ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಕಳೆದ ೫ ವರ್ಷಗಳಿಂದ ಗಿಡನೆಡುವ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿರುವ ಗಿಡಸಂರಕ್ಷಕ ಚಾಮರಾಜನಗರದ ಸಿ.ಎಂ.ವೆಂಕಟೇಶ್ ಅವರಿಗೆ ನಗರಸಭೆ ವತಿಯಿಂದ ಪ್ರಶಂಸನಪತ್ರ ನೀಡಲಾಯಿತು.
ಪತ್ರ ವಿತರಿಸಿದ ನಗರಸಭೆ ಆಯುಕ್ತ ಕರಿಬಸವಯ್ಯ ಮಾತನಾಡಿ, ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ನಗರದ ಸಿ.ಎಂ.ವೆಂಕಟೇಶ್ ಅವರು ನಗರದ ಪ್ರಮುಖ ರಸ್ತೆಗಳಲ್ಲಿ ಗಿಡನೆಟ್ಟು, ಪೋಷಣೆ ಮಾಡುವ ಮಹತ್ವದ ಕಾರ್ಯ ಕೈಗೊಂಡಿದ್ದಾರೆ. ಈಗಾಗಲೇ ಕೆಲಗಿಡಗಳು ಬೆಳೆದುನಿಂತಿದ್ದು, ಸಾರ್ವಜನಿಕರಿಗೆ ನೆರಳು ಒದಗಿಸುತ್ತಿವೆ. ಇನ್ನು ಕೆಲಗಿಡಗಳು ಬೆಳವಣಿಗೆಯ ಹಂತದಲ್ಲಿವೆ. ಪರಿಸರಸಂರಕ್ಷಣೆ ಹಿನ್ನೆಲೆಯಲ್ಲಿ ಗಿಡನೆಡುವ ಕಾಯಕ ನಡೆಸುತ್ತಿರುವ ವೆಂಕಟೇಶ್ ಅವರಿಗೆ ನಗರಸಭೆ ವತಿಯಿಂದ ಪ್ರಶಂಸನಾಪತ್ರ ನೀಡಲಾಗುತ್ತಿದೆ, ವೆಂಕಟೇಶ್ ಅವರ ಪರಿಸರಕಾಳಜಿ ಪರಿಣಾಮ ಮುಂದಿನದಿನಗಳಲ್ಲಿ ಚಾಮರಾಜನಗರ ಹಸಿರುನಗರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ನಗರಸಭೆ ಸದಸ್ಯರಾದ ಚಂದ್ರಶೇಖರ್, ಶಿವರಾಜು, ಚುಡಾಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸೇರಿದಂತೆ ಇತರರು ಹಾಜರಿದ್ದರು.