ಮಂಗಳೂರು: ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಇಲ್ಲಿನ ಏರ್ ಪೋರ್ಟ್ ಗೆ ತೆರಳುವ ಮರವೂರಿನ ಫಲ್ಗುಣಿ ನದಿಯ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಕಾರಣದಿಂದಾಗಿ ಸುರಕ್ಷತೆ ದೃಷ್ಠಿಯಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಮಂಗಳವಾರ ಬೆಳಗ್ಗಿನ ಜಾವ 3 ಗಂಟೆಗೆ ಮರವೂರು ಹಳೆ ಸೇತುವೆಯ ಒಂದು ಪಾರ್ಶ್ವ ಕುಸಿದಿದ್ದು, ವಿಷಯ ತಿಳಿದ ಕೂಡಲೇ ಶಾಸಕರಾದ ಉಮಾನಾಥ್ ಕೋಟ್ಯಾನ್ ಅವರು ಸ್ಥಳಕ್ಕಾಗಮಿಸಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ಸೂಕ್ತ ಬಂದೋಬಸ್ತ್ ಮಾಡುವಂತೆ ಸೂಚಿಸಿದ್ದಾರೆ ಅಲ್ಲದೆ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮತ್ತು ನೂತನ ಸೇತುವೆಯ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿ ಅದರಂತೆ ಕಾವೂರು ಪೊಲೀಸರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆ ಹಾಕಿದ್ದು, ಹೆಚ್ಚಿನ ಅಪಾಯವಾಗುವುದನ್ನು ತಡೆಗಟ್ಟಲು ಕ್ರಮ ತೆಗೆದುಕೊಂಡಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಬ್ಯಾರಿಕೇಡ್ ಹಾಕಿ, ರಸ್ತೆಯನ್ನು ಬಂದ್ ಮಾಡಲು ಸೂಚಿಸಿದ್ದು, ಬಜ್ಪೆ ಏರ್ ಪೋರ್ಟ್‍ಗೆ ತೆರಳುವ ವಾಹನಗಳನ್ನು ಕಾವೂರಿನಲ್ಲಿ ಡೈವರ್ಟ್ ಮಾಡಲಾಗುತ್ತಿದೆ.
ಮಂಗಳೂರಿನಿಂದ ಬಜಪೆ ವಿಮಾನ ನಿಲ್ದಾಣ, ಕಟೀಲು ದೇವಸ್ಥಾನ, ಕಿನ್ನಿಗೋಳಿ ಮುಂತಾದ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. ಸೇತುವೆ ಬಿರುಕು ಬಿಟ್ಟ ಕಾರಣ ಈ ಪ್ರಮುಖ ಸಂಪರ್ಕ ಕೊಂಡಿಯೇ ಇಲ್ಲವಾಗಿದೆ. ಮಂಗಳೂರಿನಿಂದ ವಿಮಾನ ನಿಲ್ದಾಣ ಭಾಗಕ್ಕೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಕರಾವಳಿ ಭಾಗದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ನದಿಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಹೊಸ ಸೇತುವೆ ಕಾಮಗಾರಿ ಹಿನ್ನೆಲೆ ಒಂದೇ ಭಾಗದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಸೇತುವೆಯ ಒಂದು ಭಾಗದ ಪಿಲ್ಲರ್ ಕುಸಿದು ಸೇತುವೆಗೆ ಹಾನಿಯಾಗಿದೆ. ಮರವೂರು ಸೇತುವೆ ಬಿರುಕು ಬಿಟ್ಟಿರುವ ಹಿನ್ನಲೆಯಲ್ಲಿ ಕಾವೂರು-ಕೂಳೂರು-ಕೆಬಿಎಸ್-ಜೋಕಟ್ಟೆ-ಪೋರ್ಕೊಡಿ-ಬಜಪೆ ಅಥವಾ ಪಚ್ಚನಾಡಿ-ವಾಮಂಜೂರ್-ಗುರುಪುರ-ಕೈಕಂಬ-ಬಜಪೆ ಬದಲಿ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ಉಡುಪಿಯಿಂದ ಬರುವವರು ಮೂಲ್ಕಿಯಲ್ಲಿ ತಿರುವು ಪಡೆದು ಕಿನ್ನಿಗೋಳಿ-ಕಟೀಲು ರಸ್ತೆಯಾಗಿ ಏರ್ ಪೋರ್ಟ್ ತೆರಳಲು ಸೂಚನೆ ನೀಡಲಾಗಿದೆ. ಮಂಗಳೂರು ನಗರದಿಂದ ಬರುವವರು ನಂತೂರಿನಲ್ಲಿ ತಿರುವು ಪಡೆದು ಕುಲಶೇಖರ ಗುರುಪುರ ರಸ್ತೆಯಾಗಿ ಏರ್ ಪೋರ್ಟ್ ಗೆ ತೆರಳಲು ಸೂಚನೆ ನೀಡಲಾಗಿದೆ.