ಚಾಮರಾಜನಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆ ಮನೆಗಳಲ್ಲಿ ಧ್ವಜ ಹಾರಿಸುವ ಮೂಲಕ ಪ್ರತಿಯೊಬ್ಬರೂ ಈ ಶುಭ ಸಂದರ್ಭದಲ್ಲಿ ಭಾಗಿಯಾಗಬೇಕು ಎಂದು ಮೈಸೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪ್ರದೀಪ್‌ಕುಮಾರ್ ದೀಕ್ಷಿತ್ ಅವರು ತಿಳಿಸಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ನೆಹರು ಯುವಕೇಂದ್ರ ಹಾಗೂ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಭಾರತ ದೇಶವು ಸ್ವಾತಂತ್ರ್ಯಗೊಂಡು ೭೫ ವರ್ಷಗಳು ಕಳೆದಿದೆ. ಇದರ ಸ್ಮರಣಾರ್ಥವಾಗಿ ಇಡಿ ದೇಶವೇ ಅಮೃತ ಮಹೋತ್ಸವ ಆಚರಿಸುತ್ತಿದೆ. ದೇಶದ ನಾಗರಿಕರಾದ ನಾವೆಲ್ಲರೂ ಕೂಡ ಪ್ರತಿ ಮನೆ ಮನೆಯಲ್ಲೂ ಧ್ವಜ ಹಾರಿಸಿ ಈ ಅಮೃತ ಮಹೋತ್ಸವದಲ್ಲಿ ಭಾಗಿಯಾಗುವುದು ನಮ್ಮೆಲ್ಲರ ಸೌಭಾಗ್ಯ ಹಾಗೂ ಆದ್ಯ ಕರ್ತವ್ಯವಾಗಿದೆ ಎಂದರು.
ಯುವ ಸಮೂಹ ದೇಶವನ್ನು ಮುನ್ನಡೆಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಬೆಳವಣಿಗೆಯಲ್ಲಿ ದಾರಿ ತಪ್ಪದೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹನೀಯರ ತತ್ವಗಳನ್ನು ಅಳವಡಿಸಿಕೊಂಡು ಸಮೃದ್ದ ದೇಶ ಕಟ್ಟುವಲ್ಲಿ ಪಾಲುದಾರರಾಗಬೇಕು ಎಂದು ಮೈಸೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪ್ರದೀಪ್ ಕುಮಾರ್ ದೀಕ್ಷಿತ್ ಅವರು ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕೆ. ಸುರೇಶ್ ಅವರು ಮಾತನಾಡಿ ಹರ್ ಘರ್ ತಿರಂಗಾ ಅಭಿಯಾನವನ್ನು ಬಹಳ ಹೆಮ್ಮೆಯಿಂದ ಸಂಭ್ರಮಿಸಬೇಕು. ಬ್ರಿಟಿಷರ ಅಧೀನದಲ್ಲಿದ್ದ ಭಾರತವನ್ನು ಸ್ವಾತಂತ್ರಗೊಳಿಸಲು ಹೋರಾಟಗಾರರು ತಮ್ಮ ನೆತ್ತರನ್ನು ಹರಿಸಿದ್ದಾರೆ. ಅಂತಹ ಮಹನೀಯರ ಸ್ಮರಣೆ ಅರ್ಥಪೂರ್ಣವಾದುದು. ಸುಭಾಷ್‌ಚಂದ್ರ ಬೋಸ್, ಭಗತ್‌ಸಿಂಗ್, ಮಹಾತ್ಮ ಗಾಂಧೀಜಿ ಮುಂತಾದವರ ಜೀವನ ಚರಿತ್ರೆ ಓದಿದಾಗ ದೇಶಾಭಿಮಾನ ಮತ್ತಷ್ಟು ಹೆಚ್ಚಾಗುತ್ತದೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎಂ.ಸುಮತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಪಾಲಕರು, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಪಿ. ಬಾಲಸುಬ್ರಮಣ್ಯಂ, ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷರಾದ ಜಿ. ಬಂಗಾರು, ನೆಹರು ಯುವ ಕೇಂದ್ರದ ಸಹನಾ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
