ವರದಿ: ಸಿ.ಎಸ್.ನಾಗರಾಜ್ ಉಪ್ಪಾರ್
ಚಾಮರಾಜನಗರ: ಗ್ರಂಥಾಲಯಗಳು ಮಾಹಿತಿಯ ಭಂಡಾರವಿದ್ದ0ತೆ. ಓದುಗರಲ್ಲಿ ಆಸಕ್ತಿ ಮೂಡಿಸಿ ಜ್ಞಾನ ವಿಕಾಸ ಮಾಡಲು ಗ್ರಂಥಾಲಯಗಳು ಸಹಕಾರಿಯಾಗಲಿದೆ ಎಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ತಿಳಿಸಿದರು.
ನಗರದ ಗ್ರಂಥಾಲಯ ಆವರಣದಲ್ಲಿ ನೂತನ ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡದ ಶಂಕು ಸ್ಥಾಪನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇಲ್ಲಿನ ಡಿಜಿಟಲ್ ಗ್ರಂಥಾಲಯ ಉತ್ತಮ ಸ್ಥಾನದಲ್ಲಿದೆ. ಜಿಲ್ಲಾ ಕೇಂದ್ರದಲ್ಲಿ ೧ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಗ್ರಂಥಾಲಯವನ್ನು ನಿರ್ಮಾಣ ಮಾಡಲಾಗುತ್ತದೆ. ಇದು ಸಂತಸದ ವಿಷಯವಾಗಿದೆ. ಜ್ಞಾನಾರ್ಜನೆಗೆ ಗ್ರಂಥಾಲಯ ಪೂರಕವಾಗಿದೆ ಎಂದರು.
ಕಡ್ಡಾಯ ಹಾಗೂ ಉಚಿತ ಶಿಕ್ಷಣದಿಂದ ಅನುಕೂಲವಾಗಿದೆ. ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಜಿಲ್ಲೆಯಲ್ಲಿ ವೈದ್ಯಕೀಯ, ಎಂಜಿನಿಯರಿ0ಗ್, ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಇವೆ. ನವೋದಯ ಶಾಲೆ, ಪದವಿ ಕಾಲೇಜಿಗೆ ಅಗತ್ಯ ನೆರವು ತಾವು ನೀಡಿರುವುದಾಗಿ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸ ಪ್ರಸಾದ್ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಗೆ ಅವಕಾಶವಾಗುತ್ತಿದೆ. ಈಗಾಗಲೇ ಮೈಸೂರು ವಿಶ್ವ ವಿದ್ಯಾಲಯದ ಕುಲಪತಿ ನೇತೃತ್ವದ ಸಮಿತಿ ಜಿಲ್ಲೆಗೆ ಭೇಟಿ ನೀಡಿದ್ದು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಇದರಿಂದ ಶೈಕ್ಷಣಿಕ ಬೆಳವಣಿಗೆಗೆ ಅನುವಾಗಲಿದೆ ಎಂದರು.
ಜಿಲ್ಲೆಯ ಬೆಳವಣಿಗೆಗೆ ಎಲ್ಲ ಸಹಕಾರ ನೀಡಲು ಬದ್ದರಾಗಿದ್ದೇವೆ. ಬದನಗುಪ್ಪೆ, ಕೆಲ್ಲಂಬಳ್ಳಿ, ಕೈಗಾರಿಕಾ ಪ್ರದೇಶದಲ್ಲಿ ಹಲವು ಉದ್ದಿಮೆ ಸ್ಥಾಪನೆಗೆ ಉದ್ದಿಮೆದಾರರು ಮುಂದೆ ಬಂದಿದ್ದಾರೆ. ನೂತನ ಆಸ್ಪತ್ರೆಯು ಸಜ್ಜುಗೊಂಡಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಎಲ್ಲ ಅವಕಾಶಗಳು ಇವೆ ಎಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸ ಪ್ರಸಾದ್ ಅವರು ತಿಳಿಸಿದರು.
ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎನ್. ಮಹೇಶ್, ಸಿ.ಎಸ್. ನಿರಂಜನಕುಮಾರ್, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ, ಚುಡಾ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಕುಲಗಾಣ, ನಗರಸಭಾ ಅಧ್ಯಕ್ಷರಾದ ಆಶಾ ನಟರಾಜು, ಸದಸ್ಯರಾದ ಎಂ. ಮಹೇಶ್, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಎಸ್.ಹೊಸಮನಿ, ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ಆರ್.ಶಿವಸ್ವಾಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.