ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್)

ಕೆಲವೊಂದು ಬಾರಿ ಹೀಗಾಗುತ್ತದೆ; ನಮ್ಮ ರೂಢಿ ಸಂಪ್ರದಾಯಗಳು ನಮ್ಮ ಮೌಢ್ಯಗಳಾಗಿದ್ದರೂ ಹಿರಿಯರ ಒತ್ತಾಯದಿಂದಾಗಿ ಮತ್ತು ಧಾರ್ಮಿಕ ಅಂಧರ ತಪ್ಪು ತಿಳಿವಳಿಕೆಗಳ ಪ್ರಚಾರದಿಂದ ತಪ್ಪು ತಪ್ಪಾಗಿಯೇ ಕೆಲವು ಆಚರಣೆಗಳು ಆ ಸಮುದಾಯದವರಿಗೆ ಒಗ್ಗಿರುತ್ತದೆ. ಈ ಹಾದಿಯಲ್ಲಿ ವಿಶ್ವದ ಎಲ್ಲಾ ಧರ್ಮಗಳು ಒಳಪಟ್ಟಿವೆ ಎಂದರೆ ಆಶ್ಚರ್ಯವಿಲ್ಲ. ಇದೀಗ ಭಾರತದೆಲ್ಲೆಡೆ ಮಹಾಸುದ್ದಿಯಾಗಿ ಕಾಡ್ಗಿಚ್ಚಿನಂತೆ ಹರಡುತ್ತಿರುವ ಮುಸ್ಲಿಂ ಸಮುದಾಯದ ಸ್ತ್ರೀಯರ  ‘ಹಿಜಾಬ್'(ತಲೆ ಗವಸು) ಈ ರೀತಿಯದ್ದೇ ಮೌಡ್ಯತೆಯಲ್ಲೊಂದು ರೂಢಿಗತ ಆಚರಣೆ ಎನ್ನಬಹುದು. ಮುಸುಕು ಹಾಕಿಕೊಳ್ಳುವುದು ಇಸ್ಲಾಂ ಧರ್ಮದ ಹುಟ್ಟಿನಿಂದ ಬಂದಿದಲ್ಲ. ಬೈಜಾಂಟೈನ್, ಗ್ರೀಕ್ ಮತ್ತು ಪರ್ಷಿಯನ್ ಸಾಮ್ರಾಜ್ಯಗಳಲ್ಲಿ ಗಣ್ಯ ಮಹಿಳೆಯರು ಅಥವಾ ರಾಜ ಮನೆತನದ ಮಹಿಳೆಯರು ಗೌರವ ಮತ್ತು ಪ್ರತಿಷ್ಠೆಯ ಚಿಹ್ನೆಯಾಗಿ ಧರಿಸುತ್ತಿದ್ದರು.

ಸಾಮಾನ್ಯ ಮಹಿಳೆಯರು, ಸ್ತ್ರೀ ಗುಲಾಮರು, ವೇಶ್ಯೆಯರು ಮುಸುಕು ಹಾಕುವಂತಿರಲಿಲ್ಲ. ಹಾಗೊಂದು ವೇಳೆ ಮುಸುಕು ಹಾಕಿಕೊಂಡರೆ ಆ ಸ್ತ್ರೀಯರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿತ್ತು. ಫಡ್ವಾ ಎಲ್ ಗಿಂಡಿ ಪ್ರಕಾರ, ಕ್ರಿಶ್ಚಿಯನ್ ಧರ್ಮದ ಪ್ರಾರಂಭದಲ್ಲಿ ಯಹೂದಿ ಮಹಿಳೆಯರು ತಮ್ಮ ತಲೆ ಮತ್ತು ಮುಖಗಳಿಗೆ ಮುಸುಕು ಹಾಕಿಕೊಳ್ಳುತ್ತಿದ್ದರು. ಕ್ರಿಶ್ಚಿಯನ್ ಶಿರಸ್ತ್ರಾಣದ ಬಗ್ಗೆ ಉತ್ತಮವಾದ ದೃಷ್ಟಿಕೋನವನ್ನು ಬೈಬಲ್‌ನಲ್ಲಿ 1 ಕೊರಿಂಥಿಯಾನ್ಸ್ 11:4-7ರಲ್ಲಿ ವಿವರಿಸಲಾಗಿದೆ, ಅದು “ತನ್ನ ತಲೆಯನ್ನು ಮುಚ್ಚಿಕೊಂಡು ಪ್ರಾರ್ಥಿಸುವ ಅಥವಾ ಭವಿಷ್ಯ ನುಡಿಯುವ ಪ್ರತಿಯೊಬ್ಬ ಮಹಿಳೆ ತನ್ನ ತಲೆಯನ್ನು ಅವಮಾನಿಸುತ್ತಾಳೆ” ಎಂದು ಹೇಳುತ್ತದೆ. ಎಲ್ಲೋ ಒಂದು ಕಡೆ ಧರ್ಮಗಳ ಸತ್ಯವನ್ನು ಅವಿತಿಟ್ಟು ತಮ್ಮ ಸ್ವಾರ್ಥಗಳಿಗೆ ಆಚರಣೆಗಳನ್ನು ತಂದಿರುವುದು ಪುರುಷ ದಬ್ಬಾಳಿಕೆ ಮತ್ತು ಪುರುಷ ಸ್ವಾರ್ಥ ಎಂದಾಗಿರುವುದೇ ಸತ್ಯ. ಇಂತಹ ಸ್ತ್ರೀ ಅಸಮಾನತೆಯನ್ನು ಪರಿಚಯ ಮಾಡಿಕೊಂಡ ಇಸ್ಲಾಂ ಪುರುಷರು, ಧಾರ್ಮಿಕ ಮುಖಂಡರು ತಮ್ಮ ಮಹಿಳೆಯರನ್ನು ಹಿಜಾಬ್’ಗೆ ಹೊಂದಿಸಿ ಈಗ ಅದನ್ನು ಅವರ ಮೂಲಕವೇ ಭಾರತಕ್ಕೆ ಪರಿಚಯಿಸುವುದು ಬಲವಾಗಿ ರೂಢಿಗೊಳಿಸುವುದು ಒಳ್ಳೆಯ ಲಕ್ಷಣವಲ್ಲ.ಹಿಜಾಬ್ ಎಂದರೆ; ಧಾರ್ಮಿಕ ಮುಖಂಡರ ವ್ಯಾಖ್ಯಾನ ಹೀಗಿದೆ; ಮುಸ್ಲಿಂ ಮಹಿಳೆಯರು ಧರಿಸುವ ಮುಸುಕು ತಮ್ಮ ಹತ್ತಿರದ ಕುಟುಂಬದ ಪುರುಷರನ್ನು ಬಿಟ್ಟು ಪರ ಪುರುಷರ ಎದುರಿಗೆ ತಲೆ ಮತ್ತು ಎದೆಯನ್ನು ಮರೆಮಾಚುವುದಾಗಿದೆ. ಎರಡನೆಯ ವ್ಯಾಖ್ಯಾನ, ಮನುಷ್ಯ ಅಥವಾ ಜಗತ್ತನ್ನು ದೇವರಿಂದ ಬೇರ್ಪಡಿಸುವ ಮುಸುಕು ಎಂದಾಗಿದೆ.

ಇಸ್ಲಾಮಿಕ್ ಕಾನೂನಿನ ಅನ್ವಯ ಸಂಪೂರ್ಣವಾಗಿ ಪರಪುರುಷನಿಂದ ಮಹಿಳೆಯರ ದೇಹವನ್ನು ಅವಿತಿಡುವುದಾಗಿದೆ. ಇಸ್ಲಾಮಿಕ್ ಕುರಾನ್’ 6000ಕ್ಕೂ ಅಧಿಕ ಶ್ಲೋಕಗಳಲ್ಲಿ ಸುಮಾರು ಅರ್ಧ ಭಾಗ ಮಹಿಳೆಯರ ಉಡುಪುಗಳ ಬಗ್ಗೆಯೇ ವಿವರಿಸುತ್ತದೆ (ಕುರಾನ್ 24). ಮಹಿಳೆಯರಿಗೆ ತಮ್ಮ ಜನನಾಂಗಗಳನ್ನು ಕಾಪಾಡಲು ತಮ್ಮ ಕಿಮಾರ್ ಅನ್ನು ತಮ್ಮ ಎದೆಯ ಮೇಲೆ ಎಳೆಯಲು ಹೇಳುತ್ತದೆ (ಸೂರಾ ಪದ್ಯ (24:31). ಸ್ತ್ರೀಯರಿಗೆ ತಿಳಿಸು ಅವರು ತಮ್ಮ ದೃಷ್ಟಿಯನ್ನು ತಗ್ಗಿಸಬೇಕು ಮತ್ತು ತಮ್ಮ ಖಾಸಗಿ ಅಂಗಗಳನ್ನು ಕಾಪಾಡಿಕೊಳ್ಳಬೇಕು; ಅವರು ತಮ್ಮ ಸೌಂದರ್ಯ ಮತ್ತು ಆಭರಣಗಳನ್ನು ಪ್ರದರ್ಶಿಸಬಾರದು. ಅವರ ಪತಿ, ಅವರ ತಂದೆ, ಅವರ ಗಂಡನ ತಂದೆ, ಅವರ ಪುತ್ರರು, ಅವರ ಸಹೋದರರು, ಅವರ ಸಹೋದರರ ಪುತ್ರರು, ಅವರ ಸಹೋದರಿಯರ ಪುತ್ರರಿಗೆ ಹೊರತುಪಡಿಸಿ ತಮ್ಮ ಸೌಂದರ್ಯವನ್ನು ಅನ್ಯ ಪುರುಷರಿಗೆ ಪ್ರದರ್ಶಿಸಬಾರದು (ಕುರಾನ್  24:31). ಪುರುಷರು ಮತ್ತು ಮಹಿಳೆಯರ ಉಡುಪುಗಳ ಬಗ್ಗೆ ಇಸ್ಲಾಮಿಕ್ ಗ್ರಂಥದಲ್ಲಿ ಹೇಳಿರುವ ಪ್ರಕಾರ ಭಾರತದ ಮುಸ್ಲಿಂ ಸಮುದಾಯದವರು ನಡೆಯುವುದು ಸರಿಯಲ್ಲ. ಇಸ್ಲಾಮಿಕ್ ಧಾರ್ಮಿಕ ಕಾನೂನುಗಳು ಪುರುಷ ಧರ್ಮ ಗ್ರಂಥ ಎಂದು ಸಾಬೀತು ಪಡಿಸಿಕೊಂಡಿದೆ. ಮಹಿಳೆಯರನ್ನು ಭೋಗದ ವಸ್ತುವನ್ನಾಗಿ ಮಾತ್ರ ಪರಿಗಣಿಸಿ ಅದನ್ನು ತಮ್ಮ ಸ್ವಾರ್ಥಗಳಿಗೆ ಸಂರಕ್ಷಿಸಿಕೊಳ್ಳುವ ಕುತಂತ್ರತೆಯನ್ನು ಮೆರೆಯುವುದಾಗಿದೆ. ತಮ್ಮ ಧರ್ಮದ ಮಹಿಳೆಯರು ಪರ ಧರ್ಮದ ಪುರುಷರಿಗೆ ಆಕರ್ಷಿತರಾಗಿ‌ ಕಂಡಾಗ ನಮಗೆ ಇರಬೇಕಾದವರು  ಇಲ್ಲವಾಗಬಹುದು ಎನ್ನುವ ಭ್ರಮೆಯಲ್ಲಿ ಈ ರೀತಿ ಮಹಿಳೆಯರ ಮೇಲೆ ಮಾನಸಿಕವಾಗಿ ಧಾರ್ಮಿಕ  ಭ್ರಮೆಯ ತಪ್ಪು ಆಚರಣೆಗಳನ್ನು ಹೇರಿದ್ದಾರೆ.

ಇದು ಒಂದು ರೀತಿಯ ಸ್ತ್ರೀ ಶೋಷಣೆಯೇ ಆಗಿದೆ. ಸ್ತ್ರೀ ತಾರತಮ್ಯವೇ ಆಗಿದೆ. ಹಿಜಾಬ್ ಬಹಳ ಪೂರ್ವದ ಆಚರಣೆಯಾಗಿರುವುದರಿಂದ ಮುಸ್ಲಿಂ ಬಹುತ್ವ ಮಹಿಳೆಯರಿಗೆ  ಇದು ಅಸ್ಪಷ್ಟ ತಿಳಿವಿನಿಂದ ಇಷ್ಟವಾಗಿದೆ.ಕುರಾನ್’ನ ಹದೀಸ್ ಮತ್ತು ಫಿಕ್ಹ್ ಪಠ್ಯಗಳಲ್ಲೇ ಉಲ್ಲೇಖವಾಗಿದೆ ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಧರಿಸಬೇಕೆಂದು ಒತ್ತಾಯವಿಲ್ಲ, ಅವರ ಸ್ವತಂತ್ರಕ್ಕೆ ಬಿಟ್ಟದ್ದು ಎಂದು. ಸೌದಿ ಅರೇಬಿಯ ಕಾನೂನಿನ ಪ್ರಕಾರ ಹಿಜಾಬ್ ಧರಿಸುವುದು ಸಾರ್ವಜನಿಕ ಸ್ಥಳಗಳಲ್ಲಿ ಅಗತ್ಯವಿಲ್ಲ ಎಂದು ಹೇಳುತ್ತದೆ. ಗಾಜಾದಲ್ಲಿ ಯುನಿಫೈಡ್ ಲೀಡರ್’ಶಿಪ್(UNLU)ಗೆ ಸೇರಿದ ಪ್ಯಾಲೇಸ್ಟಿನಿಯನ್ ಜಿಹಾದಿಗಳು ಸ್ತ್ರೀಯರಿಗೆ  ಹಿಜಾಬ್ ನೀತಿಯನ್ನು ತಿರಸ್ಕರಿಸಿದ್ದಾರೆ. ಯುರೋಪ್ ಮತ್ತು ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾ ರೀತಿಯ ಹಿಜಾಬ್’ಗಳನ್ನು ನಿಷೇಧಿಸುವ ಕಾನೂನನ್ನು ಅಂಗೀಕರಿಸಲಾಗಿದೆ. ಜರ್ಮನಿಯಲ್ಲಿ 2017ರಲ್ಲಿ ಬುರ್ಖಾ ನಿಷೇಧಿಸಲಾಗಿದೆ. “ಹಿಜಾಬ್ ಧರಿಸುವುದು ಮಹಿಳೆಯರ ಸ್ವಾತಂತ್ರ್ಯ ಹರಣ ಮಾಡುವ ತಂತ್ರ” ಎಂದು ಇಲ್ಲಿನ ಮಹಿಳಾವಾದಿಗಳ ಹೇಳಿಕೆಯಾಗಿದೆ. ಡೆನ್ಮಾರ್ಕ್ ನಲ್ಲಿ ಯಾವುದೇ ಧರ್ಮದ ಯಾವುದೇ ವ್ಯಕ್ತಿ ಮುಖ ಚಹರೆ ಸಿಗದಂತೆ ಉಡುಪುಗಳನ್ನು ಧರಿಸುವುದು ಕಾನೂನು ಅಪರಾಧವಾಗಿದೆ. ಚೀನಾ ದೇಶದಲ್ಲಿ ಹಿಜಾಬ್’ಗಳನ್ನು ನಿಷೇಧಿಸಲಾಗಿದೆ ಮತ್ತು ಆಚರಿಸಿದವರಿಗೆ ಕಠಿಣ ಶಿಕ್ಷೆಯೂ ಇದೆ.ಆದರೆ ಭಾರತದಲ್ಲಿ ಈ ರೀತಿಯಾಗಿ ಹಿಜಾಬ್ ಧರಿಸಲು ಮುಸ್ಲಿಂ ಮಹಿಳೆಯರು ಹಠ ಬಿದ್ದಿರುವುದು ಕೋಮು ಗಲಭೆಗೆ ಕಿಮ್ಮತ್ತು ನೀಡುತ್ತಿರುವ ಕುತಂತ್ರಿಗಳ ಶಕುನಿ ಬುದ್ಧಿಯಾಗಿದೆ. ಭಾರತವನ್ನು ಒಡೆದು ಆಳುವ ನೀತಿಯ ಪುನರ್  ನಿರ್ಮಾಣದ ಯೋಜನೆಯಾಗಿದೆ.

ಇದು ಭಾರತ, ಇಲ್ಲಿ ಇಸ್ಲಾಮಿಕ್ ಕಾನೂನು ಅನ್ವಯವಾಗುವುದಿಲ್ಲ ಎನ್ನುವುದನ್ನು ಅರಿತುಕೊಳ್ಳುವುದು ಬಹುಮುಖ್ಯ.ಹೌದು ಭಾರತ ಸಂವಿಧಾನದ 25ನೇ ವಿಧಿಯೇ ಹೇಳುತ್ತದೆ ಧಾರ್ಮಿಕ ಸ್ವಾತಂತ್ರ್ಯ ಮೂಲಭೂತ ಹಕ್ಕು ಎಂದು. ಆದರೆ ಈ ಧಾರ್ಮಿಕ‌ ಸ್ವಾತಂತ್ರ್ಯವು ಸಾರ್ವಜನಿಕ ಕಾನೂನಿಗೆ ಅನ್ವಯಿಸಿದಾಗ ನೈತಿಕ ವಿಚಾರಗಳಿಗೆ ಪ್ರಾದ್ಯಾನ್ಯತೆ ಕೊಡಬೇಕೆಂಬುದು ಸಂವಿಧಾನದ 25ನೇ ವಿಧಿಯ (2)ಎ ಮತ್ತು (2)ಬಿ ತಿಳಿಸುತ್ತದೆ. ಅಂದರೆ ಸಾರ್ವಜನಿಕ ಮತ್ತು ಸಾರ್ವತ್ರಿಕ ಎನ್ನುವ ಅಂಶ ಹೊಂದಿದೆ, ಇದರಲ್ಲಿ ಎಲ್ಲರೂ ತಮ್ಮ ತಮ್ಮ ಧಾರ್ಮಿಕ, ಸಾಂಪ್ರದಾಯಿಕ ಯಾವುದೇ ನೀತಿ-ನಿಯಮಗಳನ್ನು, ಆಚರಣೆಗಳನ್ನು ಕಟ್ಟಿಟ್ಟು ಸರ್ಕಾರದ ಆದೇಶಕ್ಕೆ ಮಣಿಯಬೇಕೆಂದು ಇದರ ಮೂಲ ತಿರುಳು. ಉದಾಹರಣೆಗೆ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಆದೇಶದ ಮೇರೆಗೆ ಎಲ್ಲಾ ಧಾರ್ಮಿಕ, ಸಾಮಾಜಿಕ ಸಂಪರ್ಕವನ್ನು ಸ್ಥಗಿತಗೊಳಿಸಿ ತಡೆಆಜ್ಞೆ ಹೊರಡಿಸಲಾಗಿತ್ತು. ಅದರಂತೆ ಹಿಜಾಬ್ ಧಾರಣೆ ಸಮಾಜದಲ್ಲಿ ಕೆಲವು ಕಡೆ ನಿಷಿದ್ಧ.  ಈ ಹಿಜಾಬ್ ಆಚರಣೆಗಳು ಎಲ್ಲಾ ಕಡೆ ಇರಬೇಕೆಂಬುವುದು ವಿತಂಡವಾದ. ಸರ್ಕಾರದ ಕಾನೂನು ಹೀಗಿದೆ; ಕರ್ನಾಟಕ ಶಿಕ್ಷಣ ಕಾಯಿದೆ 1983ರ ಪ್ರಕಾರ ರಾಜ್ಯ ಸರ್ಕಾರ ತನ್ನ ಅಧಿಕಾರವನ್ನು  ಚಾಲನೆಗೊಳಿಸಿಕೊಳ್ಳಲಾಗಿದೆ.

ಈ ಕಾಯಿದೆಯ 7(2) ವಿಧಿಯ ಪ್ರಕಾರ ಶೈಕ್ಷಣಿಕ ಪಠ್ಯಕ್ರಮದ ನಿರ್ಧಾರ ಸರ್ಕಾರದ ಅಧಿಕಾರವಾಗಿದೆ. 7(2)ಎ ಪ್ರಕಾರ ಪಠ್ಯಕ್ರಮವು ನೈತಿಕ ಮತ್ತು ಮೌಲ್ಯಯುತಕ್ಕೆ ಒಳಪಡಬೇಕೆಂಬುದನ್ನು ಬೆಂಬಲವಾಗಿಟ್ಟುಕೊಂಡು ಕಾರ್ಯನಿರ್ವಹಿಸುವುದಾಗಿದೆ. 7(ಜಿ) 5 ವಿಧಿಯ ಪ್ರಕಾರ ದೇಶದ ಪ್ರತೀ ಧಾರ್ಮಿಕ, ಭಾಷಿಕ, ಪ್ರಾಂತೀಯ ವಿಂಗಡಣೆಗಳನ್ನು ದಾಟಿ ಸರ್ವೇಸಾಮಾನ್ಯ, ಸಾರ್ವತ್ರಿಕ ಸಾಮರಸ್ಯವನ್ನು ಸಾರುವಂತೆ ನಡೆದುಕೊಳ್ಳಬೇಕು ಎಂದು ತಿಳಿಸುತ್ತದೆ ಮತ್ತು ಮಹಿಳೆಯರ ಘನತೆಗೆ ಮಸಿ ತರುವ ರೂಢಿ ಆಚರಣೆಗಳನ್ನು ತ್ಯಜಿಸಬೇಕು ಎನ್ನುತ್ತದೆ.ಬಾಂಬೆ ಹೈಕೋರ್ಟ್ ನಲ್ಲಿ ಇಂತಹದೇ ಒಂದು ಪ್ರಕರಣ 2001ರಲ್ಲಿ ಫಾತಿಮಾ ಸಯ್ಯದ್ ಹುಸೇನ್ ಮತ್ತು ಭಾರತ್ ಎಜುಕೇಶನ್ ಸೊಸೈಟಿಯ ನಡುವೆ ಹಿಜಾಬ್ ಧಾರಣೆಗೆ ಸಂಬಂಧಿಸದಂತೆ ವಿವಾದವಾಗಿ ಕೋರ್ಟ್ ತೀರ್ಪು ಹೀಗಿತ್ತು ಶಾಲೆಗಳಲ್ಲಿ ಹಿಜಾಬ್ ಧರಿಸುವುದು ಸಂವಿಧಾನದ 25ನೇ ವಿಧಿಯ ಅನ್ವಯ ಸರಿಹೊಂದಲ್ಲ ಎಂದು. ಕೇರಳ ಹೈಕೋರ್ಟ್ ಕೂಡ ಇಂತಹದೇ ಪ್ರಕರಣವನ್ನು ವಿಚಾರಿಸಿ ಶಾಲೆಗಳಲ್ಲಿ ಹಿಜಾಬ್ ಧರಿಸುವುದು ಸರಿಯಲ್ಲ ಎಂದು ತೀರ್ಪು ನೀಡಿತ್ತು.ಎಲ್ಲಾ ಚರ್ಚೆಗಳ ಪರಿಶೀಲನೆಯಲ್ಲಿ ಮುಖಗವಸು ನಮ್ಮ ಭಾರತಕ್ಕೆ ಹೊಗ್ಗುವ ಪದ್ಧತಿಯಲ್ಲ ಹಾಗಾಗಿ ಶಾಲೆ ಮಾತ್ರವಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ನಿಷೇಧಿಸುವುದು ಸ್ತ್ರೀ ದೌರ್ಬಲ್ಯವನ್ನು ತೊಡೆದಾಕಿ ಸಮಾನತೆಯನ್ನು ಸ್ಥಾಪಿಸಿದಂತಾಗುತ್ತದೆ ಈ ಬಗ್ಗೆ ಎಲ್ಲರೂ ಮತ್ತೊಮ್ಮೆ ಯೋಚಿಸುವುದು ಅಗತ್ಯ.

ಚಿಮಬಿಆರ್ (ಮಂಜುನಾಥ ಬಿ.ಆರ್)

ಯುವಸಾಹಿತಿ, ವಿಮರ್ಶಕ, ಸಂಶೋಧಕ.

ದೂರವಾಣಿ ಸಂಖ್ಯೆ:8884684726*