ಚಾಮರಾಜನಗರ: ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮ ಪಂಚಾಯತಿ, ಜೀರಿಗೆಗದ್ದೆ ಗ್ರಾಮದ ಆಶ್ರಮ ಶಾಲೆ, ಅಂಗನವಾಡಿ, ಹಿರಿಯಂಬಲದ ಆಶ್ರಮ ಶಾಲೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯತ್ರಿ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.

ಲೊಕ್ಕನಹಳ್ಳಿ ಗ್ರಾಮ ಪಂಚಾಯತಿಯ ಕಚೇರಿ ಸಭಾಂಗಣದಲ್ಲಿ ಅಮೃತ ಗ್ರಾಮ ಪಂಚಾಯತಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಯೋಜನೆಯ ಪ್ರಗತಿಗಾಗಿ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಬೇಕು. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಶಾಲಾ ಮಕ್ಕಳ ಆಟದ ಮೈದಾನ, ಪೌಷ್ಟಿಕ ಕೈ ತೋಟವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬೇಕು. ಯಾವುದೇ ಲೋಪಗಳಿಗೆ ಅವಕಾಶವಾಗಬಾರದು ಎಂದು ಸೂಚನೆ ನೀಡಿದರು.
ಕೆಲಸ ಪರಿಪೂರ್ಣವಾಗಬೇಕಾದರೆ ಸಮನ್ವಯ ಬಹಳ ಮುಖ್ಯವಾಗಿದೆ. ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ಹಾಸ್ಟಲ್‌ಗಳಲ್ಲಿ ಸಮರ್ಪಕವಾಗಿ ಮೂಲ ಸೌಕರ್ಯ ಒದಗಿಸಬೇಕು. ಯಾವುದೇ ಕೊರತೆ ಕಂಡುಬರಬಾರದು ಎಂದು ಅವರು ತಿಳಿಸಿದರು.
ಶಾಲಾ ಮಕ್ಕಳಿಗೆ ಕೈಗೊಳ್ಳಲಾಗಿರುವ ಲಸಿಕಾ ಅಭಿಯಾನವನ್ನು ತ್ವರಿತಗೊಳಿಸಬೇಕು. ಕೆರೆ ಅಭಿವೃದ್ಧಿ ಸಮಿತಿ, ಜೀವ ವೈವಿಧ್ಯತೆ ಸಮಿತಿಗೆ ಪಂಚಾಯತಿಯ ಸದಸ್ಯರು ಸದಸ್ಯರಾಗಿದ್ದು ಅದನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಇರುವುದರಿಂದ ಗ್ರಾಮ ಪಂಚಾಯತಿಗಳ ಸಂಪತ್ತಿನ ಬೆಳವಣಿಗೆಗೆ ನೆರವಾಗಬೇಕು ಎಂದರು.
ಜೀರಿಗೆಗದ್ದೆ, ಹಿರಿಯಂಬಲ ಆಶ್ರಮ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಕಲಿಕೆ ಸಂಬಂಧ ಸಮಾಲೋಚಿಸಿದರು. ಶಿಕ್ಷಕರೊಂದಿಗೂ ಶಾಲಾ ಚಟುವಟಿಕೆ ಪರೀಕ್ಷೆ ಸಿದ್ದತೆಗಳ ಬಗ್ಗೆ ಚರ್ಚೆ ನಡೆಸಿದರು. ವಿದ್ಯಾರ್ಥಿಗಳ ಹಾಜರಾತಿ, ದಾಖಲಾತಿಗಳನ್ನು ಪರಿಶೀಲಿಸಿದರು. ಆಶ್ರಮ ಶಾಲೆಯ ಅಡುಗೆ ಕೋಣೆ, ಆಹಾರ ಸಾಮಗ್ರಿ ದಾಸ್ತಾನು ವೀಕ್ಷಿಸಿದರು. ಕೊಠಡಿಗಳು, ಶೌಚಾಲಯಗಳ ನಿರ್ವಹಣೆ ಬಗ್ಗೆಯೂ ಪರಿಶೀಲಿಸಿದರು. ಅಂಗನವಾಡಿಗೆ ಭೇಟಿ ನೀಡಿ ಶುಚಿತ್ವ ಕಾಪಾಡಿಕೊಳ್ಳುವಂತೆ ಸೂಚಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಂದಿನಿ ಜಗದೀಶ್, ಉಪಾಧ್ಯಕ್ಷರಾದ ಮಂಗಳ ರಂಗಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಧರಣೇಶ್, ಸಹಾಯಕ ನಿರ್ದೇಶಕರಾದ ಕೆ.ಎಂ. ರವೀಂದ್ರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಂಜುಂಡಸ್ವಾಮಿ, ರಘುನಾಥ್, ತಾಂತ್ರಿಕ ಸಂಯೋಜಕರಾದ ಬಸವರಾಜು ಹಾಜರಿದ್ದರು.