ಮೈಸೂರು: ಮಗಳು ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ  ಕಾರಣಕ್ಕೆ ತಂದೆಯೇ ಮಗಳನ್ನು ಹತ್ಯೆಗೈದು ಪೊಲೀಸರಿಗೆ ಶರಣಾಗಿರುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದ್ದು, ಆಧುನಿಕ ಜಗತ್ತಿನಲ್ಲಿ ಮರ್ಯಾದಾ ಹತ್ಯೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆ ದುರಂತ ಸಾಕ್ಷಿಯಾಗಿದೆ.

ಪಟ್ಟಣದ ಗೊಲ್ಲರಬೀದಿಯ ನಿವಾಸಿ ಜಯರಾಂ  ಎಂಬಾತನೇ ಮಗಳನ್ನು ಕೊಂದ ಪಾಪಿ ತಂದೆಯಾಗಿದ್ದಾನೆ. ಈತನ ಮಗಳು  ಗಾಯಿತ್ರಿ(19) ಎಂಬಾಕೆ ಮಚ್ಚಿನೇಟಿಗೆ ಬಲಿಯಾದವಳು. ಗಾಯತ್ರಿ ಅನ್ಯ ಕೋಮಿನ ಯುವಕನನ್ನು ಪ್ರೀತಿಸುತ್ತಿರುವ ವಿಚಾರ ಹೆತ್ತವರಿಗೆ ಗೊತ್ತಾಗಿತ್ತು. ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಗಾಯತ್ರಿ ಮಾತ್ರ ತಾನು ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಈ ವಿಷಯವಾಗಿ ಮನೆಯಲ್ಲಿ ಜಟಾಪಟಿ ನಡೆದಿತ್ತು. ಮಗಳ ಮನಸ್ಸನ್ನು ಬದಲಾಯಿಸಲು ತಂದೆ ಜಯರಾಂ ಸರ್ವ ರೀತಿಯಲ್ಲಿಯೂ ಪ್ರಯತ್ನ ಮಾಡಿದ್ದರು. ಆದರೆ ಯಾವುದೇ ಒತ್ತಡಕ್ಕೂ ಮಗಳು ಗಾಯತ್ರಿ ಮಣಿದಿರಲಿಲ್ಲ.

ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ತಂದೆ ಜಯರಾಂಗೆ  (ಶುಕ್ರವಾರ) ಮಧ್ಯಾಹ್ನ 12.30 ಗಂಟೆ ಸಮಯದಲ್ಲಿ ಮಗಳು ಗಾಯತ್ರಿ  ಊಟ ತೆಗೆದುಕೊಂಡು ಹೋಗಿದ್ದಳು  ಊಟದ ಸಮಯದಲ್ಲಿ  ಮತ್ತೆ ಮಗಳೊಂದಿಗೆ ಮಾತು ಶುರುಮಾಡಿದ ಜಯರಾಂ ನೀನು ಪ್ರೀತಿಸುತ್ತಿರುವ ಯುವಕ ನಮ್ಮ ಕೋಮಿನವನಲ್ಲ. ದಯವಿಟ್ಟು ಅವನನ್ನು ಬಿಟ್ಟು ಬಿಡು ಎಂದಿದ್ದಾನೆ. ಆಗ ಗಾಯತ್ರಿ ನಾನು ಮದುವೆಯಾಗುವುದಾದರೆ ಅವನನ್ನೇ ಮದುವೆಯಾಗುವುದು. ಈ ವಿಚಾರದಲ್ಲಿ ನಾನು ಯಾರ ಮಾತನ್ನೂ ಕೇಳುವುದಿಲ್ಲ ಎಂದಿದ್ದಾಳೆ. ಇದರಿಂದ ಕೋಪಗೊಂಡ ಜಯರಾಂ ತನ್ನ ಬಳಿಯಿದ್ದ ಮಚ್ಚಿನಿಂದ ಆಕೆಯತ್ತ ಬೀಸಿದ್ದಾನೆ. ಈ ವೇಳೆ ಆಕೆ ಕೈಯನ್ನು ಅಡ್ಡ ಮಾಡಿದ್ದು ಮೊದಲ ಏಟು ಕೈಗೆ ಬಿದ್ದಿದೆ. ಆದರೆ ಅಷ್ಟಕ್ಕೆ ರೋಷ ತಣ್ಣಗಾಗದೆ ಮತ್ತೆ ಮಚ್ಚಿನಿಂದ ಆಕೆಯ ಕುತ್ತಿಗೆ ಭಾಗಕ್ಕೆ ಬೀಸಿದ್ದಾನೆ. ಪರಿಣಾಮ ಗಾಯತ್ರಿ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದಾಳೆ. ಮಗಳನ್ನು ಕೊಂದ ಬಳಿಕ ಜಯರಾಂ ನೇರವಾಗಿ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆಯೇ ಕೃತ್ಯ ನಡೆದ ಸ್ಥಳಕ್ಕೆ ಎಸ್ಪಿ ಚೇತನ್, ಡಿವೈಎಸ್ಪಿ ರವಿಪ್ರಸಾದ್, ಇನ್ಸ್ ಪೆಕ್ಟರ್ ಗಳಾದ ಜಗದೀಶ್, ಬಿ.ಆರ್ ಪ್ರದೀಪ್, ಪಿಎಸ್ಐ ಸದಾಶಿವತಿಪರೆಡ್ಡಿ, ಪುಟ್ಟರಾಜು ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

By admin