ಯಶ್ವಿನ್ ಸಿನಿ ಪ್ರೊಡಕ್ಷನ್ ಹೌಸ್ ರವರ ಪ್ರಪ್ರಥಮ ಕಾಣಿಕೆಯಾಗಿ ಕನ್ನಡ ಚಿತ್ರ ರಸಿಕರಿಗೆ ಸದಭಿರುಚಿಯ ಚಿತ್ರ ನೀಡುವ ಸದುದ್ದೇಶ ಹೊಂದಿರುವ ನಿರ್ಮಾಪಕರುಗಳಾದ ಆರ್. ಜಗದೀಶ್, ಆರ್. ರಾಜಶ್ರೀ ಬಾಲಕೃಷ್ಣ, ಬಿ. ಕುಮಾರಸ್ವಾಮಿ, ಎಂ. ಮೋಹನ್ ಕುಮಾರ್ ಅವರುಗಳು ನಿರ್ಮಿಸಿರುವ ಲವ್ ಸ್ಟೋರಿ 1998 ಕನ್ನಡ ಸಿನಿಮಾವು ಕಾಲೇಜ್ ವಿದ್ಯಾರ್ಥಿಗಳ ಪ್ರೇಮ ಕಥೆಯಾಗಿದ್ದು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಹಂಬಲವನ್ನು ಇಟ್ಟುಕೊಂಡಿದೆ.

ಕವಿ, ಕಾದಂಬರಿಕಾರರಾಗಿ ಈಗಾಗಲೇ ಕನ್ನಡ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವ ನಾಗರಾಜ್ ತಲಕಾಡು ಅವರು ಈ ಚಿತ್ರದ ನಿರ್ದೇಶಕರು. ಹೆಸರಾಂತ ನಿರ್ದೇಶಕರುಗಳಾದ ಟಿ. ಎಸ್. ನಾಗಾಭರಣ, ಎಸ್. ನಾರಾಯಣ್, ನಾಗೇಂದ್ರ ಮಾಗಡಿ, ಚಂದ್ರಶೇಖರ ಬಂಡಿಯಪ್ಪ ಮುಂತಾದವರ ಸಿನಿಮಾಗಳಲ್ಲಿ ಕೆಲಸ ಕಲಿತು ಈಗ ಸ್ವತಂತ್ರವಾಗಿ ಸಿನಿಮಾ ನಿರ್ದೇಶಿಸಿದ್ದಾರೆ. ಸಾಹಿತ್ಯ ಬೋಧಿಸುವ ಉಪನ್ಯಾಸಕರಾಗಿರುವ ನಾಗರಾಜ್ ಅವರು ವಿಭಿನ್ನ ಕಥೆ, ವಿಶೇಷ ಶೈಲಿಯ ಸಂಭಾಷಣೆಗಳನ್ನು ರಚಿಸಿರುವುದಲ್ಲದೆ ಚಿತ್ರದ ಒಂದೆರಡು ಗೀತೆಗಳಿಗೆ ಸಾಹಿತ್ಯ ಮತ್ತು ರಾಗ ಸಂಯೋಜನೆಯ ಜವಾಬ್ದಾರಿ ಸಹ ಹೊತ್ತಿರುತ್ತಾರೆ. ನಾಗರಾಜ್ ಅವರು ತಮ್ಮ ಪಾರಿಜಾತ ಎಂಬ ಅಪ್ರಕಟಿತ ಕಾದಂಬರಿಯೊಂದರ ಕಥಾ ಹಂದರವನ್ನು ಸಿನಿಮಾ ಚಿತ್ರಕಥೆಯನ್ನಾಗಿ ಪರಿವರ್ತಿಸಿ ತೆರೆಗೆ ತರುತ್ತಿದ್ದು ಈ ಕಥೆ ಖಚಿತವಾಗಿ ದಕ್ಷಿಣ ಭಾರತದ ಚಿತ್ರ ರಂಗಕ್ಕಾದರೂ ಸಂಪೂರ್ಣ ಹೊಸದು ಮತ್ತು ಭಿನ್ನ ಶೈಲಿಯದಾಗಿದ್ದು ಹೊಸ ಟ್ರೆಂಡ್ ಸೃಷ್ಟಿಸುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಅವರ ಅಂಬೋಣ.
ವಿಶೇಷವೆಂದರೆ ಲವ್ ಸ್ಟೋರಿ 1998 ಸಿನಿಮಾ ನಿರ್ದೇಶಕ, ನಿರ್ಮಾಪಕರು ಮಾತ್ರವಲ್ಲದೆ ಬಹುಪಾಲು ನಟ ನಟಿಯರು, ತಾಂತ್ರಿಕ ವರ್ಗದ ಕೆಲವರು ಪ್ರಮುಖರು ಹೊಸಬರಾಗಿದ್ದು ಇಡೀ ಚಿತ್ರ ತಂಡ ಮೈಸೂರಿನವರೇ ಆಗಿರುತ್ತಾರೆ.
ಬಹುತೇಕ ಮೈಸೂರು ಮತ್ತು ಆಸುಪಾಸಿನಲ್ಲೇ ಚಿತ್ರೀಕರಣ ನಡೆಸಿ ಕುಂಬಳಕಾಯಿ ಹೊಡೆಯಲಾಗಿರುತ್ತದೆ. ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ತ್ವರಿತಗತಿಯಲ್ಲಿ ಸಾಗುತ್ತಿವೆ.

ಈ ಚಿತ್ರದ ನಾಯಕನಾಗಿ ಮಿಥುನ್ ಮತ್ತು ನಾಯಕಿಯಾಗಿ ಕೃತಿಕಾ ಅವರು ಇಡೀ ಸಿನಿಮಾವನ್ನು ಆವರಿಸಿಕೊಂಡು ಮಿಂಚಿದ್ದಾರೆ. ಫ್ರೆಂಡ್ಸ್ ಪಾತ್ರಗಳಾಗಿ ಹರೀಶ, ರಾಘವೇಂದ್ರ, ಡಾ. ಯೋಗೇಶ, ಶ್ಯಾಮ್, ರಾಯಣ್ಣ, ರಂಗಪ್ಪ, ಬೃಂದಾ, ರಶ್ಮಿರಾಮ್, ಅರ್ಪಿತಾ ಮುಂತಾದವರು ತಮ್ಮ ಪಾತ್ರ ಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ಹಿರಿಯ ಮತ್ತು ಪೋಷಕ ಪಾತ್ರಗಳಾಗಿ ಪ್ರಕಾಶ್ ಶೆಣೈ, ಜಯರಾಜ್, ಬಿ. ಕುಮಾರಸ್ವಾಮಿ, ವಕೀಲ ಹರೀಶ್ ಗೌಡ, ರಾಧಾಮಣಿ, ಸುಂದರ್ ರಾಜನ್, ಪವಿತ್ರ ಮುಂತಾದವರು ನಟಿಸಿದ್ದಾರೆ. ಬಾಲನಟಿಯರಾಗಿ ರಚನಾ ಮತ್ತು ಶ್ರೇಯಾ ತಮ್ಮ ಐಡೆಂಟಿಟಿಯನ್ನು ಮನಗಾಣಿಸುತ್ತಾರೆ.
ಜೋಡಿ ಖಳನಟರಾಗಿ ಕ್ರಿಶ್, ಹಿತಾರ್ಥ್ ಗೌಡ ಆರ್ಭಟಿಸಿದ್ದಾರೆ. ಹೆಸರಿಗೆ ತಕ್ಕಂತೆ ಡಿಫರೆಂಟ್ ಡ್ಯಾನಿ ಮಾಸ್ಟರ್ ಡಿಫರೆಂಟ್ ಆಗಿ ಡ್ಯೂಪ್ ರಹಿತ ಸಹಜ ಶೈಲಿಯಲ್ಲಿ ಸಾಹಸ ಸಂಯೋಜನೆ ಮಾಡಿರುತ್ತಾರೆ.
ಸಂಗೀತ ಈ ಚಿತ್ರದ ಆಕರ್ಷಣೆಗಳಲ್ಲೊಂದಾಗಿದ್ದು ಕನ್ನಡ ಸಂಗೀತ ಲೋಕದ ದಿಗ್ಗಜರಾದ ರಾಜನ್ – ನಾಗೇಂದ್ರ, ಶಂಕರ್ – ಗಣೇಶ್ ರಂತೆ ಲವ್ ಸ್ಟೋರಿ 1998 ಸಿನಿಮಾಕ್ಕೆ ರಾಘವ್ ಸುಭಾಷ್ ಮತ್ತು ಸ್ಯಾಮ್ ಈ ಇಬ್ಬರೂ ಸಂಗೀತದಲ್ಲಿ ಮೋಡಿ ಮಾಡಿ ಚಿತ್ರವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅದಕ್ಕೆ ತಕ್ಕಂತೆ ಉತ್ತಮ ಸಾಹಿತ್ಯ ನೀಡಿರುವವರು ಡಾ. ದೇವರಾಜ. ಎಸ್ , ಸುಭಾಷ್ ಬೆಟಗೇರಿ, ಸಚಿನ್ ಎಸ್.
ಡಾ ದೇವರಾಜ ಎಸ್ ಅವರು ಕೆಲವು ಹಾಡುಗಳಿಗೂ ಸಹ ವಿಶೇಷವಾದ ರಾಗ ಸಂಯೋಜನೆ ಮಾಡಿರುತ್ತಾರೆ. ಈ ಸಿನಿಮಾದ ಕ್ಯಾಮೆರಾ ಚಾಲನೆ ನಿರೀಕ್ಷಿತ್. ಪಿ ಅವರದ್ದಾಗಿದ್ದು ಸಂಕಲನ ಜವಾಬ್ದಾರಿ ಎಸ್ ಮಹೇಂದ್ರಕರ್ ಅವರದ್ದು.
ಸಮಾಜದ ಮೇಲೆ ಧನಾತ್ಮಕ ಪರಿಣಾಮ ಬೀರುವ ಉತ್ತಮ ಕಥೆಯನ್ನು ಕಮರ್ಷಿಯಲ್ಲಾಗಿ ಹೇಳಲಾಗಿರುವ ಈ ಸಿನಿಮಾದ ಕಥೆ, ಸಂಗೀತ, ಸಂಭಾಷಣೆ, ದೃಶ್ಯಗಳು ಯಾವುದೇ ಇರಲಿ ಚಿತ್ರ ರಸಿಕರ ಗಮನ ಆಚೀಚೆ ಆಗದಂತೆ ಸಾಗುವ ಸಿನೆಮಾವನ್ನು ತೆರೆಗೆ ತರುತ್ತಿದ್ದು ತಮ್ಮ ಸಿನಿಮಾ ಖಚಿತವಾಗಿ ಕ್ಲಾಸ್ ಮತ್ತು ಮಾಸ್ ಎರಡೂ ವರ್ಗಗಳನ್ನು ಖುಷಿ ಪಡಿಸಿ ಅವರಿಂದ ಬೆನ್ನು ತಟ್ಟಿಸಿ ಕೊಳ್ಳುತ್ತದೆ ಎಂಬುದು ಚಿತ್ರ ತಂಡದ ಬಲವಾದ ನಂಬಿಕೆ.