ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ (೯೨) ಅವರು ಇಂದು ನಿಧನರಾದರು. ಕೋವಿಡ್ ೧೯ ದೃಢಪಟ್ಟ ಹಿನ್ನೆಲೆ ಚಿಕಿತ್ಸೆಗಾಗಿ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಜನವರಿ ೮ರಂದು ದಾಖಲಾಗಿದ್ದರು. ಕೆಲವು ವಾರಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಿಸಿಕೊಂಡಿತ್ತಾದರೂ, 
ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. 

ಆದರೆ, ಭಾನುವಾರ ಬೆಳಿಗ್ಗೆ ಅವರು ಅಗಲಿದ್ದಾರೆ. ಗಾನ ಕೋಗಿಲೆ ಲತಾ ದೀದಿ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಸುಮಾರು ಏಳು ದಶಕಗಳ ಕಾಲ ಹಿನ್ನೆಲೆ ಗಾಯಕಿಯಾಗಿ ಮನರಂಜಿಸಿದ್ದಾರೆ. ೧೯೪೨ರಿಂದ ಆರಂಭವಾದ ಅವರ ಗಾಯನ ಯಾನದಲ್ಲಿ ೩೦,೦೦೦ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಏ ಮೇರೆ ವತನ್ ಕೆ ಲೋಗೊ, ಲಗ್ ಜಾ ಗಲೇ, ಏಹ್ ಕಹಾ ಆಗಯೇ ಹಮ್ ಹಾಗೂ ಪ್ಯಾರ್ ಕಿಯಾ ತೊ ಡರ್ನಾ ಕ್ಯಾ,...ಸೇರಿದಂತೆ ಅವರ ನೂರಾರು ಹಾಡುಗಳು ಇವತ್ತಿಗೂ ಅಪಾರ ಜನಪ್ರಿಯತೆಯನ್ನು ಪಡೆದಿವೆ.

ಲತಾ ಮಂಗೇಶ್ಕರ್ ಅವರ ಸಾಧನೆಯನ್ನು ಪರಿಗಣಿಸಿ ೨೦೦೧ರಲ್ಲಿ ಭಾರತ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಪ್ರದಾನ ಮಾಡಿತ್ತು. ಚಿತ್ರರಂಗದಲ್ಲಿನ ಸೇವೆಗೆ  ೧೯೮೯ರಲ್ಲಿ ದಾದಾ ಸಾಹೇಬ್ ಫಾಲ್ಕೆ  ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದಷ್ಟೇ ಅಲ್ಲದೆ ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.

ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಮತ್ತು ರಾಜ್ಯದ ರಾಜಕಾರಣಿಗಳು,ಮುಖಂಡರುಗಳು ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.