ಚಾಮರಾಜನಗರ: ಚಾಮರಾಜನಗರ ಜಿಲ್ಲೆಯು ರೂಪುಗೊಂಡು ಇದೇ ಆಗಸ್ಟ್ ೧೫ರಂದು ೨೫ ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇದೇ ಆಗಸ್ಟ್ ೧೪ ಹಾಗೂ ೧೫ರಂದು ಜಿಲ್ಲಾ ರಜತ ಮಹೋತ್ಸವ ಹಾಗೂ ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಅಗತ್ಯ ಸಿದ್ದತೆ ಕೈಗೊಳ್ಳಬೇಕೆಂದು ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸೂಚಿಸಿದರು.
ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಕಾರ್ಯಕ್ರಮದ ಆಯೋಜನೆ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವಿಭಜಿತ ಮೈಸೂರು ಜಿಲ್ಲೆಯಿಂದ ಪ್ರತ್ಯೇಕಗೊಂಡು ಚಾಮರಾಜನಗರವು ಜಿಲ್ಲೆಯಾಗಿ ಇದೇ ಆಗಸ್ಟ್ ೧೫ರಂದು ೨೫ ವರ್ಷ ವರ್ಷ ಪೂರ್ಣಗೊಳಿಸುತ್ತಿದೆ. ಇಂತಹ ಮಹತ್ವದ ದಿನವನ್ನು ಸಂಭ್ರಮದಿಂದ ಆಚರಿಸಬೇಕಿದೆ. ಈ ನಿಟ್ಟಿನಲ್ಲಿ ರಜತ ಮಹೋತ್ಸವ ಹಮ್ಮಿಕೊಳ್ಳಬೇಕು. ಇದಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ರಜತ ಮಹೋತ್ಸವದ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಬೇಕು ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಸ್ವಾತಂತ್ರ್ಯ ಬಂದು ೭೫ ವರ್ಷವಾಗುತ್ತಿರುವ ಸಂದರ್ಭದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಸಹ ಅದ್ದೂರಿಯಾಗಿ ನಡೆಸಬೇಕು. ಆಗಸ್ಟ್ ೧೩ ರಿಂದ ೧೫ರವರೆಗೆ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮದಡಿ ಜಿಲ್ಲೆಯ ಮನ ಮನೆಗಳಲ್ಲಿ, ಕಚೇರಿ, ಸಂಘ ಸಂಸ್ಥೆ, ಶಾಲಾ ಕಾಲೇಜುಗಳು ಸೇರಿದಂತೆ ವಿವಿಧೆಡೆ ರಾಷ್ಟ್ರಧ್ವಜ ಹಾರಿಸಿ ದೇಶಾಭಿಮಾನ ವ್ಯಕ್ತಪಡಿಸುವ ಕಾರ್ಯಕ್ರಮವು ಅಚ್ಚುಕಟ್ಟಾಗಿ ನೆರವೇರಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಜಿಲ್ಲೆಗೆ ೨೫ ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿ ಕುರಿತು ಚಿಂತಕರು, ಬುದ್ದಿಜೀವಿಗಳು, ವಿವಿಧ ರಂಗಗಳ ತಜ್ಞರು, ರಾಜಕೀಯ ನಾಯಕರು ಸೇರಿದಂತೆ ಎಲ್ಲರೂ ಪಾಲ್ಗೊಂಡು ವಿವರವಾಗಿ ಚರ್ಚಿಸುವ ಚಿಂತನಾ ಶಿಬಿರ, ವಿಚಾರ ಸಂಕಿರಣದಂತಹ ಕಾರ್ಯಕ್ರಮವನ್ನು ರಜತ ಮಹೋತ್ಸವ ಆಚರಣೆ ದಿನ ಸಂದರ್ಭದಲ್ಲಿ ಏರ್ಪಡಿಸಬೇಕು. ಈ ಶಿಬಿರದಲ್ಲಿ ವ್ಯಕ್ತವಾಗುವ ಹಾಗೂ ಹೊರಬರುವ ಅಭಿಪ್ರಾಯಗಳನ್ನ ಕ್ರೋಡಿಕರಿಸಿ ವರದಿಯನ್ನು ಸಿದ್ದಪಡಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ರಜತ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆ ರೂಪುಗೊಳ್ಳಲು ಹೋರಾಟ ನಡೆಸಿದವರು, ಶ್ರಮಿಸಿದವರು, ಜಿಲ್ಲೆಯ ಪ್ರಮುಖರು, ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವ ಕಾರ್ಯವನ್ನು ವ್ಯವಸ್ಥಿತವಾಗಿ ಏರ್ಪಡಿಸಬೇಕು. ರಜತ ಮಹೋತ್ಸವ ಕಾರ್ಯಕ್ರಮವು ಸ್ಮರಣೀಯವಾಗಿಸಲು ನಗರದ ಕಲಾಮಂದಿರ ಸೇರಿದಂತೆ ಇತರೆ ಅಭಿವೃದ್ದಿ ಕಾರ್ಯಗಳನ್ನು ರಜತ ಮಹೋತ್ಸವ ಸವಿ ನೆನಪಿನ ಹೆಸರಿನಲ್ಲಿ ಉದ್ಘಾಟಿಸಲು ಅಗತ್ಯ ಕ್ರಮ ವಹಿಸಬೇಕು. ಫಲಾನುಭವಿಗಳಿಗೆ ಸವಲತ್ತು ವಿತರಣೆಯಂತಹ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಿ ರಜತ ಮಹೋತ್ಸವವನ್ನು ಅರ್ಥಪೂರ್ಣವನ್ನಾಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ರಜತ ಮಹೋತ್ಸವ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳಿಗೆ ಸುಣ್ಣ ಬಣ್ಣವಾಗಬೇಕು. ವಿದ್ಯುತ್ ದೀಪಲಂಕಾರ ಮಾಡಬೇಕು. ಸಡಗರ ಸಂಭ್ರಮದಿಂದ ಎಲ್ಲರೂ ಪಾಲ್ಗೊಳ್ಳುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಏರ್ಪಾಡುಗಳನ್ನು ಮಾಡಬೇಕು. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಭರಚುಕ್ಕಿಯಲ್ಲಿ ಜಲಪಾತೋತ್ಸವ ಆಯೋಜನೆ ಮಾಡಬೇಕಿದೆ. ಇದಕ್ಕಾಗಿ ಅಗತ್ಯ ರೂಪುರೇಷೆಗಳನ್ನು ಸಿದ್ದಪಡಿಸಬೇಕು ಎಂದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣ ದುರಸ್ಥಿ ಕಾರ್ಯ ಮಾಡಬೇಕು. ಆಸನಗಳನ್ನು ಸರಿಪಡಿಸುವಿಕೆ ಇತರೆ ಅವಶ್ಯಕ ಕೆಲಸಗಳನ್ನು ಪೂರೈಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಜಿಲ್ಲೆಯ ಇತರೆ ಅಭಿವೃದ್ದಿ ಕೆಲಸಗಳ ಕುರಿತು ವಿವರ ಪಡೆದ ಸಚಿವರು ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗಳು ಸಮರ್ಪಕವಾಗಿ ನಿರ್ವಹಿಸಬೇಕು. ಶೌಚಾಲಯಗಳ ನಿರ್ಮಾಣ ಕಾರ್ಯವು ಅಚ್ಚುಕಟ್ಟಾಗಿ ನಡೆಯಬೇಕು. ನರೇಗಾ ಅಡಿ ಕಾರ್ಯಗಳು ಪರಿಪೂರ್ಣವಾಗಿ ನಡೆಯಬೇಕು. ಯಾವುದೇ ಅಭಿವೃದ್ದಿ ಕೆಲಸಕ್ಕೆ ಅನುದಾನದ ಕೊರತೆಯಿಲ್ಲ. ಯೋಜನೆಗಳ ಅನುಷ್ಠಾನ ಸರಿಯಾಗಿ ಆಗಬೇಕೆಂದು ಸಚಿವರು ತಾಕೀತು ಮಾಡಿದರು.
ಪಡಿತರ ಚೀಟಿ ಅರ್ಹರಿಗೆ ತಲುಪಬೇಕು. ಬಡವರು, ನಿರ್ಲಕ್ಷಿತ ಸಮುದಾಯಗಳ ಜನರಿಗೆ ಪಡಿತರ ಚೀಟಿ ವಿತರಿಸಿ. ಜನರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ ಯೋಜನೆ ಪ್ರಯೋಜನ ತಲುಪಿಸಬೇಕು. ಹಾಸ್ಟೆಲ್‌ಗಳಲ್ಲಿ ಊಟ ಉಪಹಾರ ಇತರೆ ಸೌಲಭ್ಯಗಳು ಸರಿಯಾಗಿ ನೀಡಬೇಕು. ಬ್ಯಾಂಕುಗಳಿಂದ ಆರ್ಥಿಕ ನೆರವು, ಜೀತ ವಿಮುಕ್ತರಿಗೆ ದೊರೆಯಬೇಕಾದ ಸೌಲಭ್ಯಗಳು ಸೇರಿದಂತೆ ಎಲ್ಲಾ ವರ್ಗದವರಿಗೆ ಅನುಕೂಲ ಕಲ್ಪಿಸುವ ಕಾರ್ಯಗಳನ್ನು ಅಧಿಕಾರಿಗಳು ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ಶಾಸಕರಾದ ಸಿ.ಎಸ್. ನಿರಂಜನ್ ಕುಮಾರ್, ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಉದ್ಯಮ ಶೀಲತಾ ಯೋಜನೆಯಡಿ ಫಲಾನುಭವಿಗಳಿಗೆ ವಾಹನ ಖರೀದಿಗಾಗಿ ಆರ್ಥಿಕ ನೆರವು ಚೆಕ್ ಅನ್ನು ವಿತರಿಸಿದರು.
