
ಚಾಮರಾಜನಗರ: ಭಾರತದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರ ಹೋರಾಟ ವಿಶ್ವಕ್ಕೇ ಹಿಂಸಾತ್ಮಕವಾದ ಹೋರಾಟದ ಮೂಲಕ ಸ್ವಾತಂತ್ರ್ಯಗಳಿಸಿದ ನಂತರ ಗಾಂಧೀಜಿಯವರ ದೃಷ್ಟಿಕೋನ ಸರ್ವೋದಯವಾಗಿತ್ತು. ಸರ್ವೋದಯವೆಂದರೆ ಸರ್ವರ ಪ್ರಗತಿಯೇ ಆಗಿದೆ. ಸರ್ವೋದಯ ಮಹಾತ್ಮ ಗಾಂಧೀಜಿಯವರು ಕಲ್ಪಿಸಿಕೊಂಡ ಆದರ್ಶ ಸಮಾಜದ ವ್ಯವಸ್ಥೆ. ಸರ್ವೋದಯವೆಂದರೆ ಸರ್ವರ ಸರ್ವವಿಧದ ಸಮಾಜದ ಎಲ್ಲಾ ಕ್ಷೇತ್ರಗಳ ಅಭ್ಯುದಯ ಎಂದು ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ನೆಹರು ಯುವ ಕೇಂದ್ರ ಚಾಮರಾಜನಗರ ಇವರ ಆಶ್ರಯದಲ್ಲಿ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ.ನಡೆದ ಮಹಾತ್ಮ ಗಾಂಧಿ ಹುತಾತ್ಮ ದಿನದ ಅಂಗವಾಗಿ ಮಾತನಾಡುತ್ತಾ, ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯೇ ಸರ್ವೇ ಜನ ಸುಖಿನೋ ಭವಂತು ಆಗಿದೆ. ಸರ್ವರ ಕಲ್ಯಾಣವಾಗಲಿ ಸರ್ವರು ಸುಖವಾಗಿರಲಿ. ವಿಶ್ವದ ಕಲ್ಯಾಣವೇ ಅದರ ಗುರಿಯಾಗಿರುತ್ತದೆ. ಮಾನವಧರ್ಮವನ್ನು ಅನುಸರಿಸುವ ಮೂಲಕ ಶ್ರೇಷ್ಠತೆ ಯನ್ನೂ ಸಾಕ್ಷಾತ್ಕರಿಸಿಕೊಳ್ಳುವ ನಿಷ್ಠಾವಂತ ಪ್ರಯತ್ನವಾಗಿದೆ.
ಸತ್ಯ ,ಅಹಿಂಸೆ ,ಆಸ್ತೆಯ, ಅಪರಿಗ್ರಹ, ಅಭಯ, ಶರೀರ ಶ್ರಮ, ಸ್ವದೇಶಿ ,ಸಾಮಾಜಿಕ ,ಆರ್ಥಿಕ ಸಮಾನತೆ, ಸಾಮಾಜಿಕ ನ್ಯಾಯ ,ಇವೆಲ್ಲವೂ ಸರ್ವೋದಯ ಸಮಾಜದ ನೆಲೆಯಾಗಿದೆ.
ಗಾಂಧೀಜಿಯವರು ವಿಶ್ವದ ಶ್ರೇಷ್ಠ ವ್ಯಕ್ತಿ. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸತ್ಯ, ಅಹಿಂಸೆ, ಸತ್ಯಾಗ್ರಹ ಹೋರಾಟದ ಮೂಲಕ ಭಾರತದ ಸ್ವಾತಂತ್ರ್ಯ ಪಡೆಯುವಲ್ಲಿ ಯಶಸ್ವಿಯಾದರು. ಗಾಂಧೀಜಿಯವರ ಅಸಹಕಾರ ಚಳುವಳಿ ದಂಡಿ ಸತ್ಯಾಗ್ರಹ ಭಾರತ ಬಿಟ್ಟು ತೊಲಗಿ ಚಳುವಳಿ ಭಾರತದಲ್ಲಿ ಮಹತ್ತರ ಪಾತ್ರವನ್ನು ವಹಿಸಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವಲ್ಲಿ ಯಶಸ್ವಿ ಆಯಿತು ಎಂದರು.ಗಾಂಧೀಜಿಯವರ ಚಿಂತನೆ ಮತ್ತು ಅವರ ಜೀವನದ ಹಾದಿ ಬಹು ಕಠಿಣವಾದದ್ದು ಎಂದು ತಿಳಿಸಿದರು.
ಸರ್ವೋದಯದ ದೃಷ್ಟಿಕೋನ ಸಾವಿರಾರು ವರ್ಷಗಳಿಂದಲೂ ಇದ್ದು ಗಾಂಧೀಜಿಯವರಿಗೆ ದಕ್ಷಿಣ ಆಫ್ರಿಕಾದಲ್ಲಿ ಅವರ ಸ್ನೇಹಿತರೊಬ್ಬರು ನೀಡಿದ ಜಾನ್ ರಸ್ಕಿನ್ ರವರ ಅನ್ ಟು ದಿ ಲಾಸ್ಟ್ ಕಿರುಪುಸ್ತಕದ ಅಧ್ಯಯನದ ಮೂಲಕ ಅವರು ಹೊಸ ಸಿದ್ಧಾಂತದ ಚಿಂತನೆಯಲ್ಲಿ ತೊಡಗಿಕೊಂಡರು.
ಯುವ ಕಾರ್ಯಪಡೆಯ ದಾಕ್ಷಾಯಿಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಜನವರಿ ೩೦ ಗಾಂಧೀಜಿಯವರ ಹುತಾತ್ಮ ದಿನವಾಗಿ , ಸರ್ವೋದಯ ದಿನವಾಗಿ ಆಚರಿಸಲಾಗುತ್ತದೆ. ನೆಹರು ಯುವ ಕೇಂದ್ರದ ಮೂಲಕ ಹುತಾತ್ಮ ದಿನವನ್ನು ಆಚರಿಸಿ, ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಪಾಲ್ಗೊಂಡು ಎಲ್ಲಾ ಹುತಾತ್ಮರಾದ ಹೋರಾಟಗಾರರು ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜೀವನ ಮತ್ತು ಹೋರಾಟವನ್ನೂ ಯುವ ಸಮುದಾಯ ಅರಿಯಬೇಕೆಂದು ತಿಳಿಸಿದರು.
ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಮೌನ ಆಚರಿಸಿ ,ಜ್ಯೋತಿ ಬೆಳಗಿಸಲಾಯಿತು. ನೆಹರು ಯುವಕ ಕೇಂದ್ರದ ಯುವ ಕಾರ್ಯಪಡೆಯ ಸಹನಾ, ಕಾನೂನು ಸೇವೆಗಳ ಪ್ರಾಧಿಕಾರದ ನಾಗೇಂದ್ರ, ಸಮಂತ್ , ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
