ಹಾಸನ:  ಜಿಲ್ಲೆಯಲ್ಲಿ  ಕೊರೋನಾ ಸೊಂಕಿತರ ಸಂಖ್ಯೆ ದಿನದಿದಿಂದ  ಹೆಚ್ಚಾಗುತ್ತಿದ್ದು‌  ಸಾವು ನೋವುಗಳು ಏರಿಕೆಯಾಗುತ್ತಿದ್ದರೂ ಇದನ್ನು ತಡೆಯುವಲ್ಲಿ  ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್  ಮುಖಂಡ ಬಾಗೂರು ಮಂಜೇಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹಾಸನ ನಗರ ಸೇರಿದಂತೆ ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಕೊರತೆ ವ್ಯಾಪಾಕವಾಗಿದೆ. ನಗರದ ಹಿಮ್ಸ್ ನಲ್ಲಿ ( ಜಿಲ್ಲಾ ಆಸ್ಪತ್ರೆಯಲ್ಲಿ) ಆಕ್ಸಿಜನ್ ಕೊರತೆಯಿಂದ ಕೋವಿಡ್  ಸೋಂಕಿತರು ಸಾವಿಗೀಡಾಗುತ್ತಿದ್ದಾರೆ. ದಿನನಿತ್ಯ 20 ರಿಂದ 30 ಜನ ಸಾವನ್ನಪ್ಪುತ್ತಿದ್ದು, ಇದಕ್ಕೆ ಸರ್ಕಾರದ ಕಾರ್ಯವೈಖರಿಯೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ  ದಿನಕ್ಕೆ ಎರಡು‌ ಸಾವಿರ ಗಡಿ ದಾಟುತ್ತಿದೆ. ಇದು ಮೇಲ್ನೋಟಕ್ಕೆ ಆಗಿದ್ದು,  ಇನ್ನು‌ ಹೆಚ್ಚು ‌ಜನರು‌ ಸೋಂಕಿನಿಂದ ಬಳಲುತ್ತಿದ್ದಾರೆ.‌ ಸಾವಿನ ಪ್ರಮಾಣವೂ‌  ಕೂಡ ಹೆಚ್ಚುತ್ತಿದೆ. ಆದರೆ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ‌ ಮಾಹಿತಿಯನ್ನು ನೀಡುತ್ತಿಲ್ಲ. ಸುಳ್ಳು‌ ಹಾಗೂ ತಪ್ಪು ‌ಮಾಹಿತಿಯನ್ನು ನೀಡುತ್ತಿದೆ ಎಂದು ಆರೋಪಿಸಿದರು.ಆಕ್ಸಿಜನ್ ‌ಸಮಸ್ಯೆ‌ ಬಗ್ಗೆ‌ ಈವರೆಗೂ ಯಾರು ಮಾತನಾಡುತ್ತಿಲ್ಲ.  ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹಾಗೂ ಜಿಲ್ಲಾಧಿಕಾರಿ ‌ಆರ್ .ಗಿರೀಶ್ ಅವರು ಆಕ್ಸಿಜನ್ ಕೊರತೆ‌ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ನನಗೆ ಈಗಾಗಲೇ ಹಲವು ಸೊಂಕಿತರ‌ ಕುಟುಂಬದವರು ನನ್ನನ್ನು ಸಂಪರ್ಕಿಸಿ ಹೇಳಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರ‌‌ ಹಾಗೂ‌ ಹಾಸನ‌ ಜಿಲ್ಲಾಡಳಿತಕ್ಕೆ‌ ಕನಿಷ್ಟ‌ ಮಾನವೀಯತೆ‌ ‌ಇಲ್ಲದಂತೆ ವರ್ತಿಸುತ್ತಿದ್ದಾರೆ. ಸಾಲುಸಾಲಾಗಿ ನಿತ್ಯ ಸಾವಿನ ಸಂಖ್ಯೆ ‌ಏರಿಕೆಯಾಗುತ್ತಿದ್ದರೂ  ಇವರಿಗೆ ಕರುಣೆಯೇ ಇಲ್ಲ. ಆಕ್ಸಿಜನ್ ಸಮಪರ್ಕವಾಗಿ ಪೂರೈಸುವ ಕಡೆ ರಾಜ್ಯ ಸರ್ಕಾರ ಗಮನಿಸಬೇಕು. ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಾಸನ ಜಿಲ್ಲೆಯತ್ತ ತುರ್ತು ಗಮನಹರಿಸಬೇಕು ಎಂದು ಒತ್ತಾಯಿಸಿದರು. ರೆಮ್ಡಿಸಿವಿರ್ ಔಷಧಿಯ ಸಮಸ್ಯೆ ಇದ್ದರೂ ಸರ್ಕಾರ ನಿಗಾವಹಿಸುತ್ತಿಲ್ಲ. ಇನ್ನು ಲಸಿಕೆ ನೀಡುವಲ್ಲಿ ವಿಫಲವಾಗಿದೆ. ಮೊದಲ ಡೋಸ್ ಲಸಿಕೆ ತೆಗೆದುಕೊಂಡವರಿಗೆ ಎರಡನೇ‌ ಬಾರಿಗೆ  ಇಲ್ಲವಾಗಿರುವುದರಿಂದ ಆತಂಕಗೊಂಡಿದ್ದಾರೆ. ಸರ್ಕಾರ ಜನರ ಪ್ರಾಣ ಉಳಿಸಲು ನಿರ್ಲಕ್ಷ್ಯ ವಹಿಸುತ್ತಿದೆ ಎಂದು ದೂರಿದರು. ಹಾಸನದ ಆಸ್ಪತ್ರೆಗೆ 13   ಸಾವಿರ‌ ‌ಟನ್ ದ್ರವ ರೂಪದ‌ ಆಕ್ಸಿಜನ್ ಬಂದಿದೆ ಎಂದು ಆಸ್ಪತ್ರೆಯ ಮುಖ್ಯಸ್ಥರು ಹೇಳಿದ್ದರೂ ಸಾವು ಏಕೆ ಹೆಚ್ಚುತ್ತಿದೆ ಎಂದು ಪ್ರಶ್ನಿಸಿದ‌ ಅವರು ಆಕ್ಸಿಜನ್, ವೆಂಟಿಲೇಟರ್ ಕೊರತೆ ಹೆಚ್ಚಾಗಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಕೂಡ ಆಕ್ಸಿಜನ್ ಕೊರತೆ ಇದೆ ಎಂದು ತಿಳಿಸಿದರು. ಇನ್ನು ಹಾಸನ ಕ್ಷೇತ್ರದ ಶಾಸಕ  ಪ್ರೀತಮ್ ಗೌಡ ಅವರು ಮಸ್ಕಿ ಉಪ‌ಚುನಾವಣೆ ಪ್ರಚಾರಕ್ಕೆ‌ ಹೋಗಿ ಕೊರೋನಾ ಅಂಟಿಸಿಕೊಂಡು ಬಂದು ತಮ್ಮ ಕುಟುಂಬದ ಸ್ನೇಹಿತರಿಗೂ ಹರಡಿದರು. ಈಗ ಆರೋಗ್ಯ ಸುಧಾರಿಸಿಕೊಂಡಿದ್ದರೂ   ಆಕ್ಸಿಜನ್ ಕೊಡಿಸುವತ್ತ ಗಮನಹರಿಸಲೇ ಇಲ್ಲ. ಹಾಗಾಗಿ ಆಕ್ಸಿಜನ್ ‌ಕೊರತೆ ಹೆಚ್ಚಾಗಿದೆ.

ಈ ಸಂದರ್ಭದಲ್ಲಿ ಸರ್ಕಾರ ಹಾಸನ‌ ವಿಧಾನಸಭಾ ಕ್ಷೇತ್ರ‌ ಹಾಗೂ‌ ಜಿಲ್ಲೆಯ ಬಗ್ಗೆ ತಾತ್ಸಾರ ಧೋರಣೆ ಅನುಸರಿಸುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರು ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ಮಾಡದೆ ಹಾಸನ ಜಿಲ್ಲೆಗೆ ಆಕ್ಸಿಜನ ನೀಡುವ ಮೂಲಕ  ಹಾಸನ ಜಿಲ್ಲೆಯ  ‌ಜನರ ಪ್ರಾಣ ಉಳಿಸಲು ಸಹಕಾರ ನೀಡಬೇಕು ಎಂದು ಮನವಿ‌ ಮಾಡಿಕೊಂಡರು.

By admin