
ಚಾಮರಾಜನಗರ: ತಾಲೂಕಿನ ವೆಂಕಟಯ್ಯನಛತ್ರದ ಹೊಸೂರು ಹಾಗೂ ಬಡಗಲಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಶಾಲಾಕೊಠಡಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಅವರು ಮಾತನಾಡಿ, ರಾಜ್ಯಸರಕಾರ ಶಿಕ್ಷಣಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಜಿಲ್ಲೆಯಲ್ಲಿ ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್ ಕಾಲೇಜು, ಕೃಷಿಕಾಲೇಜು, ಪದವಿ, ಸ್ನಾತಕೋತ್ತರಶಿಕ್ಷಣ ಕಾಲೇಜುಗಳಿದ್ದು ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಪಡೆಯುವುದಕ್ಕೆ ಹೆಚ್ಚಿನ ಅವಕಾಶಗಳಿವೆ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸರಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಕ್ಷೇತ್ರ ವ್ಯಾಪ್ತಿಯ ಗ್ರಾಮಾಂತರದ ಶಾಲೆಗಳಿಗೆ ಕುಡಿಯುವ ನೀರು, ಶಾಲಾ ಕೊಠಡಿ ನಿರ್ಮಾಣದಂತಹ ಮೂಲಸೌಕರ್ಯಗಳಿಗೆ ಒತ್ತು ನೀಡಲಾಗುತ್ತಿದೆ. ಅದರಂತೆ ನಬಾರ್ಡ್ ಆರ್‌ಐಡಿಎಫ್ ಯೋಜನೆಯಡಿ, ಕ್ಷೇತ್ರ ವ್ಯಾಪ್ತಿಯ ವಿಸಿ ಹೊಸೂರು ಶಾಲೆಯ ಮೂರುಕೊಠಡಿ ನಿರ್ಮಾಣಕ್ಕೆ ೩೩ ಲಕ್ಷ, ಬಡಗಲಪುರ ಶಾಲೆಯ ಒಂದು ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ೧೦.೬೦ ಲಕ್ಷ ರೂ.ವೆಚ್ಚ ಮಾಡಲಾಗುತ್ತಿದೆ. ಕಾಮಗಾರಿ ನಿರ್ವಹಣೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆಧ್ಯತೆ ನೀಡಬೇಕು, ನಿಗಧಿತ ಅವಧಿಯಲ್ಲಿ ಕೊಠಡಿಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ವೆಂಕಟಯ್ಯನಛತ್ರ ಗ್ರಾಪಂ ಅಧ್ಯಕ್ಷೆ ಶೈಲಜಉಮೇಶ್, ಜಿಪಂ ಮಾಜಿಸದಸ್ಯ ರಮೇಶ್, ಮುಖಂಡರಾದ ಮಹದೇವಸ್ವಾಮಿ, ನಾಗೇಂದ್ರಸ್ವಾಮಿ, ಶಿವಮಲ್ಲಪ್ಪ, ಅಶೋಕ್, ಬಡಗಲಪುರ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ, ಸದಸ್ಯರಾದ ಮಹದೇವಸ್ವಾಮಿ, ಜ್ಯೋತಿ, ಕಾರ್ಮಿಕ ಕನಿಷ್ಠ ಸಲಹಾವೇತನ ಮಂಡಳಿ ಮಾಜಿಅಧ್ಯಕ್ಷ ಉಮೇಶ್, ಲೋಕೋಪಯೋಗಿ ಇಲಾಖೆ ಎಇಇ ಕೆಂಪರಾಜು, ಎಂಜಿನಿಯರ್ ಮಧುಸೂಧನ್, ಬಿಇಒ ಸೋಮಣ್ಣೇಗೌಡ ಸೇರಿದಂತೆ ಗ್ರಾಮಸ್ಥರು, ಮುಖಂಡರು ಹಾಜರಿದ್ದರು.
