ಚಾಮರಾಜನಗರ: ಶಿಕ್ಷಣಕ್ಕಾಗಿ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ವಸತಿ, ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸಲಹೆ ಮಾಡಿದರು.
ನಗರದ ಹೊರವಲಯದಲ್ಲಿರುವ ಬೇಡರಪುರದ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣ ಮಾಡಲಾಗಿರುವ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಎಲ್ಲಾ ಬಗೆಯ ನೆರವು ನೀಡುತ್ತಿದೆ. ವಿದ್ಯಾರ್ಥಿನಿಲಯಗಳು ಸೇರಿದಂತೆ ವ್ಯಾಸಂಗಕ್ಕೆ ಪೂರಕವಾದ ಎಲ್ಲಾ ಅವಕಾಶಗಳು ಹಾಗೂ ಸೌಕರ್ಯಗಳನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳು ಇದರ ಸದ್ಭಳಕೆ ಮಾಡಿಕೊಳ್ಳಬೇಕು. ವಿದ್ಯೆ ಯಾರ ಸೊತ್ತು ಅಲ್ಲ. ಓದಿನ ಕಡೆಗೆ ಶ್ರದ್ಧೆಯಿಂದ ಗಮನ ಹರಿಸಿ ಉನ್ನತ ಭವಿಷ್ಯ ಕಂಡುಕೊಳ್ಳಬೇಕು ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಧ್ವನಿಯಾಗಿದ್ದ ದಿವಂಗತ ಡಿ. ದೇವರಾಜ್ ಅರಸು ಅವರು ಹಿಂದುಳಿದ ವರ್ಗಗಳ ನೇತಾರರು ಆಗಿದ್ದಾರೆ. ಅರಸು ಅವರು ಈ ಜನಾಂಗಕ್ಕೆ ಶಕ್ತಿ ನೀಡಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿಯ ಸಂವಿಧಾನದಿಂದ ಈ ಸವಲತ್ತುಗಳು ಎಲ್ಲರಿಗೂ ಲಭಿಸಿದೆ ಎಂದರು.
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರ ಉನ್ನತ ಶಿಕ್ಷಣಕ್ಕೆ ನಿಲಯ ಪಾಲಕರು ನೆರವಾಗಬೇಕು. ಅವರ ತಂದೆ-ತಾಯಿ ಸ್ಥಾನವನ್ನು ತುಂಬುವವರು ನೀವೆ ಆಗಿದ್ದೀರಿ. ನಿಲಯಕ್ಕೆ ರಾತ್ರಿಯ ಸಮಯ ಮಕ್ಕಳು ಓಡಾಡಲು ತುಂಬಾ ತೊಂದರೆ ಆಗಬಹುದು. ಕೂಡಲೇ ರಸ್ತೆ ನಿರ್ಮಾಣಕ್ಕೆ ಸೂಕ್ತ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಕೋವಿಡ್ ಕಾರಣದಿಂದ ವಿದ್ಯಾರ್ಥಿ ನಿಲಯ ತಡವಾಗಿ ಉದ್ಘಾಟನೆ ಆಗಿದೆ. ಇನ್ನ? ವಸತಿ ನಿಲಯಗಳು ಉದ್ಘಾಟನೆ ಆಗಬೇಕಿದೆ. ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ ರಾಜ್ಯ ಕಂಡ ಅತ್ಯಂತ ಅಪರೂಪದ ರಾಜಕಾರಣಿ ಡಿ. ದೇವರಾಜ್ ಅರಸು ಅವರ ಹಾದಿಯಲ್ಲಿ ವಿದ್ಯಾರ್ಥಿಗಳು ಸಾಗಿ ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಗುಣಮ್ಮ, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್. ಮಹದೇವಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜು, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ರೇವಣ್ಣ, ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
