ಮೈಸೂರು: ರಂಗಭೂಮಿ ಅತ್ಯಂತ ಸಂವಹನ ಪೂರ್ಣವಾದ ಭಾಷೆಯಾಗಿದ್ದು, ಸ್ವಾತಂತ್ರ್ಯ ಹೋರಾಟಕ್ಕಾಗಿ ರಂಗಭೂಮಿಯನ್ನು ಬಳಸಿ ಪೌರಾಣಿಕ ನಾಟಕಗಳ ಮೂಲಕ ಬ್ರಿಟಿಷರ ದೌರ್ಜನ್ಯವನ್ನು ಪರೋಕ್ಷವಾಗಿ ಸಾಮಾನ್ಯ ಜನರಿಗೆ ತಿಳಿಸಿದ್ದನ್ನು ನಾವು ಸ್ಮರಿಸಬಹುದಾಗಿದೆ ಎಂದು ಹಿರಿಯ ರಂಗಭೂಮಿ ಕಲಾವಿದ, ನಟ ಮಂಡ್ಯ ರಮೇಶ್‌ರವರು ಹೇಳಿದರು.
ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ’ಜ್ಞಾನವಾರಿಧಿ-27’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ರಂಗಭೂಮಿ-ಸಾಮಾಜಿಕ ಶಿಕ್ಷಣ ವಿಷಯ ಕುರಿತು ಉಪನ್ಯಾಸ ನೀಡಿದ ಅವರು. ರಂಗಭೂಮಿ ಕೇವಲ ಪ್ರದರ್ಶಕ ಕಲೆ ಆಗದೇ ಎಲ್ಲರಿಗೂ ತಲುಪಬಹುದಾದ ಕೌಶಲ್ಯಗಳನ್ನು ತುಂಬಿಕೊಂಡಿರುವ ಒಂದು ಕ್ಷೇತ್ರ. ಮನುಷ್ಯನ ಹುಟ್ಟಿನೊಂದಿಗೆಯೇ ರಂಗಭೂಮಿ ಜನ್ಮ ತಾಳಿತು. ಆದಿಮಾನವನಿಂದಲೇ ರಂಗಭೂಮಿಯ ಉಗಮವಾಗಿದೆ ಎಂದರು.
ಲಕ್ಷಾಂತರ ವರ್ಷಗಳ ನಂತರ ಜಾನಪದ ಸಾಹಿತ್ಯ ಸೃಷ್ಟಿಯಾಯಿತು. ಪ್ರತಿಯೊಂದು ಕೆಲಸದಲ್ಲೂ ಅವರು ಹಾಡಲು ಶುರು ಮಾಡಿದರು ಅದು ಇನ್ನೊಬ್ಬರಿಗೆ ಶಿಕ್ಷಣವಾಯಿತು. ಜಾನಪದ ಹಾಡುಗಳು ರಂಗಭೂಮಿಯ ದೊಡ್ಡ ಆಸ್ತಿ. ಸಂಸ್ಕೃತ ರಂಗಭೂಮಿ, ಗ್ರೀಕ್ ರಂಗಭೂಮಿ ಹಾಗೂ ಎಲಿಜಿಬೆತನ್ ರಂಗಭೂಮಿಗಳು ವಿಶ್ವದ ರಂಗಭೂಮಿಯ ಅಗ್ರ ಪ್ರಕಾರಗಳು. ಶೂದ್ರಕ ತನ್ನ ಮೃಚ್ಛಕಟಿಕ ನಾಟಕದಲ್ಲಿ ಅತ್ಯಂತ ಒಳ್ಳೆಯ ಸಂದೇಶವನ್ನು ನೀಡುತ್ತಾನೆ. ಸಂಸ್ಕೃತ ಸಾಹಿತ್ಯದಲ್ಲಿ ತುಂಬಾ ವಿಶಿಷ್ಟವಾದ ನಾಟಕಗಳಿವೆ. ಇವತ್ತಿಗೆ ಅವಶ್ಯಕವಾದ ಶಿಕ್ಷಣವನ್ನು ಅವು ಹೊಂದಿವೆ. ಗ್ರೀಕ್ ನಾಟಕ ಪರಂಪರೆ ಜಗತ್ತಿಗೆ ತೋರಿಸಿಕೊಟ್ಟ ದಾರಿ ಶ್ರೇಷ್ಠವಾದುದು. ಮನುಷ್ಯರು ಮತ್ತು ದೈವತ್ವದ ನಡುವೆ ನಡೆಯುವ ಸಂಘರ್ಷಗಳನ್ನು ಅತ್ಯಂತ ವಿಶಿಷ್ಟವಾಗಿ ತೋರಿಸಿಕೊಡಲಾಗಿದೆ. ಎಲಿಜಿಬೆತೆನ್ ರಂಗಭೂಮಿಯಲ್ಲಿ ಷೇಕ್ಸಪಿಯರ್ ಅತ್ಯಂತ ವಿಚಾರಾತ್ಮಕವಾದ ನಾಟಕಗಳನ್ನು ಸೃಷ್ಟಿಸಿದ್ದಾನೆ ಎಂದು ತಿಳಿಸಿದರು.
ರಂಗಭೂಮಿಯನ್ನು ಪ್ರತಿಭಟನೆಯ ಅಸ್ತ್ರವನ್ನಾಗಿಯೂ ಬಳಸಿಕೊಳ್ಳಲಾಗಿದೆ. ವಿಚಾರಗಳನ್ನು ನೇರವಾಗಿ ಹೇಳಲಾಗದ ಸಂದರ್ಭದಲ್ಲಿ ನಾಟಕಗಳಲ್ಲಿ ಹಾಸ್ಯದ ಮೂಲಕ ಪ್ರದರ್ಶಿಸಲಾಗಿದೆ. ಆಧುನಿಕ ರಂಗಭೂಮಿಯಲ್ಲಿ ಇವತ್ತಿನ ಬದುಕಿನ ಸಂಕಷ್ಟಗಳನ್ನು ಅತ್ಯಂತ ಅಚ್ಚುಕಟ್ಟಾಗಿ ತೋರಿಸಲಾಗುತ್ತಿದೆ. 12ನೇ ಶತಮಾನದಲ್ಲಿ ಶರಣರು ತಮ್ಮ ಕಾಯಕದ ಶ್ರೇಷ್ಠತೆಯನ್ನು ವಚನಗಳ ಮೂಲಕ ಹಾಡಿದ್ದು ಸಹ ರಂಗಭೂಮಿಯ ಒಂದು ಭಾಗ. ಸ್ವಾತಂತ್ರ್ಯ ಹೋರಾಟಕ್ಕಾಗಿಯೂ ರಂಗಭೂಮಿಯನ್ನು ಬಳಸಿಕೊಳ್ಳಲಾಯಿತು. ಪೌರಾಣಿಕ ನಾಟಕಗಳ ಮೂಲಕ ಬ್ರಿಟಿಷರ ದೌರ್ಜನ್ಯವನ್ನು ಪರೋಕ್ಷವಾಗಿ ಸಾಮಾನ್ಯ ಜನರಿಗೆ ತಿಳಿಸಲಾಯಿತು. ಅನೇಕ ನಾಟಕ ಕಂಪನಿಗಳು ಸಾಮಾಜಿಕ ಶಿಕ್ಷಣವನ್ನು ನೀಡುವಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿವೆ. ಜೆಎಸ್‌ಎಸ್ ಸಂಸ್ಥೆಗಳಲ್ಲಿ ರಂಗ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ರಂಗಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾದುದು ಎಂದು ತಿಳಿಸಿದರು.
ಉಪನ್ಯಾಸದ ನಂತರ ವೀಕ್ಷಕರ ಆಯ್ದ ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಆನ್‌ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಜಿಜ್ಞಾಸುಗಳು, ಸಾರ್ವಜನಿಕರು ಭಾಗವಹಿಸಿದ್ದರು. ರೂಪಾ ರವೀಶ್ ಪ್ರಾರ್ಥಿಸಿ, ಜಿ.ಎಲ್. ತ್ರಿಪುರಾಂತಕ ನಿರೂಪಿಸಿದರು.