ಗುಂಡ್ಲುಪೇಟೆ: ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಕೆ ಮಾಡುವ ಮೂಲಕ ನೀರು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವ ಸಂಕಲ್ಪ ಮಾಡಬೇಕು ಎಂದು ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಹೆಚ್.ಪಿ.ಮೋಹನ್ ಕುಮಾರ್ ಸಲಹೆ ನೀಡಿದರು.

ತಾಲೂಕಿನ ಅಣ್ಣೂರುಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಕಾನೂನು ಸಲಹಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಸಹಯೋಗದಲ್ಲಿ ನಡೆದ ವಿಶ್ವ ಜಲ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೀರು ಅಮೂಲ್ಯವಾದ ಸಂಪತ್ತು. ನೀರಿನ ಸಂರಕ್ಷಣೆ ಮಾಡುವ ಕೆಲಸ ಇಂದಿನಿಂದಲೇ ಆಗಬೇಕು. ಅಗೋಚರವಾದ ಅಂರ್ತಜಲವನ್ನು ಗೋಚರಿಸುವಂತೆ ಮಾಡುವುದು ಎಂಬ ಘೋಷವಾಕ್ಯದೊಂದಿಗೆ ದೇಶಾದ್ಯಂತ ವಿಶ್ವ ಜಲ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೀರನ್ನು ಹಿತಮಿತವಾಗಿ ಬಳಕೆ ಮಾಡುವಂತೆ ತಿಳಿಸಿದರು.
ವಕೀಲ ಸಂಘದ ಉಪಾಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಮಾನವನ ದುರಾಸೆಯಿಂದ ನದಿ ಮೂಲಗಳು ಕಣ್ಮರೆಯಾಗಿವೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಗುಂಡ್ಲುನದಿ ಹರಿಯುತ್ತಿತ್ತು. ಅದು ಕಣ್ಮರೆಯಾಗಿದೆ. ಆದ್ದರಿಂದ ಜಲ ಸಂಪನ್ಮೂಲದ ಸಂರಕ್ಷಣೆಗೆ ಪ್ರತಿಯೊಬ್ಬರೂ ಪಣತೊಡಬೇಕೆಂದು ಸಲಹೆ ನೀಡಿದರು.
ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಎಂ.ಸರಸ್ವತಿ ಮಾತನಾಡಿ, ನೀರನ್ನು ಹಣಕೊಟ್ಟು ಖರೀದಿಸುತ್ತಾರೆಂದು ಯಾರೂ ಊಹಿಸಿರಲಿಲ್ಲ. ಅಂತಹ ಸಂದರ್ಭ ಈಗಾಗಲೇ ಬಂದೊದಗಿದೆ. ಆದ್ದರಿಂದ ಹಿತಮಿತವಾಗಿ ನೀರನ್ನು ಬಳಕೆ ಮಾಡಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಮಕ್ಕಳು ಹದಿಹರೆಯದ ವಯಸ್ಸಿನಲ್ಲಿನ ಆಕರ್ಷಣೆಗೆ ಒಳಗಾಗದೇ ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಬ್ಬಯ್ಯ ಮಾತನಾಡಿ, ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸಿ, ಅದನ್ನು ಮುಂದಿನ ಪೀಳಿಗೆಗೆ ಉತ್ತಮ ಗುಣಮಟ್ಟದಲ್ಲಿ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಯೋಚಿಸಬೇಕು ಎಂದು ಸಲಹೆ ನೀಡಿದರು.
ಅಣ್ಣೂರು ಗ್ರಾಪಂ ಪಿಡಿಓ ಶಿಲ್ಪ, ಶಾಲಾ ಮುಖ್ಯ ಶಿಕ್ಷಕ ದೊಡ್ಡಬಸವಯ್ಯ, ಮೇಲ್ವಿಚಾರಕರಾದ ಸೋನಿಯಾ ಬೇಗಂ, ಸಂಯೋಜಕಿ ಚಾಂದಿನಿ, ನ್ಯಾಯಾಲಯದ ಸಿಬ್ಬಂದಿ ಮಹದೇವಸ್ವಾಮಿ, ಸುಂದರ್, ಸಾಂತ್ವನ ಕೇಂದ್ರದ ಜಿ.ಮಹೇಶ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.
ವರದಿ: ಬಸವರಾಜು ಎಸ್.ಹಂಗಳ