ದುಬಾರಿಯಾಗುತ್ತಿರುವ ಪೆಟ್ರೋಲ್ ದರದ ಹಿಂದಿನ ಮರ್ಮ ಖಾಸಗಿತನದ ಲಾಭವಿರಬಹುದು. ಯಾರಿಗೆ ಗೊತ್ತು ಯಾರು ಯಾರೊಡನೆ ಎಲ್ಲಿ ಹೇಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು. ಇದರಿಂದಾಗಿ ಇದೀಗ ಭಾರತ ವ್ಯಕ್ತಿಖಾಸಗಿ ಮತ್ತು ಹಲವು ಖಾಸಗಿ ಸಂಸ್ಥೆಗಳ ಒಡೆತನದ ಗಿರಿಗಿಟ್ಟಲೆಗೆ ನಿಧಾನಗತಿಯಲ್ಲಿ ಒಳಪಡುತ್ತಿದೆ ಎನ್ನುವ ಸತ್ಯ ಸ್ವರೂಪವನ್ನು ಮರೆಮಾಚಿ; ನಮ್ಮ ಅಭಿವೃದ್ಧಿ ಪಥದ ಬೆಳವಣಿಗೆಯು ಈ ಬಗೆಯಾಗಿ ಏರಿಕೆ ಕಾಣುತ್ತಿದೆ, ಸುಧಾರಿತವಾಗುತ್ತಿದೆ, ಆಧುನಿಕಗೊಳ್ಳುತ್ತಿದೆ ಎನ್ನುವುದು ಕೆಲ ಅಧಿಕಾರ ಚುಕ್ಕಾಣಿ ಹಿಡಿದವರ ಸಮರ್ಥನಾ ಧ್ಯೇಯನುಡಿ. ಇದರಿಂದ ಸಾಧಿತ ಬಾಧಿತಗಳು ಜನ ಸಾಮಾನ್ಯರಿಗೆ ತಿಳಿಯುವಷ್ಟೊತ್ತಿಗೆ ಒಂದು ಮಹತ್ತರ ಬದಲಾವಣೆಯೇ ಜರುಗಿಹೋಗಿರುತ್ತದೆ; ಈ ಬದಲಾವಣೆಗೆ ಜನರೆಲ್ಲರೂ ಹೊಗ್ಗಿಕೊಂಡಿರುತ್ತಾರೆ. ಅದರ ಲಾಭ-ನಷ್ಟದಿಂದಾಗುವ ಹಾಗು-ಹೋಗುಗಳಿಗೆ ಒಳಪಟ್ಟಿರುತ್ತಾರೆ ಮತ್ತು ಜನಸಾಮಾನ್ಯರೇ ನೇರ ಹೊಣೆಯಾಗಿರುತ್ತಾರೆ. ದೂರವಾಣಿ ಸಂಪರ್ಕದಲ್ಲಾದ ಇತ್ತೀಚಿಗಿನ ಬೆಳವಣಿಗೆಯೇ ಇದಕ್ಕೆ ಉತ್ತಮ ಉದಾಹರಣೆ.


2021ರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರು ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯ ಉದ್ದೇಶಗಳೇನೆಂದರೆ ಜೀವನವನ್ನು ಸರಳಗೊಳಿಸಲು ಮತ್ತು ಸ್ವಯಂ ಉದ್ಯೋಗ ಸೃಷ್ಟಿ, ಪರಿಸರ ಸ್ನೇಹಿ ಪರಿಸರ ನಿರ್ಮಾಣ, ಇಂಧನ ಸಂರಕ್ಷಣೆ, ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು ಮತ್ತು ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಯನ್ನು ಉತ್ತೇಜಿಸುವ ಗುರಿ ಹೊಂದಿದ್ದಾಗಿದೆ. ಈ ಹೊಸ ಯೋಜನೆಯು ವ್ಯಕ್ತಿಗಳಿಗೆ, ಪಾಲುದಾರಿಕೆ ಸಂಸ್ಥೆಗಳಿಗೆ ಮತ್ತು ಕಂಪೆನಿಗಳಿಗೆ ಭಾಗವಹಿಸಲು ಅವಕಾಶ ನೀಡುವುದಾಗಿದೆ.


ಇದೇನೋ ಸರಿ! ಆದರೆ ಈ ಎಲೆಕ್ಟ್ರಿಕ್ ವಾಹನ ಬಳಕೆಯಿಂದಾಗುವ ಒಳಿತುಗಳಲ್ಲಿ ರಾಜಕೀಯ ವ್ಯಕ್ತಿಗಳು, ಸರ್ಕಾರಿ ಅಧಿಕಾರಿಗಳು ಏತಕ್ಕಾಗಿ ಸಾರ್ವಜನಿಕರ ಜೊತೆಜೊತೆಯಲ್ಲಿಯೇ ಇದರ ಮೊದಲ ಲಾಭ ಪಡೆಯಬಾರದು? ಇಂಧನ ಉಳಿಸಿ ಪರಿಸರ ಸ್ನೇಹಿ ಪರಿಸರವನ್ನು ನಿರ್ಮಾಣಮಾಡಬಾರದು? ಸರ್ಕಾರಿ ಸೇವೆಯ ಸಾರಿಗೆ ವ್ಯವಸ್ಥೆಯನ್ನು ಏತಕ್ಕಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ಬಲಪಡಿಸಬಾರದು? ಇಂಧನ ಬಳಕೆಯಿಂದ ಆಗುತ್ತಿರುವ ವೆಚ್ಚವನ್ನು ತಡೆದು ಸರ್ಕಾರದ ಬೊಕ್ಕಸಕ್ಕೆ ಉಳಿತಾಯ ತಂದುಕೊಂಡು ಲೋಕೋಪಯೋಗಿ ಕೆಲಸಗಳಿಗೆ ಮತ್ತಷ್ಟು ಒಳಿತನ್ನು ಮಾಡಬಾರದು? ಜನಸಾಮಾನ್ಯರಿಗೆ ಇವರೇ ಏಕೆ ಮೊದಲು ಎಲೆಕ್ಟ್ರಿಕ್ ವಾಹನಗಳನ್ನು ಬಳಸಿ ಮಾದರಿಯಾಗಿ ತೋರಬಾರದು? ಎಲ್ಲಾ ಹೊಸತನಗಳನ್ನು ಜನಸಾಮಾನ್ಯರ ಮೇಲೆ ಪ್ರಯೋಗಿಸುವುದು ಲಾಭ ಗಿಟ್ಟಿಸುವುದು ಎಷ್ಟು ಸರಿ. ಸರ್ಕಾರಿ ಸೇವೆಗೆ ಇರುವಂತಹ ವಾಹನಗಳಿಗೆ ಇಂಧನ ವೆಚ್ಚ ಯಾರಿಂದ ಹೋಗುತ್ತಿದೆ; ಪ್ರಜಾಪ್ರಭುತ್ವ ಪ್ರಜೆಗಳ ಕಂದಾಯದಿಂದಲೇ ತಾನೆ! ಬಣ್ಣದ ಬಟ್ಟೆತುಂಡನ್ನು ಕತ್ತರಿಸಿ ಸಿಹಿ ಹಂಚಿ ಈ ರೀತಿ ಹೊಸತನಗಳಿಗೆ ಚಾಲನೆ ನೀಡಿ ಪ್ರಚಾರ ಪಡೆಯುವುದರ ಮತ್ತು ನೀಡುವುದರ ಬದಲು ಸ್ವತಃ ತಾವೇ ಬಳಕೆ ಮಾಡಿ ಮತ್ತೊಬ್ಬರಿಗೆ ಆದರ್ಶ ಉದಾಹರಣೆಯಾಗುವುದು ಒಳಿತಲ್ಲವೇ!


ಸರ್ಕಾರಿ ಸೇವೆಯಲ್ಲಿ ಹಲವಾರು ಇಲಾಖೆಗಳು ಬರುತ್ತವೆ ; ಇಲ್ಲಿನ ಅಧಿಕಾರಿಗಳು ರಾಜಕೀಯ ವ್ಯಕ್ತಿಗಳು ಕೋಟಿ ಸಂಖ್ಯೆಗೆ ಹತ್ತಿರದಲ್ಲಿದ್ದಾರೆ ಅಷ್ಟೂ ಜನರಲ್ಲಿ ಸಾರ್ವಜನಿಕರೊಟ್ಟಿಗೆಯೇ ಈ ಮೊದಲ ಬದಲಾವಣೆಯಾಗಲಿ ಬಿಡಿ‌. ಜನಸಾಮಾನ್ಯರೇ ಏಕೆ ಇದರ ಮೊದಲ ಪ್ರಯೋಗ ದಾಳಗಳಾಗಬೇಕು.


ಎಲೆಕ್ಟ್ರಿಕ್ ವಾಹನಗಳು ಜನಸಾಮಾನ್ಯರಿಗೆ ಮಾರಕವಾಗಿವೆ ಎಂದು ತಿಳಿಸುವುದು ಮತ್ತು ಅರಿಯುವುದು ಶುದ್ಧ ತಪ್ಪಾಗುತ್ತದೆ. ಅವುಗಳಲ್ಲಿರುವ ಸಾಧಿತಗಳು ಹಲವು ಇವೆ. ಅದರಲ್ಲಿ ಮೊದಲನೆಯದು ಪರಿಸರ ಸ್ನೇಹಿ ಪರಿಸರ ನಿರ್ಮಾಣ, ವಿದ್ಯುತ್’ನ ಸಮರ್ಪಕ ಬಳಕೆ, ಇಂಧನ ಉಳಿತಾಯ, ಕೈಗಾರಿಕಾ ಬೆಳವಣಿಗೆ, ಉದ್ಯೋಗ ಸೃಷ್ಟಿ. ಆದರೆ ಇವು ಎಷ್ಟರ ಮಟ್ಟಿಗೆ ವಸ್ತುನಿಷ್ಠವಾಗಿ, ಪ್ರಾಮಾಣಿಕ ಧ್ಯೇಯೋದ್ದೇಶಗಳ ಮೂಲಕ ಸಮಾಜಕ್ಕೆ ಕೊಡುಗೆಯಾಗಿ ಸಿಗುತ್ತಿದೆ ಎನ್ನುವುದೂ ಕೂಡ ಅಷ್ಟೇ ವಿವೇಚನೆಯುತವಾದ ಚಿಂತನೆ. ಏಕೆಂದರೆ ನಾವು ಎಲ್ಲಾ ವಸ್ತುಗಳ ಬಳಕೆಯಲ್ಲೂ ಒಳಿತು ಕೆಡುಕುಗಳನ್ನು ಕಾಣಬಹುದು.

ಒಂದು ಚಾಕು ತರಕಾರಿ ಹಚ್ಚಲು ಸಹಾಯಕವಾಗುತ್ತದೆ ಮತ್ತು ಅದೇ ಚಾಕು ಮಾರಕ ಅಸ್ತ್ರವಾಗಿಯೂ ಬಳಕೆಯಾಗುತ್ತದೆ. ಈಗ ಲಾಭಿಗಳು ಜನಸಾಮಾನ್ಯರ ಮೇಲೆ ತಾವು ತರಬೇಕೆಂದಿರುವ ಹೊಸತಂತ್ರಜ್ಞಾನಗಳನ್ನು ಯಾವ ರೀತಿಯಾಗಿ ಬಳಸಲು ಹೊರಟಿದ್ದಾರೆ ಎನ್ನುವ ಸೂಕ್ಷ್ಮ ಪ್ರಜ್ಞೆಯೊಂದಿಗಿನ ಹೊಸತನಗಳ ಸ್ವೀಕಾರಾರ್ಹದಲ್ಲಿ ಒಳಿತಿದೆಯೇ ಹೊರತು ಕಂಡದ್ದನ್ನೆಲ್ಲಾ ಯಥಾವತ್ತಾಗಿ ಸ್ವೀಕರಣೆ ಮಾಡುವುದರಲ್ಲಿ ಅಲ್ಲ; ಕೆಲವರ ಸ್ವಾರ್ಥಗಳಿಗಾಗಿ ಹೊಸತನಗಳನ್ನು ಒಮ್ಮೆಲೆ ಎಲ್ಲರ ಮೇಲೆ ಹೇರುವುದರಲ್ಲಿ ಅಲ್ಲ.
ಇತ್ತೀಚೆಗೆ ನಡೆದ ‘ಗೋ ಎಲೆಕ್ಟ್ರಿಕ್’ ಅಭಿಯಾನದಲ್ಲಿ ಮಾತನಾಡಿದ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯಗೊಳಿಸುವುದಾಗಿ ಹೇಳಿಕೊಂಡಿದ್ದಾರೆ. ತೈಲೋತ್ಪನ್ನಗಳ ಮೇಲಿನ ಅವಲಂಬನೆ ತಗ್ಗಿಸುವುದಕ್ಕಾಗಿ ವಿದ್ಯುತ್ ಚಾಲಿತ ವಾಹನಗಳು ಪರ್ಯಾಯವಾಗಿವೆ. ಈ ಎಲೆಕ್ಟ್ರಿಕ್ ವಾಹನಗಳನ್ನು ಜನಪ್ರಿಯಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ

. ಆದರೆ ಇದು ಸದ್ಯದಲ್ಲಿ ಆಶ್ವಾಸನೆಯಾಗಿಯೇ ಉಳಿದಿದೆ; ಪರೋಕ್ಷ ಪ್ರಚೋದನೆಯ ತಂತ್ರವಾಗಿ ಕಾಣಿಸುತ್ತಿದೆಯಷ್ಟೆ.ಎಲೆಕ್ಟ್ರಿಕ್ ವಾಹನಗಳೇನು ಕಡಿಮೆ ದರದಲ್ಲಿ ಸಿಗುತ್ತಿದೆಯೇ? ಅದೂ ಕೂಡ ಲಕ್ಷ ದಾಟಿದೆ. ಆರಂಭದಲ್ಲೇ ಲಕ್ಷದ ಹಂತದಲ್ಲಿರುವ ಇವುಗಳು ಮುಂದೆ ಇನ್ನೂ ದುಬಾರಿ ಮೌಲ್ಯಕ್ಕೆ ಜಿಗಿಯುವುದಂತೂ ಖಂಡಿತ. ವಿದ್ಯುತ್’ನ ಅತಿಯಾದ ಬಳಕೆಯಿಂದಾಗಿ ಮುಂದೆ ಅದರ ದರಗಳು ಹೆಚ್ಚುವುದಂತೂ ನಿಶ್ಚಿತ. ಇಂದು ಪೆಟ್ರೋಲ್ ದರ ಏರಿಕೆ ಕಂಡಿದೆ ನಾಳೆ ವಿದ್ಯುತ್ ದರ ಏರಿಕೆ ಕಾಣುತ್ತದೆ. ಬೇಡಿಕೆ ಮತ್ತು ಪೂರೈಕೆಯ ನಡುವೆ ಬೆಲೆಯ ಹಾವು ಏಣಿ ಆಟ ನಿಲ್ಲುವುದಿಲ್ಲ ಅಲ್ಲವೇ. ಜನಸಾಮಾನ್ಯರನ್ನು ಒಮ್ಮಿಂದೊಮ್ಮೆಲೇ ದುಬಾರಿ ವ್ಯವಸ್ಥೆಗೆ ಒಳಪಡಿಸುವುದು ಸಂಕಷ್ಟಕ್ಕೆ ಈಡುಮಾಡಿದಂತಲ್ಲವೇ!.


ಎಲೆಕ್ಟ್ರಿಕ್ ವಾಹನಗಳಲ್ಲಿ ದೋಷ ಹುಡುಕುತ್ತಿಲ್ಲ ನಮ್ಮಗಳ ನಡುವಿನ ವಿಚಾರಗಳಲ್ಲಿರುವ ತೊಡಕುಗಳನ್ನು ಸರಿಮಾಡುವ ಯತ್ನವಷ್ಟೇ. ಎಲೆಕ್ಟ್ರಿಕ್ ವಾಹನಗಳು ಯುರೋಪಿಯನ್ ದೇಶಗಳಲ್ಲಿ ನಾಲ್ಕೈದು ದಶಕಗಳ ಹಿಂದೆಯೇ ಹುಟ್ಟನ್ನು ಪಡೆದಿದೆ ಮತ್ತು ಈವರೆಗೆ ಅತಿಯಾದ ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಪೂರಕವಾಗಿ ಅಲ್ಲಿನ ತಂಪಾದ ವಾತಾವರಣ ಅವುಗಳ ಬ್ಯಾಟರಿ ಸಾಮರ್ಥ್ಯವನ್ನು ಧೀರ್ಘಕಾಲದವರೆಗೆ ಕಾಯ್ದಿರಿಸಲು ಯೋಗ್ಯವಾಗಿದೆ ಹಾಗೂ ಅಲ್ಲಿನ ಆರ್ಥಿಕ ಸ್ಥಿತಿಗತಿಗಳು, ಪ್ರಜೆಗಳ ಆರ್ಥಿಕ ಜೀವನ ಶೈಲಿ ಎಲ್ಲವೂ ಹೊಂದಾಣಿಕೆಯಾಗಿದೆ. ಎಲ್ಲೋ ಉತ್ತಮವಾಗಿ ಕಂಡದ್ದು ಬೇರೆಡೆಯಲ್ಲಿಯೂ ಅದೇ ಮಟ್ಟದ ಬೆಳವಣಿಗೆ ಕಾಣುತ್ತದೆ ಎಂದು ಊಹಿಸುವುದು ಸರಿಯಲ್ಲ. ಎಲೆಕ್ಟ್ರಿಕ್ ವಾಹನಗಳು ಭಾರತಕ್ಕೆ ಬರಲು ಇನ್ನೂ ಹಲವು ಪರೀಕ್ಷೆಗಳನ್ನು ಎದುರಿಸುತ್ತಲೇ ಪ್ರಯೋಗ ಕೊಟಡಿಯಲ್ಲಿ ಬೆಳವಣಿಗೆ ಕಾಣುತ್ತಿವೆ. ಹೀಗಿರುವಾಗ ಸಾಧಿತ ಭಾದಿತಗಳನ್ನು ಗಮನವಿರಿಸದೆ ಜನಸಾಮಾನ್ಯರಿಗೆ ಪರಿಚಯಿಸುವುದು ಅಷ್ಟು ಸರಿಯಲ್ಲ.


ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಿ ಭಾರತಕ್ಕೆ ಕೊಡುಗೆ ಕೊಡಲು ಕಾಲ್ತುದಿಯಲ್ಲಿ ನಿಂತಿರುವ ಉದ್ಯಮಿಗಳಿಗೆ ಅನುಮೋದನೆ ನೀಡುತ್ತಿರುವ ಸರ್ಕಾರ ಮೊದಲು ಸಾರ್ವಜನಿಕರೊಟ್ಟಿಗೆ ಈ ಮಹತ್ತರದ ಹೆಜ್ಜೆಯನ್ನು ಇಡಲಿ. ಇದರ ಸಾಧಿತ ಬಾದಿತಗಳನ್ನು ಸರ್ಕಾರ ಸೇವೆಯಲ್ಲಿರುವ ಅಧಿಕಾರಿಗಳು, ರಾಜಕೀಯ ಹಿರಿಯರು ಅನುಭವಿಸಲಿ. ಪೆಟ್ರೋಲ್ ಉಳಿಸಿ ಸರ್ಕಾರದ ಬೊಕ್ಕಸಕ್ಕೆ ಲಾಭ ಮಾಡಲಿ, ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನ ಬಳಸಿ ಉತ್ತಮ ಪರಿಸರ ನಿರ್ಮಾಣ ಮಾಡುವುದಕ್ಕೆ ಮುನ್ನುಡಿ ಬರೆಯಲಿ. ಪ್ರಜೆಗಳೂ ಸಹ ಸಂತೋಷದಿಂದ ಸ್ವೀಕರಿಸುತ್ತಾರೆ. ಯಾರದ್ದೋ ಲಾಭಕ್ಕೆ ಭಾರತೀಯರು ಸದಾ ಮಾರುಕಟ್ಟೆಯಾಗುವುದರಲ್ಲಿ ಏನಿದೆ ಲಾಭ.


ಪೆಟ್ರೋಲ್ ದರದ ಏರಿಕೆಗೆ ನಾನಾ ಕಾರಣಗಳನ್ನು ನೀಡಿ ಸಮರ್ಥನೆ ಕೊಡುತ್ತಿರುವ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದಷ್ಟು ಬೇಗ ಸ್ವತಃ ತಾನೇ ಶುಭವಾಡಲಿ. ಇಂಧನ ಬಳಸದೇ ಹಣ ಉಳಿಸಿ ಸಾರ್ವಜನಿಕ ಹಿತಾಸಕ್ತಿ ಕಾಪಾಡಲಿ. ಇಲ್ಲ ಪೆಟ್ರೋಲ್ ದರವನ್ನು ಕಡಿಮೆಗೊಳಿಸಿ ಜನರ ಆರ್ಥಿಕ ಜೀವನ ಮಟ್ಟವನ್ನು ಸುಧಾರಿಸುವತ್ತ ಗಮನಹರಿಸಲಿ.

ಚಿಮಬಿಆರ್ (ಮಂಜುನಾಥ ಬಿ.ಆರ್)
ಯುವಸಾಹಿತಿ, ಸಂಶೋಧಕ, ವಿಮರ್ಶಕ
ಹೆಚ್.ಡಿ ಕೋಟೆ, ಮೈಸೂರು.
ದೂರವಾಣಿ ಸಂಖ್ಯೆ:-8884684726