ಹಾಸನ: ಸರ್ಕಾರದ ಕಾರ್ಮಿಕ ಇಲಾಖೆಯ ಕಾರ್ಮಿಕ  ಕಲ್ಯಾಣ ಮಂಡಳಿಯಿಂದ  ಕಟ್ಟಡ ಕಾರ್ಮಿಕರಿಗೆ ಬಂದಿರುವ ಆಹಾರ ಕಿಟ್‍ಗಳನ್ನು ಶಾಸಕ ಪ್ರೀತಮ್‍ಗೌಡ  ಅಧಿಕಾರ ಬಳಸಿಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಆರೋಪಿಸಿದ್ದಾರೆ.

ಕೊರೊನಾ ಲಾಕ್‍ಡೌನ್‍ನಿಂದ  ಕಟ್ಟಡ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇವರ ಅನುಕೂಲಕ್ಕೆ ಸರ್ಕಾರ ಕಾರ್ಮಿಕ ಕಲ್ಯಾಣ ನಿಧಿಯಿಂದ ಕಿಟ್‍ವಿತರಣೆ ಕಾರ್ಯಕ್ರಮ ಜಾರಿಗೆ ತಂದಿರುವುದು ಸರಿಯಷ್ಟೆ. ಆದರೆ ಹಾಸನ ತಾಲ್ಲೂಕಿಗೆ ಬಂದಿರುವ ಸುಮಾರು 10 ಸಾವಿರ ಕಿಟ್‍ಗಳನ್ನು  ಕ್ಷೇತ್ರದ ಶಾಸಕ  ಅವರ ಆಪ್ತರಿಗೆ  ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಹಂಚುವ ಮೂಲಕ ನಿಜವಾದ ಕಟ್ಟಡ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ, ಇದಕ್ಕೆ ಅಧಿಕಾರಿಗಳು ಕುಮ್ಮಕ್ಕು ನೀಡಿದ್ದು ಅನ್ಯಾಯದ ವಿರುದ್ದ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು  ಒತ್ತಾಯಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಕಟ್ಟಡ ಕಾರ್ಮಿಕರ ಕಿಟ್‍ಗಳನ್ನು ಉಳ್ಳವರಿಗೆ, ಸುಸ್ಥಿತ ಕುಟುಂಬಗಳಿಗೆ, ಕಾರ್ಯಕರ್ತರಿಗೆ  ಹಂಚುವಾಗ ಕಾಂಗ್ರೆಸ್ ಪಕ್ಷದ ಕಾಯಕರ್ತರು ಪತ್ತೆ ಹಚ್ಚಿ ಜಿಲ್ಲಾಧಿಕಾರಿಗಳಿಗೆ  ಒಪ್ಪಿಸುವ ಮೂಲಕ ಅನ್ಯಾಯ ಖಂಡಿಸಿ ಪ್ರತಿಭಟಿಸಿದ್ದಾರೆ. ಆದರೂ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಬಡವರ ಆಹಾರದ ಕಿಟ್‍ಗಳನ್ನು ರಾಜಕೀಯ ಮಾಡುವುದಕ್ಕಾಗಿ ಬಳಸಿಕೊಂಡಿರುವುದು ಶಾಸಕರಿಗೆ ಶೋಭೆ  ತರುವುದಿಲ್ಲ. ಸರ್ಕಾರ ಇದೆ ಎಂದು ಏನು ಮಾಡಿದರೂ ನಡೆಯುತ್ತದೆ ಎಂದು ಶಾಸಕರು ತಿಳಿದಿದ್ದರೆ ಅದು ತಪ್ಪು . ಪ್ರಜಾಪ್ರಭುತ್ವ  ವ್ಯವಸ್ಥೆಯಲ್ಲಿ  ಪ್ರೀತಮ್‍ಗೌಡರ ಇಂತಹ ವರ್ತನೆಗೆ  ಮತದಾರರು ಮುಂದಿನ ದಿನಗಳಲ್ಲಿ  ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.

ಪ್ರೀತಮ್‍ಗೌಡ ಅವರ ಆರ್ಭಟಕ್ಕೆ ಅಧಿಕಾರಿಗಳು ಸಹಾಯಕರಾಗಿದ್ದಾರೆ. ಕಟ್ಟಡಕಾರ್ಮಿಕರ ಕಿಟ್‍ ವಿತರಣೆಯಲ್ಲಿ ಅಕ್ರಮವಾಗಿದ್ದು, ಸಮಗ್ರ ತನಿಖೆ ನಡೆಸಿ ನಿಜವಾದ ಬಡ ಕಾರ್ಮಿಕರಿಗೆ ಜಿಲ್ಲಾಡಳಿತ ಆಹಾರ ಕಿಟ್ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

By admin