ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಮೀಸಲು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ರವರ ಅತ್ತೆ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದು, ಮೃತರ ಮಗ ತಾಯಿಯನ್ನು ಕೊನೆಯ ಬಾರಿಗೆ ನೋಡಲು ಬಂದು ಹೃದಯಾಘಾತದಿಂದ ಮೃತಪಟ್ಟಿರುವ ಧಾರುಣ ಘಟನೆ ಚಾಮರಾಜನಗರ ತಾಲ್ಲೂಕಿನ ಹುರುಳಿನಂಜನಪುರ ಗ್ರಾಮದಲ್ಲಿ ನಡೆದಿದೆ.
ಕೊರೊನಾ ಸೋಂಕಿಗೆ ಶನಿವಾರ ಬೆಳಿಗ್ಗೆ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ರವರ ಅತ್ತೆ ಸರೋಜಮ್ಮ(76) ಸಾವನ್ನಪ್ಪಿದ್ದರು. ಮೃತ ಸರೋಜಮ್ಮ ಅವರ ಅಂತಿಮ ಸಂಸ್ಕಾರದ ಸ್ಥಳಕ್ಕೆ ಬಂದ ಅವರ ಮಗ ಸುರೇಶ್ ಕುಮಾರ್ (53) ಅವರು ತಾಯಿಯ ಮೃತ ದೇಹ ಕಂಡು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕೊರೊನಾ ವಾರಿಯರ್ಸ್‌ಗಳಿಂದ ಸರೋಜಮ್ಮ ಅವರ ಅಂತ್ಯಕ್ರಿಯೆಗೆ ಅಂತಿಮ ಸಿದ್ಧತೆ ನಡೆದಿತ್ತು. ಕೊನೆಯ ಬಾರಿಗೆ ತಾಯಿಯ ಮುಖ ನೋಡಲು ಬೆಂಗಳೂರಿನಿಂದ ಬಂದ ಅವರ ಮಗ ಸುರೇಶ್ ಕುಮಾರ್ ಶವಸಂಸ್ಕಾರದ ಅನತಿ ದೂರದಲ್ಲೇ ಕುಸಿದುಬಿದ್ದು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.
ಸರೋಜಮ್ಮ ಅವರು ಜಿಲ್ಲೆಯ ಕೊಳ್ಳೇಗಾಲ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವರ ಅತ್ತೆಯಾಗಿದ್ದು,. ಸದ್ಯ, ಮಾಜಿ ಶಾಸಕ ನಂಜುಂಡಸ್ವಾಮಿರವರ ಮನೆಯಲ್ಲಿ ಇದೀಗ ಶೋಕ ಮನೆ ಮಾಡಿದೆ. ತಾಯಿ-ಮಗ ಇಬ್ಬರೂ ಒಂದೇ ದಿನ ಸಾವನ್ನಪ್ಪಿರುವುದು ದುರಂತವೇ ಸರಿ.

By admin