ಮೈಸೂರು: ಕೊರೊನಾದಿಂದ ಮುಕ್ತಿ ಹೊಂದಬೇಕಾದರೆ ಮಾಸ್ಕ್ ಧರಿಸುವುದು ಬಹುಮುಖ್ಯವಾಗಿರುವ ಕಾರಣ ಮಕ್ಕಳಿಂದಲೇ ಮಾಸ್ಕ್ ಧರಿಸುವ ಕುರಿತಂತೆ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ಹೀಗಾಗಿ ಮೈಸೂರಿನ ಯುವ ಬಳಗವು ಮಾಸ್ಕ್ ದಿನಾಚರಣೆಯನ್ನು ಆಚರಿಸಿ ಮಕ್ಕಳಲ್ಲಿ ಮಾಸ್ಕ್ ನ ಅರಿವು ಮೂಡಿಸಿತು.
ಕೆ ಆರ್ ಎಸ್ ಮುಖ್ಯ ರಸ್ತೆಯಲ್ಲಿರುವ ಅಂಬೇಡ್ಕರ್ ಕಾಲೊನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಾಸ್ಕ್ ಹಾಕುವ ಮೂಲಕ ಮಾಸ್ಕ್ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಾಜ್ಯ ನಿರ್ದೇಶಕ ರೇಣುಕ ರಾಜ್ ಅವರು, ಕೋವಿಡ್ ಮೂರನೇ ಅಲೆ ಮಕ್ಕಳಿಗೆ ವ್ಯಾಪಕವಾಗಿ ಹರಡುವ ಸೂಚನೆ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಒತ್ತು ನೀಡಬೇಕು. ಮಾಸ್ಕ್ ಧರಿಸುವುದು ಈಗಲೂ ಬಹುಮುಖ್ಯ. ಮಾಸ್ಕ್ ಧರಿಸಿ ಜೀವ ಉಳಿಸಿ. ಜಾಗತಿಕ ಸಮುದಾಯಗಳ ಮೇಲೆ ಕೋವಿಡ್ ಪರಿಣಾಮ ಬೀರುತ್ತಿದೆ. ಸೋಂಕು ಹರಡುವಿಕೆ ತಡೆಗೆ ಸಹಾಯ ಮಾಡಬೇಕಿದೆ. ಮಾಸ್ಕ್ ಧರಿಸಿ, ಕೈಗಳನ್ನು ತೊಳೆಯುತ್ತಿರಿ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದರು.
ಕೋವಿಡ್ ವಿರುದ್ಧ ಹೊರಾಡಲು ಮಾಸ್ಕ್ ಹಾಕಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು, ಆಗಾಗ್ಗೆ ಸಾನಿಟೈಸರ್ ಬಳಕೆ, ಈ ಮೂರು ಅಸ್ತ್ರಗಳಾಗಿದ್ದು ಅದನ್ನು ಪಾಲನೆ ಮಾಡಲೇಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಾದ ರೇಣುಕರಾಜ, ಬಿಜೆಪಿ ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗರತ್ನ ಗೌಡ, ಮೈಸೂರು ಯುವ ಬಳಗದ ಅಧ್ಯಕ್ಷ ನವೀನ್, ಪಾಪಣ್ಣ ಇನ್ನಿತರರು ಹಾಜರಿದ್ದರು