ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)
ಪೋಷಕರ ಉತ್ತಮ ಜವಾಬ್ದಾರಿ , ಸಕಲ ಸೌಕರ್ಯಗಳು ಎಷ್ಟೇ ಇನ್ನಿತರ ಅನುಕೂಲವಿದ್ದರೂ ಕೆಲವು ಮಕ್ಕಳು ಪಾಠಕ್ಕಿಂತ ಮೋಜಿನ ಹಾದಿ ಹಿಡಿದು ಭವಿಷ್ಯವನ್ನು ಹಾಳುಮಾಡಿಕೊಳ್ಳುವುದು ಸರ್ವೇ ಸಾಮಾನ್ಯ.
ಇನ್ನೂ ಕೆಲವು ಮಕ್ಕಳಿಗೆ ಓದುವ ಉತ್ಸುಕತೆ ಇರುತ್ತದೆ ಹಂಬಲ ಇರುತ್ತದೆ ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಆರೋಗ್ಯ ಸ್ಥಿತಿ ಹಾಗೂ ಪೋಷಕರ ಜವಬ್ದಾರಿ ಪ್ರೋತ್ಸಾಹಕರವಾಗಿರುವುದಿಲ್ಲ. ಹೀಗಿ ರುವಾಗ ಆ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿ ಚಿಲ್ಲರೆ ಅಂಗಡಿಗಳಲ್ಲಿ , ಅವರಿವರ ತೋಟ ಹೊಲ ಗದ್ದೆಗಳಲ್ಲಿ, ಕಾರ್ಖಾನೆ ಹೋಟೆಲ್ ಗಳಲ್ಲಿ ಕಡಿಮೆ ಸಂಬಳದ ಕೆಲಸಗಾರರಾಗಿ ,ಕೂಲಿಕಾರರಾಗಿ ಸೇರಿಕೊಂಡು ಕುಟುಂಬ ನಿರ್ವಹಣೆಯ ಜೊತೆಗೆ ತಮ್ಮ ಭವಿಷ್ಯದ ಕನಸ್ಸನ್ನೂ ನನಸ್ಸಾಗಿಸುವತ್ತ ಶ್ರಮಿಸುತ್ತಿರುತ್ತಾರೆ.

ಇವರಿಗೆ ಓದುವ ಹಂಬಲ ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ ಆ ಕಷ್ಟಗಳ ನಡುವೆ ಮರೆಯಾಗಲಿಲ್ಲ.ಅಥವಾ ದುಡಿದ ಸ್ವಲ್ಪ ಹಣದಲ್ಲಿ ತಪ್ಪುದಾರಿಯನ್ನು ಕೂಡ ಹಿಡಿಯಲಿಲ್ಲ.ಬಾಲ್ಯದಿಂದಲೇ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿಕೊಂಡಿದ್ದ ಇವರು ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲದೊಂದಿಗೆ ಮೈಸೂರಿನ ಕುವೆಂಪುನಗರದ ದೇಹಧಾರ್ಢ್ಯ ವ್ಯಾಯಾಮ ಶಾಲೆಗೆ ಸೇರುತ್ತಾರೆ.ದುಡಿದ ಹಣದಲ್ಲಿ ಸ್ವಲ್ಪ ಈ ನಿಟ್ಟಿನಲ್ಲಿ ವಿನಿಯೋಗಿಸಿ ಕುಟುಂಬ ನಿರ್ವಹಣೆಗೆ ಸಂಬಳದ ಇನ್ನರ್ಧ ಹಣವನ್ನು ಕಳಿಸಿಕೊಡುತ್ತಿರುತ್ತಾರೆ.ವ್ಯಾಯಾಮ ಶಾಲೆಯಲ್ಲಿ ‘ವಿಶ್ವನಾಥ್’, ಪಂಜಕುಸ್ತಿ ಪ್ರವೀಣರು ಹಾಗೂ ತರಬೇತುದಾರರು ಇವರ ಪರಿಚಯವಾಗಿ ಮಹದೇವ್ ಅವರಿಗೆ ಕ್ರೀಡಾ ಸಾಧನೆಗೆ ಉತ್ತಮ ವೇದಿಕೆ ಸಿಗುತ್ತದೆ.ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಪಳಗಿದ ಮಹದೇವ್ ಉತ್ತಮ ಪಂಜಕುಸ್ತಿ ಆಟಗಾರನಾಗಿ ಹೊರಹೊಮ್ಮುತ್ತಾರೆ.
ಇವರು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಬೇಕಾದರೆ ತಟ್ಟೆ ಎಸೆತದಲ್ಲಿ ಮತ್ತು ಗುಂಡು ಎಸೆತದಲ್ಲಿ ತಾಲ್ಲೂಕಿನ ಮಟ್ಟದ ಪ್ರಥಮ ಸ್ಥಾನವನ್ನು ಪಡೆದುಕೊಡಿರುತ್ತಾರೆ.ಜೊತೆಗೆ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಮತ್ತು ಓಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ.ಇವರ ಈ ಯಶಸ್ಸೇ ಹೇಳುತ್ತದೆ ಅವರು ದೈಹಿಕವಾಗಿ ಎಷ್ಟು ಸಧೃಢರು ಎಂದು.ಈ ಸದೃಢ ದೇಹವು ಹಲವು ಕಷ್ಟಗಳಲ್ಲಿ ನಲುಗಿದರೂ ರಾಗಿ ಮುದ್ದೆಯ ಸೊಪ್ಪಿನ ಮಹತ್ವವನ್ನು ಸಾರಿನಿಂತಿದೆ.ಉತ್ತಮ ದೈಹಿಕ ಆಯಕಟ್ಟನ್ನು ಪಡೆದ ಇವರು ಪಂಜಕುಸ್ತಿ ಆಡಲು ಅರ್ಹರಾದರು.ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಮೈಸೂರು ಮತ್ತು ಕರ್ನಾಟಕವನ್ನು ಪ್ರತಿನಿಧಿಸಿ ಹಲವಾರು ಪಂಜಕುಸ್ತಿ ಪಂದ್ಯಗಳಲ್ಲಿ ಪ್ರಥಮ ,ದ್ವೀತೀಯ,ತೃತೀಯ ಸ್ಥಾನಗಳನ್ನು ಪಡೆದು ಪಂಜಕುಸ್ತಿ ಚಾಂಪಿಯನ್ ಆಗಿ ನಾಡಿಗೆ ಮತ್ತು ಹೆತ್ತವರಿಗೆ ಒಳ್ಳೆಯ ಹೆಸರು ತಂದಿದ್ದಾರೆ.ಇವರು ಮೊದಲು ಪಂಜಕುಸ್ತಿ ಕ್ರೀಡೆಯಲ್ಲಿ ಭಾಗವಹಿಸಿದ್ದು 2016 ರ ಇಸವಿಯಲ್ಲಿ ಮಂಗಳೂರಿನಲ್ಲಿ;”ಕರ್ನಾಟಕ ಸ್ಟೇಟ್ ಆರ್ಮ್ ರೆಸ್ಲಿಂಗ್ ಕ್ರೀಡಾ ಒಕ್ಕೂಟ” ಆಯೋಜಿಸಿದ್ದ ಪಂಜಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್ ಆಗಿ ಕ್ರೀಡಾ ಸಾಧನೆಯ ಖಾತೆಯನ್ನು ತೆರೆಯುತ್ತಾರೆ.ಇದೇ ಕ್ರೀಡಾ ಒಕ್ಕೂಟ 2017 ನೇ ಇಸವಿ ಬೆಂಗಳೂರಿನಲ್ಲಿ ಮತ್ತು 2018 ನೇ ಇಸವಿ ರಾಯಚೂರಿನಲ್ಲಿ ಏರ್ಪಡಿಸಿದ ಪಂಜಕುಸ್ತಿ ಸ್ಪರ್ಧೆಯಲ್ಲಿ ಪ್ರಥಮಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಹೊರರಾಜ್ಯದ ಕ್ರೀಡಾ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಛತ್ತೀಸ್ಘಢದಲ್ಲಿ 2019 ನೇ ಸಾಲಿನ ಭಾರತೀಯ ಆರ್ಮ್ ರೆಸ್ಲಿಂಗ್ ಕ್ರೀಡಾ ಒಕ್ಕೂಟ ಆಯೋಜಿಸಿದ ಪಂಜಕುಸ್ತಿಯಲ್ಲಿ ತೃತೀಯ ಸ್ಥಾನವನ್ನು ಅಲಂಕರಿಸಿದ್ದಾರೆ.ಹೀಗೆ 2020 ರಲ್ಲಿ ಅಂತರಾಷ್ಟೀಯ ಮಟ್ಟದ ಪಂಜಕುಸ್ತಿಯನ್ನಾಡಲು ರೋಮೇನಿಯಾಗೆ ತೆರಳುವ ಅವಕಾಶ ಸಿಕ್ಕಿತ್ತು ಆದರೆ ಈ ಕರೋನಾ ವೈರಸ್ ನಿಂದಾದ ಸಮಸ್ಯೆಗಳಿಂದ ಅದನ್ನು ಮುಂದೂಡಲಾಗಿದೆ.ಹೀಗೆ ನಿರಂತರವಾಗಿ ತಾಲ್ಲೂಕು ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟಕ್ಕೆ ಪಂಜಕುಸ್ತಿ ಕ್ರೀಡಾ ಸಾಧನೆಯ ಮೂಲಕ ಅರಳಿದ ಗ್ರಾಮೀಣ ಪ್ರತಿಭೆಯನ್ನು ಸಂದರ್ಶಿಸಿದಾಗ ಸಿಕ್ಕಂತ ಮಾಹಿತಿಯ ಫಲಕೃತ ಇಂತಿಷ್ಟು ಅಂಶವಾಗಿದೆ.ಹಾಗೂ ಮಹದೇವ್ ಅವರು ಕನಸ್ಸು ಕಂಡ ರೀತಿಯಲ್ಲೇ ಯಶಸ್ಸನ್ನು ಕಾಣಲು ಹಲವಾರು ಸಮಸ್ಯೆಗಳನ್ನು ಈಗಾಗಲೇ ಎದುರಿಸಿದ್ದಾರೆ ಹಲವರಿಗೆ ನಿದರ್ಶನವಾಗಿ ನಿಂತಿದ್ದಾರೆ.ಇನ್ನೂ ಇವರಿಗೆ ಆರ್ಥಿಕ ಸಂಕಷ್ಟಗಳು ಇದ್ದು ಇಷ್ಟೆಲ್ಲಾ ಜಿಲ್ಲೆ, ರಾಜ್ಯ,ದೇಶದ ಗೌರವಾರ್ಥವಾಗಿ ಕ್ರೀಡಾ ಸಾಧನೆ ಮಾಡಿದರೂ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಉದ್ಯೋಗದ ಅಭದ್ರತೆಯೊಂದಿಗೆ ಕ್ರೀಡೆಯಲ್ಲಿ ಹೆಚ್ಚೆಚ್ಚು ಸಾಧನೆ ಮಾಡಬೇಕೆಂಬ ದೊಡ್ಡ ಕನಸ್ಸನ್ನು ಹೊತ್ತು ನಿಂತಿದ್ದಾರೆ.ಇವರಿಗೆ ಸರ್ಕಾರವು ಬೆಂಬಲವಾಗಿ ನಿಂತು ಇವರ ಕುಟುಂಬಕ್ಕೆ ಆರ್ಥಿಕ ಸಹಾಯದ ಜೊತೆಗೆ ಸರ್ಕಾರಿ ಅಥವಾ ಅರೆಸರ್ಕಾರಿ ಇಲಾಖೆಗಳಲ್ಲಿ ಮಹದೇವ್ ಅವರಿಗೆ ಉದ್ಯೋಗ ನೀಡಿ ಭವಿಷ್ಯಕ್ಕೆ ಉತ್ತಮ ನೆಲೆಗಟ್ಟನ್ನು ಒದಗಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.
ಹಾಗೂ ಮಹದೇವ್ ಅವರ ಆಸೆ ಮತ್ತು ವಿನಂತಿಯೂ ಆಗಿದೆ.ಈ ರೀತಿಯ ಸಾಧನೆ ಮಾಡಬೇಕೆಂಬ ಹಲವಾರು ಮಹದೇವ್ ನಂತವರು ಎಲೆಮರೆಕಾಯಿಯಂತೆ ಬದುಕುತ್ತಿದ್ದಾರೆ ಸರ್ಕಾರವೇ ಆಗಲಿ ಸಮಾಜವೇ ಆಗಲಿ ಅವರನ್ನು ಗುರುತಿಸಿ ಪ್ರೋತ್ಸಾಹಿಸಿ ಮುಖ್ಯವಾಹಿನಿಗೆ ತರುವುದು ದೇಶದ ಹೆಮ್ಮೆಯ ಸಂಗತಿಯಾಗಿರುವುದರಿಂದ ದಯವಿಟ್ಟು ಎಲ್ಲಾ ಕಡೆ ಪ್ರತಿಭೆಗಳ ಪುರಸ್ಕಾರವಾಗಲಿ.