಧಿಕಾರಿಗಳನ್ನು ನೇರ ಸಂಪರ್ಕ ಮಾಡುವ ಮೂಲಕ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬಹುದು. ಕಾನೂನಾತ್ಮಕವಾಗಿ ಯಾವುದೇ ಕೆಲಸ ಕಾರ್ಯಗಳು ಅನವಶ್ಯಕವಾಗಿ ತಡವಾಗುವುದಿಲ್ಲ. ಯಾರಿಗಾದರೂ ತಪ್ಪು ಮಾಹಿತಿ ನೀಡಿದರೆ ಅದನ್ನು ಕಚೇರಿಯಲ್ಲಿ ಆಯುಕ್ತರ ಗಮನಕ್ಕೆ ತರಬೇಕು. ಅಧಿಕಾರಿಗಳು ಸಹ ಮಧ್ಯವರ್ತಿಗಳನ್ನು ದೂರವಿಡಬೇಕು ಎಂದರು.
ಯಾವುದೇ ಜಾಗವನ್ನು ಖರೀದಿಸುವಾಗ ಅದು ಮಹಾಯೋಜನೆಯಲ್ಲಿರುವಂತೆ ಯಾವ ಉಪಯೋಗಕ್ಕೆ ಕಾಯ್ದಿರಿಸಲಾಗಿದೆ ಎಂಬುದನ್ನು ಪರಿಶೀಲಿಸಬೇಕು. ನಿವೇಶನಗಳನ್ನು ಕೊಂಡುಕೊಳ್ಳುವಾಗ ಪ್ರಾಧಿಕಾರದ ಕಚೇರಿಗೆ ಬಂದು ಅಧಿಕಾರಿಗಳಿಗೆ ದಾಖಲೆಗಳನ್ನು ತೋರಿಸಿ ಮಾಹಿತಿ ತೆಗೆದುಕೊಳ್ಳಬೇಕು. ಈ ಕೆಲಸಗಳಿಗೆ ಯಾರ ಮಧ್ಯಸ್ತಿಕೆಯೂ ಇಲ್ಲದೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಪ್ರಾಧಿಕಾರವು ಜನಸ್ನೇಹಿಯಾಗಿ ಕಾರ್‍ಯ ನಿರ್ವಹಿಸಲಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಉದ್ಯಾನವನ ಮತ್ತು ಕೆರೆಗಳ ಅಭಿವೃದ್ಧಿಗೆ ಯೋಜನೆ ಮಾಡಲು ತಿಳಿಸಿದರು. ಜನೋಪಯೋಗಿ ಕೆರೆಗಳು ಮತ್ತು ಅಭಿವೃದ್ಧಿ ಕುಂಠಿತವಾಗಿರುವ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ ತ್ವರಿತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.
ನಗರದ ಅಭಿವೃದ್ಧಿಗೆ ಎಲ್ಲಾ ಅಧಿಕಾರಿಗಳು ಕಾನೂನು ಮಿತಿಯಲ್ಲಿ ಅಭಿವೃದ್ಧಿಗೆ ಪೂರಕವಾಗಿ ಯಾವುದೇ ಕೆಲಸ ಕಾರ್ಯಗಳನ್ನು ಅನಗತ್ಯ ವಿಳಂಬ ಮಾಡದೆ ತ್ವರಿತವಾಗಿ ಮಾಡಬೇಕೆಂದು ತಿಳಿಸಿದರು.
ಸದರಿ ಸಭೆಯಲ್ಲಿ ಮಾಹೆವಾರು ಜಮಾ-ಖರ್ಚುಗಳ ಸ್ಥಿರೀಕರಣ ಮಾಡಲಾಯಿತು ಹಾಗೂ ವಸತಿ, ವಾಣಿಜ್ಯ ಹಾಗೂ ಕೈಗಾರಿಕೆ ಉದ್ದೇಶದ ೧೯ ವಿನ್ಯಾಸ ಅನುಮೋದನೆಗಳು, ೦೧ ಭೂ ಪರಿವರ್ತನೆ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಇತರೆ ವಿಷಯಗಳಾದ ಮಹಾಯೋಜನೆ (ಪರಿಷ್ಕೃತ-೨), ವಿನ್ಯಾಸ ನಕ್ಷೆ ಅಭಿವೃದ್ಧಿ, ಉದ್ಯಾನವನ ಅಭಿವೃದ್ಧಿ ಮತ್ತು ಕೆರೆ ಅಭಿವೃದ್ಧಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಅನ್ನಪೂರ್ಣ, ಕೂಸಣ್ಣ, ಆರ್. ರಂಗಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ. ಎಂ.ಎಸ್. ಪಂಕಜ, ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜಕ ಸದಸ್ಯರಾದ ಎಂ.ಹೆಚ್. ರಿತೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು, ನಗರಸಭೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಲೋಕೋಪಯೋಗಿ ಇಲಾಖೆ, ಚೆಸ್ಕಾಂ ಇಲಾಖೆ, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಅಧಿಕಾರಿಗಳು ಹಾಜರಿದ್ದರು.
