ಚಾಮರಾಜನಗರ, ಏಪ್ರಿಲ್ ೨೦ (ಕರ್ನಾಟಕ ವಾರ್ತೆ):- ಮೈಸೂರು ವಿಭಾಗದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸಿ. ಮಲ್ಲಿಕ್ ಅವರು ಚಾಮರಾಜನಗರ ಪಟ್ಟಣದಲ್ಲಿಂದು ಸಾರ್ವಜನಿಕರಿಂದ ಕುಂದು ಕೊರತೆ ಹಾಗೂ ದೂರುಗಳನ್ನು ಆಲಿಸಿದರು. 
ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಡೆದ ಕುಂದು-ಕೊರತೆ ಸಭೆಯಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸಾರ್ವಜನಿಕರಿಂದ ವಿವಿಧ ಇಲಾಖೆಗಳ ವಿರುದ್ದ ೧೫ ದೂರುಗಳು ದಾಖಲಾದವು. 
ಚಾಮರಾಜನಗರ ನಗರಸಭೆಯ ಕಾರ್ಯವ್ಯಾಪ್ತಿಗೆ ಸಂಬಂಧಿಸಿದಂತೆ ಹೆಚ್ಚು ದೂರುಗಳು ದಾಖಲಾದವು. ಪಟ್ಟಣದ ೮ನೇ ವಾರ್ಡಿನ ಹೊಸ ಗೃಹ ಮಂಡಳಿಯ ಬಡಾವಣೆಯಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿಲ್ಲ. ಸ್ಟೇಡಿಯಂ ರಸ್ತೆ ಬದಲು ನಂಜನಗೂಡು ರಸ್ತೆ ಎಂಬುದಾಗಿ ದಾಖಲಾತಿಗಳಲ್ಲಿ ನಮೂದಿಸಿ ಹೆಚ್ಚಾಗಿ ಮನೆ ತೆರಿಗೆಯನ್ನು ವಿಧಿಸುತ್ತಿದ್ದು ಇದರಿಂದ ಇಲ್ಲಿನ ನಿವಾಸಿಗಳಿಗೆ ತುಂಬಾ ತೊಂದರೆಯಾಗಿದೆ ಎಂಬುದಾಗಿ ದೂರು ನೀಡಲಾಯಿತು. ಈ ಸಂಬಂಧ ನಗರಸಭೆಯ ಆಯುಕ್ತರನ್ನು ದೂರು ಸ್ವೀಕಾರಕ್ಕೆ ಬರಲು ಸೂಚಿಸಲಾಯಿತು. ಸಾರ್ವಜನಿಕರ ಮನವಿ ಬಗ್ಗೆ ತಿಳಿಸಿ ಕೂಡಲೇ ಸದರಿ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು. ಸದರಿ ದೂರಿನ ಸ್ಥಳಕ್ಕೆ ಭೇಟಿ ನೀಡಲಾಯಿತು. 
ಚಾಮರಾಜನಗರ ಪಟ್ಟಣದ ನ್ಯಾಯಾಲಯದ ರಸ್ತೆಯಲ್ಲಿ ಕ್ರಿಯಾ ಯೋಜನೆಯಂತೆ ರಸ್ತೆ ನಿರ್ಮಾಣ ಮಾಡದೇ ಕಡಿಮೆ ವಿಸ್ತೀರ್ಣದ ರಸ್ತೆ ನಿರ್ಮಾಣ ಮಾಡಿ ಅಕ್ರಮವೆಸಗಿದ್ದಾರೆ ಎಂಬುದಾಗಿ ದೂರುದಾರರು ತಿಳಿಸಿದರು. ಈ ಸಂಬಂಧ ಸೂಕ್ತ ದಾಖಲಾತಿಗಳೊಂದಿಗೆ ದೂರು ನೀಡುವಂತೆ ದೂರುದಾರರಿಗೆ ತಿಳಿಸಲಾಯಿತು.
ಚಾಮರಾಜನಗರ ತಾಲ್ಲೂಕಿನ ಕಾಡಳ್ಳಿ ಗ್ರಾಮ, ಮಸಗಾಪುರ, ಕಿರಗಸೂರು, ಮರಿಯಾಲ, ಮರಿಯಾಲದಹುಂಡಿ ಮತ್ತು ಕೆಲ್ಲಂಬಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಈ ಎಲ್ಲಾ ಗ್ರಾಮಗಳಿಗೆ ಪರಸ್ಪರ ಸಂಪರ್ಕಿಸಲು ಗಣಿ ಮಾಲೀಕರಿಗೆ ಅಧಿಕಾರಿಗಳು ಅನುಕೂಲ ಮಾಡಿಕೊಟ್ಟಿದ್ದಾರೆ. ಗಣಿಗಾರಿಕೆಯಲ್ಲಿ ಅಕ್ರಮವಾಗಿ ಅತೀ ಹೆಚ್ಚು ಸ್ಪೋಟಕಗಳನ್ನು ಬಳಸುತ್ತಿದ್ದಾರೆ ಎಂಬಿತ್ಯಾದಿಯಾಗಿ ದೂರನ್ನು ಸಾರ್ವಜನಿಕರು ನೀಡಿದರು. ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಕೂಡಲೇ ಸ್ಥಳ ಪರಿಶೀಲನೆ ಮಾಡಿ ಅಕ್ರಮ ಗಣಿಗಾರಿಕೆಗಳ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ವರದಿಯನ್ನು ನೀಡುವಂತೆ ಸೂಚಿಸಲಾಯಿತು. 
ಚಾಮರಾಜನಗರ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಇ-ಸ್ವತ್ತು ಮಾಡಿಕೊಡಲು ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಈ ಬಗ್ಗೆ ಸೂಕ್ರ ಕ್ರಮ ತೆಗೆದುಕೊಳ್ಳುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ. 
ಯಳಂದೂರು ತಾಲ್ಲೂಕಿನ ಗ್ರಾಮದ ಉಪ್ಪಾರ ಬೀದಿಯ ೨೨೯೨೦ ಚದರ ಅಡಿಗಳು ಜಾಗವನ್ನು ವಿತರಣಾ ನಾಲೆ ೪೪ರ ನಾಲಾ ನಿರ್ಮಾಣಕ್ಕೆ ವೈ.ಕೆ.ಮೋಳೆ ಗ್ರಾಮದ ಗ್ರಾಮಠಾಣಾ ಭೂಮಿಯನ್ನು ಉಪಯೋಗಿಸಿಕೊಂಡು ಇದರಲ್ಲಿ ಕೆಲವು ಫಲಾನುಭವಿಗಳಿಗೆ ಪರಿಹಾರ ನೀಡದೇ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಸತಾಯಿಸುತ್ತಿರುವ ಬಗ್ಗೆ ದೂರು ನೀಡಿದ್ದು ದೂರನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಮತ್ತು ದಾಖಲಾತಿಗಳನ್ನು ನೀಡುವಂತೆ ಸೂಚಿಸಲಾಗಿದೆ. 

ಈ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಸಾರ್ವಜನಿಕರು ದೂರು ನೀಡಲು ಮೈಸೂರಿನಲ್ಲಿರುವ ಮೈಸೂರು ವಿಭಾಗದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿ ಅಥವಾ ಚಾಮರಾಜನಗರದಲ್ಲಿರುವ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರ ಕಚೇರಿಗೆ ಭೇಟಿ ನೀಡಬಹುದು ಎಂದು ಚಾಮರಾಜನಗರ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.