ಗುಂಡ್ಲುಪೇಟೆ: ಅಸಾಂಕ್ರಾಮಿಕ ರೋಗದಿಂದ ಹೆಚ್ಚಿನ ತೊಂದರೆಗಳು ಇತ್ತೀಚಿನ ದಶಕಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ತಡೆಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಸಲಹೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ನಡೆದ ‘ತಾಲೂಕು ಮಟ್ಟದ ಆರೋಗ್ಯ ಮೇಳ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 30 ವರ್ಷ ಮೇಲ್ಪಟ್ಟವರಲ್ಲಿ ಅಸಾಂಕ್ರಾಮಿಕ ರೋಗಗಳು ಹೆಚ್ಚಿನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇವರನ್ನು ತಪಾಸಣೆಗೆ ಒಳಪಡಿಸಿ ಚಿಕಿತ್ಸೆ ನೀಡಬೇಕು ಎಂಬ ಉದ್ಧೇಶದಿಂದ ಸರ್ಕಾರ ಆರೋಗ್ಯ ವಿಮೆ ಜಾರಿಗೊಳಿಸಿ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕದ ಯೋಜನೆಯಡಿ ಹೆಲ್ತ್ ಕಾರ್ಡ್ ನೀಡಲಾಗುತ್ತಿದೆ ಎಂದರು.
ಬಿಪಿಎಲ್ ಕಾರ್ಡ್‍ದಾರರಿಗೆ ಒಂದು ವರ್ಷದಲ್ಲಿ 5 ಲಕ್ಷದವರೆಗೆ ಆರೋಗ್ಯ ಚಿಕಿತ್ಸೆ ಮತ್ತು ಎಪಿಎಲ್ ಕಾರ್ಡ್‍ದಾರರಿಗೆ 1.5 ಲಕ್ಷದವರೆಗೆ ವಿಮೆ ಇರುತ್ತದೆ. ಎಲ್ಲಾ ವರ್ಗದ ಜನರಿಗೆ ಆರೋಗ್ಯ ಚಿಕಿತ್ಸೆ ಸಿಗಬೇಕು ಎಂಬ ಉದ್ಧೇಶದಿಂದ ಇದು ಜಾರಿಯಲ್ಲಿದೆ. ಈಗಾಗಲೇ ತಾಲೂಕಿನಲ್ಲಿ 16 ಸಾವಿರ ಹೆಲ್ತ್ ಕಾರ್ಡ್ ವಿತರಿಸಲಾಗಿದ್ದು, ಜಿಲ್ಲೆಯಲ್ಲಿ 2ಲಕ್ಷ 1 ಸಾವಿರ ಕಾರ್ಡ್ ನೀಡಲಾಗಿದೆ. ಜನರು ಮುಗ್ದತೆ, ಮೌಢ್ಯತೆ, ಅರಿವಿನ ಕೊರತೆಯಿಂದ ಸರ್ಕಾರದಿಂದ ದೊರಕುವ ಆರೋಗ್ಯ ಸೇವೆಯನ್ನು ಪಡೆದುಕೊಳ್ಳುತ್ತಿಲ್ಲ. ಆದ್ದರಿಂದ ಉಚಿತ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಪುರಸಭಾ ಅಧ್ಯಕ್ಷ ಪಿ.ಗಿರೀಶ್ ಮಾತನಾಡಿ, ದೇಶದಲ್ಲಿ ಶೇ.65ರಷ್ಟು ಜನರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಇಂದು ಯಾವುದೇ ತಪಾಸಣೆಗು ಸಾವಿರಾರು ರೂಪಾಯಿ ಕೊಡಬೇಕಾದ ಪರಿಸ್ಥಿತಿಯಿದೆ. ಆದ್ದತಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇದು ಉತ್ತಮ ಯೋಜನೆಯಾಗಿದ್ದು, ಸರ್ಕಾರ ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರ ಸರ್ಕಾರದ ಹೆಚ್ಚಿನ ಹಣ ಖರ್ಚು ಮಾಡುತ್ತಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಬಿಪಿ, ಶುಗರ್ ಪ್ರತಿ ಮನೆಗು ಕರೆಯದೆ ಬರುವ ಅತಿಥಿಗಳಾಗಿದ್ದಾರೆ. ಆದ್ದರಿಂದ ಕರೆಯದೆ ಬರುವ ಖಾಯಿಲೆಗಳಿಗೆ ಪ್ರಾಥಮಿಕ ಹಂತದಲ್ಲೆ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ರವಿಶಂಕರ್ ಮಾತನಾಡಿ, ಆರೋಗ್ಯ ಮೇಳದಲ್ಲಿ ಹೆಚ್ಚಿನ ಜನರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದು ಕೋರಿದರು.
ಪುರಸಭಾ ಸದಸ್ಯ ಎನ್.ಕುಮಾರ್ ಮಾತನಾಡಿ, ನಿರಂತರವಾಗಿ ಆರೋಗ್ಯ ಮೇಳ ನಡೆದರೆ ಹೆಚ್ಚಿನ ಜನರು ಇದರ ಸದುಪಯೋಗ ಪಡೆದುಕೊಳ್ಳುತ್ತಾರೆ. ನೇತ್ರದಾನ ಉತ್ತಮ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರಿಗೆ ಇದರ ಸೇವೆ ತಿಳಿಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ತಾಲೂಕು ಮಟ್ಟದ ಆರೋಗ್ಯ ಮೇಳದಲ್ಲಿ ಶಿಶು ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯಿತಿ, ಆಯುಷ್ ಸೇರಿದಂತೆ ವಿವಿಧ ಇಲಾಖೆ ವತಿಯಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ಪುರಸಭೆ ಸದಸ್ಯ ನಾಗೇಶ್, ಎನ್.ಕುಮಾರ್, ಮಹದೇವಮ್ಮ, ಮಂಗಳಮ್ಮ, ನಿರ್ಮಲ, ರಾಜಗೋಪಾಲ್, ತಾಪಂ ಇಓ ಶ್ರೀಕಂಠರಾಜೇ ಅರಸ್, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ನಂಜುಂಡೇಗೌಡ, ಆಸ್ಪತ್ರೆ ಆಡಳಿತಾಧಿಕಾರಿ ಮಂಜುನಾಥ್, ಡಾ.ನಾಗರಾಜು, ಡಾ.ಸಂಧ್ಯಾ, ಡಾ.ಹರ್ಷದ್ ಆಲಿ, ಡಾ.ಶ್ರೀನಿವಾಸ್, ಡಾ.ಶಶಿರೇಖಾ, ಡಾ.ಪುಷ್ಪಲತಾ, ಡಾ.ಶಕುಂತಲಾ, ಡಾ.ಪುನೀತಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿನಾಯಕ, ನೌಕರ ಪುಟ್ಟಸ್ವಾಮಿ ಸೇರಿದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.
ವರದಿ: ಬಸವರಾಜು ಎಸ್.ಹಂಗಳ