ಸರಗೂರು: ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಹೆಚ್ಚಿನ ಆದ್ಯತೆ ನೀಡಿ, ಹೆಚ್ಚಿನ ಜ್ಞಾನಾರ್ಜನೆಗೆ ಸಹಕರಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕುನ ಮುಳ್ಳೂರು ಗ್ರಾಮದಲ್ಲಿ ಆರ್‍ಬಿಐನ ಅನುದಾನ 80 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಗಳ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಕ್ಕಳು ಉನ್ನತ ಶಿಕ್ಷಣ ಪಡೆದರೆ ಹೆಚ್ಚಿನ ಅರಿವು ಹೊಂದಿ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅವರ ಶ್ರೇಯಸ್ಸಿಗೆ ಶ್ರಮಿಸಬೇಕು. ಜತೆಗೆ ಉನ್ನತ ಶಿಕ್ಷಣ ನೀಡುವಲ್ಲಿ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
70 ಲಕ್ಷ ರೂ. ಶಾಲಾ ಕೊಠಡಿಗಳನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಬೇಕು. 10 ಲಕ್ಷ ರೂ.ವೆಚ್ಚದಲ್ಲಿ ಸುಸಜ್ಜಿತವಾದ ಹೈಟೆಕ್ ಶೌಚಾಲಯ ನಿರ್ಮಿಸಿಬೇಕು. ಶಾಲಾ ಆವರಣವನ್ನು ಮಕ್ಕಳ ಓದು, ಆಟಕ್ಕೆ ಅನುಗಣವಾಗಿ ನಿರ್ಮಾಣ ಮಾಡಬೇಕು. ಶಾಲಾ ಮುಂಭಾಗದಲ್ಲಿರುವ ಹಳೆಯ ಕಟ್ಟಡ ತೆರವುಗೊಳಿಸಲು ಸಂಬಂಧ ಇಲಾಖಾಧಿಕಾರಿಗಳು ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಗುರುಸ್ವಾಮಿ ಮಾತನಾಡಿ, ನೂತನ ಸರಗೂರು ತಾ.ಪಂ.ನಿಂದ ಶಾಲೆಗೆ ಅಗತ್ಯಗನುಗುಣವಾಗಿ ಸೌಲಭ್ಯ ನೀಡಲಾಗುವುದು. ಇದನ್ನು ಶಿಕ್ಷಕರು ಬಳಸಿಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಮಾತನಾಡಿ, ಶಾಸಕರು ಈಗಾಗಲೇ ತಾಲೂಕಿನಲ್ಲಿ ಶಿಥಿಲಗೊಂಡ ಹಲವು ಶಾಲಾ ಕೊಠಡಿಗಳನ್ನು ಸುಮಾರು 17 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಕ್ರಮ ವಹಿಸಿದ್ದಾರೆ ಎಂದರು.
ಜಿ.ಪಂ.ಮಾಜಿ ಸದಸ್ಯ ರವಿ, ತಾಲೂಕು ಪಂಚಾಯಿತಿ ಇಓ ಟಿ.ಎಸ್.ಸಿದ್ದು, ಎಸ್‍ಡಿಎಂಸಿ ಅಧ್ಯಕ್ಷ ಶಿವಣ್ಣ ಮಾತನಾಡಿದರು. ಮುಖಂಡರಾದ ಶಂಭುಲಿಂಗನಾಯಕ, ಬಸವರಾಜು, ಮುಳ್ಳೂರು ರವಿ, ಮುಖ್ಯ ಶಿಕ್ಷಕರಾದ ಮಹದೇವನಾಯಕ, ಜ್ಯೋತಿ, ಪಿಡಿಒ ಹನುಮಯ್ಯ ಸೇರಿದಂತೆ ಎಸ್‍ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು, ಗ್ರಾಮಸ್ಥರು ಹಾಜರಿದ್ದರು.

By admin