ಮೈಸೂರು:ಲಾಕ್ ಡೌನ್ ಕಾರಣದಿಂದ ಬಹುತೇಕ ಜನರು ಸಂಕಷ್ಟಕ್ಕೀಡಾಗಿರುವ ಕಾರಣ ಮಕ್ಕಳ ಶಾಲಾ ಶುಲ್ಕ ಭರಿಸಲು ಪೋಷಕರು ಪರದಾಡುವಂತಾಗಿದೆ ಆದ್ದರಿಂದ ಖಾಸಗಿ ಹಾಗೂ ಅನುದಾನಿತ ಶಾಲಾ ಕಾಲೇಜು ಶುಲ್ಕವನ್ನು ಶೇಕಡವಾರು ಕಡಿತಗೊಳಿಸುವಂತೆ ಹಾಗೂ ಕಂತುಗಳ ರೂಪದಲ್ಲಿ ಪಾವತಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಎಂ.ಎನ್.ನವೀನ್ ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂದ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರಿಗೆ ಅಂಚೆಯ ಮೂಲಕ ಪತ್ರ ರವಾನಿಸಿ ಮನವಿ ಮಾಡಿದ್ದಲ್ಲದೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ರಾಜೇಂದ್ರರವರಿಗೂ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಅವರು, ಕೋವಿಡ್ ಮಹಾಮಾರಿ ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ ಡೌನ್ ಕೈಗೊಂಡಿದ್ದು ಸರಿಯಾದ ಕೆಲಸ ಕಾರ್ಯಗಳಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ ಜತೆಗೆ ಕಳೆದ ಒಂದು ವರ್ಷದಿಂದ ಶಾಲಾ ಕಾಲೇಜುಗಳಲ್ಲಿ ಯಾವುದೇ ತರಗತಿ ನಡೆದಿಲ್ಲ. ಮನೆಯಲ್ಲಿಯೇ ಮಕ್ಕಳಿಗೆ ಆನ್ ಲೈನ್ ಮೂಲಕ ಪಾಠ ಪ್ರವಚನಗಳನ್ನು ಕಲಿಯುವಂತೆ ಸೂಚಿಸಲಾಗಿದೆ.
ಪ್ರಸಕ್ತ ವರ್ಷ ಶಾಲಾ ಪ್ರಾರಂಭದಲ್ಲೇ ಶುಲ್ಕವನ್ನು ಪಾವತಿಸುವಂತೆ ಸೂಚಿಸುವಂತೆ ಶಾಲಾ ಕಾಲೇಜುಗಳು ಸೂಚಿಸುತ್ತಿವೆ ಆದರೆ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಕೋವಿಡ್ ಮಹಾಮಾರಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಜೀವನ ನಡೆಸುವುದು ಕಷ್ಟಕರವಾಗಿರುತ್ತದೆ. ಇಂಥ ಸಮಯದಲ್ಲಿ ಖಾಸಗಿ ಮತ್ತು ಅನುದಾನಿತ ಶಾಲಾ ಕಾಲೇಜಿನ ಮುಖ್ಯಸ್ಥರು ಶುಲ್ಕವನ್ನು ಒಂದೇ ಬಾರಿ ಪೂರ್ಣ ಪ್ರಮಾಣದಲ್ಲಿ ಪಾವತಿಸುವಂತೆ ಸೂಚಿಸಿದರೆ ಅದನ್ನು ಪಾವತಿಸುವುದು ಕಷ್ಟವಾಗಲಿದೆ.
ಇದನ್ನು ಅರಿತು ಪೋಷಕರ ಹಿತದೃಷ್ಟಿಯಿಂದ ಖಾಸಗಿ ಮತ್ತು ಅನುದಾನಿತ ಶಾಲಾ ಕಾಲೇಜಿಗೆ ಶುಲ್ಕವನ್ನು ಕಂತಿನ ರೂಪದಲ್ಲಿ ಪಾವತಿಸಲು ಅವಕಾಶ ಮಾಡಿಕೊಡಬೇಕು ಹಾಗೆಯೇ ಖಾಸಗಿ ಮತ್ತು ಅನುದಾನಿತ ಶಾಲಾ ಕಾಲೇಜು ಶುಲ್ಕವನ್ನು ಶೇಕಡವಾರು ಕಡಿತಗೊಳಿಸಬೇಕೆಂದು ಪತ್ರದ ಮೂಲಕ ಮನವಿ ಮಾಡಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.