ಗುಂಡ್ಲುಪೇಟೆ: ಪರಿಶಿಷ್ಟ ಪಂಗಡಗಳ ಶೇ.7.5 ಮೀಸಲಾತಿ ಹೆಚ್ಚಳಕ್ಕಾಗಿ ಬೆಂಗಳೂರಿನ ಪ್ರೀಡಂ ಫಾರ್ಕ್‍ನಲ್ಲಿ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ನಡೆಸುತ್ತಿರುವ ಧರಣಿ ಬೆಂಬಲಿಸಿ ತಾಲೂಕು ನಾಯಕ ಸಮುದಾಯದ ವತಿಯಿಂದ ತಾಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ಹೊರ ವಲಯದಲ್ಲಿರುವ ಪಟ್ಟಲದಮ್ಮ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಹೊರಟ ನಾಯಕ ಜನಾಂಗದ ಮುಖಂಡರು ರಾಷ್ಟ್ರೀಯ ಹೆದ್ದಾರಿ ಮೂಲಕ ರ್ಯಾಲಿ ನಡೆಸಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ವೃತ್ತದಲ್ಲಿ ಮಾನನ ಸರಪಳಿ ನಿರ್ಮಿಸಿ ಸರ್ಕಾರದ ನಡೆ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕೂಡಲೇ 7.5 ಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ, ನಂತರ ತಾಲೂಕು ಕಚೇರಿ ಮುಂದೆ ಜಮಾಯಿಸಿದರು.

ಈ ಸಂದರ್ಭದಲ್ಲಿ ನಾಯಕ ಸಮುದಾಯದ ಮುಖಂಡ ಹಾಗು ವಕೀಲರಾದ ವೆಂಕಟೇಶ್ ಮಾತನಾಡಿ, ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಮೀಸಲಾತಿ ಜಾರಿಗೊಳಿಸುತ್ತೇವೆ ಎಂದಿದ್ದರು. ಆದರೆ ಮತ್ತೊಂದು ಚುನಾವಣೆ ಸಮೀಪಿಸುತ್ತಿದ್ದರು ಮೀಸಲಾತಿ ನೀಡಲು ಹಿಂದೇಟು ಹಾಕುತ್ತಿರುವ ನಡೆ ಖಂಡನೀಯ. ನಾಯಕ ಸಮಾಜದ ಹೆಸರೇಳಿಕೊಂಡು ಅಧಿಕಾರ ಹಿಡಿದಿರುವ ಸಚಿವರು, ಶಾಸಕರು, ವಿವಿಧ ನಿಗಮ ಮಂಡಳಿ ಅಧ್ಯಕ್ಷರು ಸರ್ಕಾರದ ಮೇಲೆ ಒತ್ತಡ ತಂದು ಕೂಡಲೇ ಮೀಸಲಾತಿ ಜಾರಿ ಮಾಡುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಕೇವಲ ಭರವಸೆ ನೀಡಿ ಕಾಲ ಕಳೆಯುತ್ತಿದೆ. ಎರಡು ವಿಧಾನಸಭಾ ಅಧಿವೇಶನ ಮುಗಿದರು ಕೂಡ ನಾಯಕ ಸಮುದಾಯದ 7.5 ಮೀಸಲಾತಿ ಹೆಚ್ಚಳದ ಕುರಿತು ಚರ್ಚೆಯೆ ನಡೆದಿಲ್ಲ. 1991ರ ಸಮೀಕ್ಷೆ ಪ್ರಕಾರ ಶೇ.3ರಷ್ಟು ಮೀಸಲಾತಿಯನ್ನು ಸರ್ಕಾರ ಘೋಷಣೆ ಮಾಡಿತ್ತು. ಆದರೆ ನ್ಯಾ.ನಾಗಮೋಹನ್ ದಾಸ್ ವರದಿ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ 7.5 ಮೀಸಲಾತಿ ಜಾರಿಗೊಳಿಸದೆ ಸಮುದಾಯವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ಪುರಸಭೆ ಸದಸ್ಯ ಎನ್.ಕುಮಾರ್ ಮಾತನಾಡಿ, ಮೀಸಲಾತಿ ಬೇಕು ಎಂದು ಭೀಕ್ಷೆ ಕೇಳುತ್ತಿಲ್ಲ. ಅದು ನಮ್ಮ ಹಕ್ಕಾಗಿದೆ. ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಧರಣಿ ಆರಂಭಿಸಿ 100ನೇ ದಿನಕ್ಕೆ ಕಾಲಿಟ್ಟರು ಕೂಡ ಮುಖ್ಯಮಂತ್ರಿಗಳಿಂದ ಯಾವುದೇ ಸ್ಪಂದನೆಯಿಲ್ಲ. ಸೌಜನ್ಯಕ್ಕೆ ಒಬ್ಬಿಬ್ಬರನ್ನು ಕಳುಹಿಸಿದ್ದಿರಿಯೇ ಹೊರತೆ ಖುದ್ದು ಧರಣಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಕೇಳಿಲ್ಲ. ಹಾಗಿದ್ರೆ ಈ ಸಮುದಾಯದ ಕೂಗಿಗೆ ಬೆಲೆ ಇಲ್ವಾ? ಎಂದು ಪ್ರಶ್ನಿಸಿ, ಮುಂದಿನ ಚುನಾವಣೆಯಲ್ಲಿ ನಾಯಕ ಸಮಾಜದವರು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಂದು ತಿಳಿಸಿದರು.
ನಾಯಕ ಸಮುದಾಯದ ಮುಖಂಡ ಗುಂಡ್ಲುಪೇಟೆ ಮಾಧು ಮಾತನಾಡಿ, ಮೀಸಲಾತಿ ಸರ್ಕಾರದ ಸ್ವತ್ತಲ್ಲ. ನಾವು ಸಂವಿಧಾನದ ಬದ್ಧವಾದ ಹಕ್ಕು ಕೇಳುತ್ತಿದ್ದೇವೆ. ಸರ್ಕಾರ ನಾಯಕ ಸಮಾಜದವರ ತುಟಿಗೆ ತುಪ್ಪ ಸವರಿ ಊಟಕ್ಕೆ ವಿಷ ಬೆರೆಸುತ್ತಿದೆ. ಚುನಾವಣೆಯಲ್ಲಿ ನಮ್ಮ ಮತಗಳೇ ನಿರ್ಣಾಯಕವಾಗಿದೆ. ಇದನ್ನು ಮನಗಂಡಿ ಕೂಡಲೇ ಮೀಸಲಾತಿಗೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಹಂಗಳ ಗ್ರಾಪಂ ಸದಸ್ಯ ವೃಷಬೇಂದ್ರ ಮಾತನಾಡಿ, ನೆರೆಯ ಕೇರಳ, ತಮಿಳುನಾಡಿನಲ್ಲಿ ಮೀಸಲಾತಿ ಹೆಚ್ಚಳ ಮಾಡಿದೆ ಆದರೆ ನಮ್ಮ ಸರ್ಕಾರ ಮೀಸಲಾತಿ ಕೊಡಲು ಹಿಂದೆ ಮುಂದೆ ನೋಡುತ್ತಿದೆ. ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಜಾರಿ ಮಾಡುತ್ತೇವೆ ಎಂದವರು ಇಲ್ಲಿಯ ತನಕ ಕಾರ್ಯರೂಪಕ್ಕೆ ತಂದಿಲ್ಲ. ಮೀಸಲಾತಿ ನೀಡದಿದ್ದರೆ 17 ಜನ ಶಾಸಕರು ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ ಎಂದವರು ಈಗ ಎಲ್ಲಿದ್ಧೀರಿ ಎಂದು ಪ್ರಶ್ನಿಸಿ, ಕೂಡಲೇ ಮೀಸಲಾತಿ ಜಾರಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮ, ಹೋಬಳಿ ಮಟ್ಟದಲ್ಲಿ ಧರಣಿ-ಪ್ರತಿಭಟನೆಗಳು ಉಗ್ರರೂಪ ಪಡೆದುಕೊಳ್ಳಲಿವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಮಹೇಶ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಜೊತೆಗೆ ಪ್ರತಿಭಟನೆ ಆಗಮಿಸಿದವರಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಗುಂಡ್ಲುಪೇಟೆ ನಾಯಕರ ಬೀದಿಯ ವಿಜಯಲಕ್ಷ್ಮಿ ಸಂಘದ ವತಿಯಿಂದ ಏರ್ಪಾಡು ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ತಾಲೂಕಿನ ನಾಯಕ ಸಮುದಾಯ 38 ಗ್ರಾಮದ ಯಾಜಮಾನರು, ಮುಖಂಡರು, ಯುವಕರು ಸೇರಿದಂತೆ ಸಾವಿರಕ್ಕು ಅಧಿಕ ಮಂದಿ ಭಾಗವಹಿಸಿದ್ದರು.
ವರದಿ: ಬಸವರಾಜು ಎಸ್.ಹಂಗಳ