ಸರಗೂರು: ಪಟ್ಟಣ ಪಂಚಾಯಿತಿ ಕಚೇರಿಗೆ ಮಧ್ಯವರ್ತಿಗಳು ಬಂದು ಖಾತೆ ವಗೈರಿಗಳು ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳನ್ನು ಮಾಡಿಕೊಡಿ ಎಂದು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವ ಮಧ್ಯವರ್ತಿಗಳ ಹಾವಳಿ, ಅವರ ಕೆಲಸವನ್ನು ತಡೆಹಿಡಿಯಬೇಕೆಂದು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಅಧ್ಯಕ್ಷೆ ರಾಧಿಕಾ ಶ್ರೀನಾಥ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣದಲ್ಲಿ ವಾಸಿಸುವ ಅಸಹಾಯಕ ಜನರ ನಿವೇಶನ-ವಸತಿ ಸೇರಿದಂತೆ ಇನ್ನಿತರ ಕೆಲಸ ಮಾಡಿಸಿಕೊಡುವುದಾಗಿ ಮಧ್ಯವರ್ತಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇದಲ್ಲದೆ ಅಧಿಕಾರಿಗಳ ಮೇಲೂ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಹೀಗಾಗಿ ಮಧ್ಯವರ್ತಿಗಳ ಹಾವಳಿ, ಅವರ ಕೆಲಸವನ್ನು ಸ್ಥಗೀತಗೊಳಿಸಬೇಕು ಎಂದು ನಿರ್ಣಯಿಸಲಾಯಿತು.

೨೦೨೨-೨೦೨೩ನೇ ಸಾಲಿಗೆ ಆಡು, ಕುರಿ, ಕೋಳಿ ಮಾಂಸದ ಮಾರಾಟ ಅಂಗಡಿಗಳ ವಾರ್ಷಿಕ ಲೈಸೆನ್ಸ್ ನೀಡುವುದನ್ನು ಸ್ಥಗಿತಗೊಳಿಸಿ ಬಹಿರಂಗ ಹರಾಜು ಮಾಡಬೇಕು. ಸಂತೆ ಸುಂಕ ವಸೂಲಿ ಮತ್ತು ರಸ್ತೆ ಬದಿ ವ್ಯಾಪಾರಸ್ಥರ ನೆಲಬಾಡಿಗೆ ಸುಂಕ ವಸೂಲಿ ಬಹಿರಂಗ ಹರಾಜು ಮಾಡಬೇಕು. ಈಗಾಗಲೇ ಪಟ್ಟಣ ಪಂಚಾಯಿತಿಯಿಂದ ಬಾಡಿಗೆ ಪಡೆದ ಮಳಿಗೆ ಮಾಲೀಕರು ತಿಂಗಳ ೫ನೇ ತಾರೀಖಿನಂದು ಸರಿಯಾಗಿ ಬಾಡಿಗೆ ಪಾವತಿಸದಿದ್ದರೆ, ಅಂಥ ಅಂಗಡಿ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ, ಬೀಗ ಹಾಕಬೇಕು. ಪಟ್ಟಣದಲ್ಲಿ ಎಸ್‌ಎಫ್‌ಸಿ ಅನುದಾನ, ೧೫ನೇ ಹಣಕಾಸು, ಕುಡಿಯುವ ನೀರಿನ ಅನುದಾನ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಬಂದಿರುವ ಟೆಂಡರ್‌ಗಳನ್ನು ಅನುಮೋದಿಸುವ ಕುರಿತು ಸಬೆಯಲ್ಲಿ ಚರ್ಚಿಸಲಾಯಿತು.

ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಎಲ್.ರಾಜಣ್ಣ ಮಾತನಾಡಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ನೂರ್ ಅಹಮದ್ ಅವರು ತಮ್ಮ ಅವಧಿಯಲ್ಲಿ ನೀಡಿರುವ ಅಕ್ರಮ ಸಾಗುವಳಿ ಮೇಲೆ ಖಾತೆ ನೀಡಿದ್ದು, ಸದರಿ ನಿವೇಶನಕ್ಕೆ ಸಂಬಂಧಪಟ್ಟ ಕಂದಾಯ ಇಲಾಖೆ ಖಾತೆಯ ದಾಖಲಾತಿಗಳನ್ನು ತಡೆಯಬೇಕು. ಜತೆಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಯಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ.ಜಿ.ಸತೀಶ್ ಅವರು, ಅಕ್ರಮ ಖಾತೆ ಸಂಬಂಧಿಸಿದಂತೆ ಈಗಾಗಲೇ ದೂರು ದಾಖಲಿಸಲಾಗಿದೆ ಎಂದು ಉತ್ತರಿಸಿದರು.
ಸಭೆಯಲ್ಲಿ ಡಿಸೆಂಬರ್ ೨೦೨೧ರಿಂದ ಫೆಬ್ರವರಿ ೨೦೨೨ರ ತಿಂಗಳ ಜಮಾ ವಿವರವನ್ನು ವಿವರಿಸಲಾಯಿತು. ಪಟ್ಟಣ ಪಂಚಾಯಿತಿ ಸದಸ್ಯರೆಲ್ಲರೂ ಒಮ್ಮತದಿಂದ ಜಮಾ ವಿವರಗಳ ಲೆಕ್ಕಪತ್ರಗಳು ಸರಿಯಿಲ್ಲ. ಹಿಂದಿನ ಅವಧಿಯಲ್ಲಿನ ಬಿಲ್‌ಗಳಿಗೆ ಈ ಸಾಲಿನಲ್ಲಿ ಹಣ ಬಿಡುಗಡೆ ಮಾಡುವುದು ಯಾವ ಲೆಕ್ಕ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು.

ಪಟ್ಟಣದಲ್ಲಿ ಗಡಿಭಾಗದ ಮುಖ್ಯ ರಸ್ತೆಯಲ್ಲಿ ಸ್ವಾಗತ ಕಮಾನುಗಳನ್ನು ತುಂಬಸೋಗೆ ಸೇತುವೆ ಪಕ್ಕ, ಕಬಿನಿ ಬಲದಂಡೆ ನಾಲೆ ಸಮೀಪದಲ್ಲಿ ಅಳವಡಿಸಲು ಕ್ರಿಯಾ ಯೋಜನೆ ರೂಪಿಸುವುದು. ಅಂಗಡಿಗಳು, ಬಾರ್‌ಗಳ ತ್ಯಾಜ್ಯಗಳನ್ನು ರಸ್ತೆಯ ಪಕ್ಕದಲ್ಲಿ ಬಿಸಾಡದಂತೆ ಎಚ್ಚರಿಸುವುದು ಸೇರಿದಂತೆ ಇನ್ನಿತರ ವಿಷಯಗಳನ್ನು ಚರ್ಚಿಯಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿ, ಸರಗೂರು ಪಟ್ಟಣದ ಅಭಿವೃದ್ಧಿ ಪೂರಕವಾದ ಯೋಜನೆಗಳನ್ನು ತರಬೇಕು. ಜತೆಗೆ ಪಟ್ಟಣ ಪಂಚಾಯಿತಿಯ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಜನಪ್ರತಿನಿಧಿಗಳು ಸೇರಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಉಪಾಧ್ಯಕ್ಷ ವಿನಾಯಕ ಪ್ರಸಾದ್ ಮಾತನಾಡಿದರು. ಸದಸ್ಯರಾದ ಹೇಮಾವತಿ ರಮೇಶ್, ಚೈತ್ರಾಸ್ವಾಮಿ, ಸಣ್ಣತಾಯಮ್ಮ, ಎಸ್.ಎಲ್.ರಾಜಣ್ಣ, ನೂರಾಳಸ್ವಾಮಿ, ಶಿವಕುಮಾರ್, ಉಮಾರಾಮು, ಶ್ರೀನಿವಾಸ್, ಚಲುವಕೃಷ್ಣ, ಮುಖ್ಯಾಧಿಕಾರಿ ಬಿ.ಜಿ.ಸತೀಶ್, ಸಿಬ್ಬಂದಿಗಳಾದ ಸುರೇಶ್, ನಾಗರತ್ನ, ಸಂತೋಷ್, ಪಳನಿ, ಸತೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.