ಚಾಮರಾಜನಗರ: ನಗರದ ಉಪ್ಪಾರಬಡಾವಣೆಯಲ್ಲಿ ಮಂಟೇಸ್ವಾಮಿ ಅದ್ದೂರಿ Pಕೊಂಡೋತ್ಸವ ಶುಕ್ರವಾರ ಭಾರೀ ಜನಸ್ತೋಮದ ನಡುವೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಕೊಂಡೋತ್ಸವದ ಅಂಗವಾಗಿ ಬಡಾವಣೆ ಸೇರಿದಂತೆ ರಾಷ್ಟ್ರಿಯ ಹೆದ್ದಾರಿಯ ಎರಡುಬದಿಯಲ್ಲಿ ಹಾಗೂ ಮಧ್ಯಭಾಗದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಇಡೀ ರಸ್ತೆಯೇ ವಿದ್ಯುತ್ ದೀಪಗಳಿಂದ ಅಲಂಕರಿಸುವ ಮೂಲಕ ನೋಡುಗರ ಗಮನಸೆಳೆಯಿತು.
ನಾನಾಗ್ರಾಮಗಳಿಂದ ಮಂಟೇಸ್ವಾಮಿ ಕಂಡಾಯಗಳು ಆಗಮಿಸಿದ್ದವು. ಮಂಟೇಸ್ವಾಮಿ ದೇವಾಲಯದ ಆವರಣದಿಂದ ಹೊರಟ ಕಂಡಾಯಗಳಿಗೆ ನಗರದ ಕೊಳದಬೀದಿ ಗಣಪತಿ ದೇವಾಲಯದ ಬಳಿ ಕಂಡಾಯಗಳನ್ನು ಶುದ್ದ ನೀರಿನಿಂದ ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲಾಯಿತು.
ನಂತರ ನಾಗಪ್ಪಶೆಟ್ಟರ ಬೀದಿಮೂಲಕ ಸತ್ತಿಗೆ,ಸುರಾಪಾಣಿ, ನಗಾರಿನಿನಾದ ತಂಡದೊಂದಿಗೆ ಮಂಟೇಸ್ವಾಮಿ ಕಂಡಾಯದ ಮೆರವಣಿಗೆಗೆ ಅದ್ದೂರಿಚಾಲನೆ ದೊರೆಯಿತು.
ಮೆರವಣಿಗೆ ಸಾಗುವ ಮಾರ್ಗದಲ್ಲಿ ಸತ್ತಿಗೆ, ಸುರಾಪಾಣಿಗಳಿಗೆ ನಾನಾಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆ ಉದ್ದಕ್ಕೂ ಯುವಕರು, ಪರಸ್ವರ ಬಣ್ಣ ಎರಚಿಕೊಂಡು, ವಾದ್ಯಗಳ ಸದ್ದಿಗೆ ಕುಣಿದು ಕುಪ್ಪಳಿಸಿದರು.
ನಗರದ ದೊಡ್ಡಂಗಡಿಬೀದಿ, ಚಿಕ್ಕ ಅಂಗಡಿಬೀದಿ, ಸಂತೇಮರಹಳ್ಳಿ ವೃತ್ತದವರೆಗೂ ಭಾರಿಜನಸ್ತೋಮ ನೆರೆದಿದ್ದು, ಧರೆಗೆ ದೊಡ್ಡವರ ಕಂಡಾಯಗಳ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ಮಧ್ಯಾಹ್ನ ೧೨.೩೦ ರವೇಳೆಗೆ ಮಂಟೇಸ್ವಾಮಿ ಕಂಡಾಯದ ಮೆರವಣಿಗೆ ಮಂಟೇಸ್ವಾಮಿ ದೇವಾಲಯದ ಆವರಣ ತಲುಪಿತು.
೧೨.೪೫ ರ ವೇಳೆಗೆ ಅರ್ಚಕರು, ಕಂಡಾಯಹೊತ್ತವರು ಕೊಂಡ ಹಾಯ್ದರು. ನಂತರ ಹರಕೆಹೊತ್ತ ಭಕ್ತಾದಿಗಳು ಕೊಂಡ ಹಾಯ್ದು ತಮ್ಮ ಭಕ್ತಿಯ ಪರಾಕಾಷ್ಟೆ ಮೆರೆದರು.
ಕೆಳಗೆ ಸುಡುವ ಕೆಂಡ, ಮೇಲೆಸುಡುವ ಸೂರ್ಯನ ಬಿಸಿಲು ಎರಡರ ನಡುವೆ ಮಂಟೇಸ್ವಾಮಿ ಕೊಂಡೋತ್ಸವ ಭಕ್ತರ ಉದ್ಘೋಷಗಳೊಂದಿಗೆ ನೆರವೇರಿತು.
ಪುನೀತ್ ಸ್ಮರಣೆ; ಕಳೆದ ೫ ತಿಂಗಳ ಹಿಂದೆ ನಮ್ಮನ್ನಗಲಿದ ಚಿತ್ರನಟ ದಿ.ಡಾ.ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿದ ಅಭಿಮಾನಿಗಳು ನೆಚ್ಚಿನ ನಟನ ಗುಣಗಾನ ಮಾಡಿದರು.
ಇದೇವೇಳೆ ಭಗೀರಥಮಹರ್ಷಿ ಭಾವಚಿತ್ರಕ್ಕೂ ವಿಶೇಷ ಪೂಜೆ ಸಲ್ಲಿಸಲಾಯಿತು.
ಕೊಂಡೋತ್ಸವದ ಅಂಗವಾಗಿ ನಗರದ ಉಪ್ಪಾರಬಡಾವಣೆಯಲ್ಲಿ ಸಂಭ್ರಮ ಮೇಳೈಸಿದ್ದು, ನಾನಾಕಡೆಗಳಿಂದ ಕೊಂಡೋತ್ಸವ ವೀಕ್ಷಿಸಲು ನೆಂಟರಿಷ್ಠರು ಹೆಚ್ಚಿನಸಂಖ್ಯೆಯಲ್ಲಿ ಆಗಮಿಸಿದ್ದರು. ಕೊಂಡೋತ್ಸವದ ಬಳಿಕ ಭಕ್ತಾದಿಗಳು ಮಂಟೇಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆಸಲ್ಲಿಸಿದರು. ಕೊಂಡೋತ್ಸವದ ನಂತರವೂ ಬಡಾವಣೆಯ ಪ್ರಮುಖಬೀದಿಗಳಲ್ಲಿ ಮಂಟೇಸ್ವಾಮಿ ಕಂಡಾಯೋತ್ಸವ ಜರುಗಿತು.