ಮಹನೀಯರ ನೆನೆಯುವ ಕೆಲಸವಾಗಲಿ: ಶಾಸಕ ಸಿಎಸ್‍ಎನ್.
ಗುಂಡ್ಲುಪೇಟೆ: ದೇಶಕ್ಕೆ ಸ್ವತಂತ್ರ್ಯ ಹಾಗೂ ಸಂವಿಧಾನ ಕೊಟ್ಟ ಮಹನೀಯರನ್ನು ನೆನೆಯುವ ಕೆಲಸ ಪ್ರತಿ ದಿನ ಆಗಬೇಕು ಎಂದು ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಿರಂಜನಕುಮಾರ್ ತಿಳಿಸಿದರು.
ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 72ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪ್ರತಿಯೊಬ್ಬ ನಾಗರೀಕನೂ ಇತಿಹಾಸ ತಿಳಿಯುವ ಪ್ರಯತ್ನ ಮಾಡಬೇಕು. ಬ್ರಿಟೀಷರು ನೂರಾರು ವರ್ಷಗಳ ಕಾಲ ಆಳ್ವಕೆ ನಡೆಸಿದ್ದು, ಹಲವು ಮಂದಿ ತಮ್ಮ ಪ್ರಾಣ ತ್ಯಾಗ ಮಾಡಿ ಸ್ವತಂತ್ಯ ತಂದುಕೊಟ್ಟಿದ್ದಾರೆ. ಭಾರತ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇದಕ್ಕೆ ಸಂವಿಧಾನ ಬರೆಯುವುದು ಸುಲಭದ ಮಾತಲ್ಲ ಅದನ್ನು ಅಂಬೇಡ್ಕರ್ ಸಮರ್ಥವಾಗಿ ನಿಭಾಯಿಸಿ ಸರ್ವರಿಗೂ ಸಮಪಾಲು, ಸಮಬಾಳು ಎಂಬ ನೀತಿಯ ಮೇಲೆ ರಚಿಸಿದ್ದಾರೆ ಎಂದರು.
ಮುಖ್ಯ ಭಾಷಣಕಾರರಾದ ಕಬ್ಬಹಳ್ಳಿ ಮುಖ್ಯ ಶಿಕ್ಷಕ ಎಸ್.ಎಂ. ಸಿದ್ದರಾಜಪ್ಪ ಮಾತನಾಡಿ, ಭಾರತ ಸರ್ವಧರ್ಮ, ಬಹು ಸಂಸ್ಕ್ರತಿಯ ನೆಲೆಯಾಗಿದ್ದು, ಹಿಂದಿನ ಹೆಜ್ಜೆ ಗುರುತುಗಳನ್ನು ತಿಳಿಯಬೇಕು. ಇತಿಹಾಸ ಪ್ರಜ್ಞೆ ಇದ್ದರೆ ಮಾತ್ರ ಪರಂಪರೆ ಅರಿಯಲು ಸಾಧ್ಯ. ಬ್ರಿಟೀಷರು ಒಡೆದು ಆಳುವ ನೀತಿಯಿಂದ ನಮ್ಮನ್ನು ವಶ ಪಡಿಸಿಕೊಂಡರು. ನಂತರ ಸ್ವತಂತ್ರಕ್ಕಾಗಿ ಗಾಂಧಿ ಸೇರಿದಂತೆ ಹಲವು ಮಹನೀಯರು ತನು, ಮನ, ಧನ ಅರ್ಪಿಸಿದ್ದಾರೆ ಎಂದರು.
ಸಂವಿಧಾನದಲ್ಲಿ ಮಾನವೀಯತೆಯ ಸ್ಪರ್ಶವಿದ್ದು, ಇತರೆ ದೇಶಗಳು ಮುಕ್ತ ಕಂಠದಿಂದ ಹೊಗಳುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಅಗತ್ಯವಿದ್ದು, ಶ್ರದ್ದೆ ಇರುವವರಿಗೆ ಜ್ಞಾನ ಸಿಕ್ಕೆ ಸಿಗುತ್ತದೆ. ಸಂವಿಧಾನವನ್ನು ಎಲ್ಲರು ಗೌರವಿಸಿ ಅವರ ತತ್ವಗಳನ್ನು ಪಾಲಿಸಿದರೆ ಮಾತ್ರ ಮಹನೀಯರ ತ್ಯಾಗಕ್ಕೆ ಅರ್ಥ ಸಿಗುತ್ತದೆ ಎಂದರು.
ತಹಸೀಲ್ದಾರ್ ಸಿ.ಜಿ. ರವಿಶಂಕರ್, ತಾಲೂಕು ಪಂಚಾಯಿತಿ ಅಧ್ಯಕ್ಷ ಎಸ್.ಎಸ್. ಮಧುಶಂಕರ್, ಪುರಸಭಾ ಅಧ್ಯಕ್ಷ ಪಿ. ಗಿರೀಶ್ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ಶಿವಮೂರ್ತಿ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ವಿ.ಪಿ. ಕುಲದೀಪ್, ಪುರಸಭಾ ಸದಸ್ಯರಾದ ನಾಗೇಶ್, ಮಧುಸೂಧನ್, ಕಿರಣ್‍ಗೌಡ, ಶ್ರೀನಿವಾಸ್(ಕಣ್ಣಪ್ಪ), ರಾಜ್‍ಗೋಪಾಲ್, ರಂಗಸ್ವಾಮಿ, ಸಾಜಿದಾ ಬೇಗಂ, ಮಹದೇವಮ್ಮ, ಮಾನವ ಬಂಧುತ್ವ ವೇದಿಕೆಯ ಸೋಮಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ