ಮಾನಸ- ಸಿಕ್ರಂ, ಜಿಲ್ಲಾ ಸಂಪನ್ಮೂಲ ಕೇಂದ್ರ, ಹಾಗೂ ಸುವರ್ಣ ಬೆಳಕು ಪೌಂಡೇಷನ್ ವತಿಯಿಂದ
ಸುಣ್ಣದಕೇರಿಯಲ್ಲಿ ೭ನೇ ಕ್ರಾಸ್ ನಲ್ಲಿ ಕಾನೂನು ಸಲಹಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಮೈಸೂರು ಜಿಲ್ಲಾ ಸಂಪನ್ಮೂಲ ಕೇಂದ್ರದ ಸಂಯೋಜಕರಾದ ಡಾ.ದೇವರಾಜು.ಎಸ್.ಎಸ್ ರವರು ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಕುರಿತು ಮಾಹಿತಿ ನೀಡುತ್ತಾ, ಬಹುತೇಕ ಮನೆಗಳಲ್ಲಿ ವಿವಿಧ ಪ್ರಕಾರದ ಗೃಹಿಂಸೆಗೆ ಮಹಿಳೆಯರು ಒಳಗಾಗುತ್ತಿದ್ದಾರೆ. ಮಹಿಳೆಯರು ತಮಗಿರುವ ಸಂವಿಧಾನಬದ್ಧ ಹಕ್ಕುಗಳು ಮತ್ತು ರಕ್ಷಣೆಗಳ ಕುರಿತು ಜಾಗೃತರಾಗುವ ಮೂಲಕ ಗೃಹಿಂಸೆಯನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಲಿಂಗ ತಾರತಮ್ಯ ವಿವಿಧ ರೂಪಗಳಲ್ಲಿ ಹೆಚ್ಚಾಗಿದ್ದು ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಿ ನಡೆಯುತ್ತಿದೆ. ಪೋಷಕರು ಗಂಡು ಮಗು ಬೇಕು ಎಂಬ ಆಸೆಗಾಗಿ ಹೆಣ್ಣು ಭ್ರೂಣ ಹತ್ಯೆ ಮಾಡಲಾಗುತ್ತಿದೆ ಇದು ಕಾನೂನು ಬಾಹಿರವಾಗಿದ್ದು ಇದನ್ನು ಉಲ್ಲಂಘಿಸಿದವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ತಿಳಿಸಿದರು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಮಕ್ಕಳ ಲಾಲನೆ ಪಾಲನೆಯಲ್ಲಿ ಪೋಷಕರ ಪಾತ್ರದ ಕುರಿತು ತಿಳಿಸಿದರು.
ಕೌಟುಂಬಿಕ ಜೀವನದಲ್ಲಿ ವಿವಾಹವು ಪ್ರಮುಖವಾದ ಘಟ್ಟ, ಆದರೆ ವಿವಾಹದ ಸಂದರ್ಭದಲ್ಲಿ ವರದಕ್ಷಿಣೆ ಎಂಬ ಪಿಡುಗು ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿದೆ. ವರದಕ್ಷಿಣೆಯನ್ನು ನೀಡುವುದು ಹಾಗೂ ಪಡೆದುಕೊಳ್ಳುವುದು ಸಹ ಅಪರಾಧವಾಗಿದೆ. ಇದರನ್ವಯ ಕನಿಷ್ಠ ಐದು ವರ್ಷ ಜೈಲು ಶಿಕ್ಷೆ ಹಾಗೂ ೧೫ ಸಾವಿರ ರೂಪಾಯಿ ದಂಡ ಹಾಗೂ ವರದಕ್ಷಿಣೆ ಕೇಳುವ ಅಪರಾಧಕ್ಕೆ ಕನಿಷ್ಠ ೨ ವರ್ಷ ಜೈಲು ಶಿಕ್ಷೆ ಹಾಗೂ ೧೦,೦೦೦ ದಂಡ ವಿಧಿಸಿಸಲು ಕಾನೂನಲ್ಲಿ ಅವಕಾಶವಿದೆ. ಆದುದರಿಂದ ವರದಕ್ಷಿಣೆಯನ್ನು ತೆಗೆದುಕೊಳ್ಳುವುದು ಮತ್ತು ಕೊಡುವುದು ಎರಡು ಕೂಡ ಅಪರಾಧವಾಗಿದ್ದು ಯಾರೂ ಕೂಡ ವರದಕ್ಷಿಣೆ ವಿನಿಮಯ ಮಾಡಿಕೊಳ್ಳಬಾರದೆಂದು ತಿಳಿಸಿದರು.

ಅಂತೆಯೇ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸಹ ನಿರಂತರವಾಗಿ ಬಾಲ್ಯ ವಿವಾಹ ನಡೆಯುತ್ತಿವೆ. ಹೆಣ್ಣು ಮಕ್ಕಳಿಗೆ ೧೮ ವರ್ಷ ಹಾಗೂ ಗಂಡು ಮಕ್ಕಳಿಗೆ ೨೧ ವರ್ಷ ಪೂರೈಸಿದ ನಂತರವೇ ವಿವಾಹ ಮಾಡಬೇಕು. ಇಲ್ಲವಾದರೆ ಕಾನೂನು ಪ್ರಕಾರ ಅಪರಾಧವಾಗುತ್ತದೆ ಎಂದು ತಿಳಿಸಿದರು.ಮಾತೃತ್ವ ಸೌಲಭ್ಯ ಕಾಯ್ದೆ, ಸಮಾನ ವೇತನ ಕಾಯ್ದೆ ಮಹಿಳೆಯರ ಸಬಲೀಕರಣಕ್ಕೆ ಪೂರಕವಾದವುಗಳಾಗಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಅನ್ವಯ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡವಲ್ಲದ ಯಾವುದೇ ವ್ಯಕ್ತಿ, ಜಾತಿ, ಕೆಲಸ ಅಥವಾ ವೃತ್ತಿ, ಆಹಾರ ಪದ್ಧತಿ, ಅಥವಾ ಇನ್ಯಾವುದೇ ಹೆಸರುಗಳಿಂದ ಅವರ ಭಾವನೆಗೆ ಕುಂದು ಬರುವಂತೆ ಮಾತನಾಡುವುದು, ಅವಾಚ್ಯ ಶಬ್ದಗಳನ್ನು ಬಳಸಿ ಬೈಯುವುದು ಮತ್ತು ಅವಹೇಳನ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಇದನ್ನು ಉಲ್ಲಂಘಿಸಿದವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಮನುಷ್ಯರೆಲ್ಲರೂ ಸಮಾನರು ಜಾತಿ ಭೇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿದರು. ಮಹಿಳಾ ಹಕ್ಕುಗಳ ಸಂರಕ್ಷಣೆ ಇರುವ ಇತರ ಕಾಯ್ದೆಗಳು ಹಾಗೂ ಸರ್ಕಾರದಿಂದ ಇಡಲಾಗುತ್ತಿರುವ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸಿದರು.ಈ ಕಾರ್ಯಕ್ರಮದಲ್ಲಿ ಮಹಿಳಾ ದಿನಾಚಾರಣೆಯ ಅಂಗವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ಶಿಕ್ಷಕಿಯಾದ ಗೀತಾ ರವರನ್ನು ಸನ್ಮಾನಿಸಲಾಯಿತು.ಈ ಕಾನೂನು ಸಲಹಾ ಶಿಬಿರದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಚರ್ಚಿಸಲಾಯಿತು. ಹಾಗೂ ಸ್ಥಳೀಯ ನಿವಾಸಿಗಳಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವಿಧವಾ ವೇತನ ಹಾಗೂ ಜನನ ಮರಣ ಪ್ರಮಾಣ ಪತ್ರಗಳ ಪಡೆಯುವಿಕೆಯ ಕುರಿತು ಮಾರ್ಗದರ್ಶನ ನೀಡಲಾಯಿತು.

ಕಾನೂನು ಸಲಹಾ ಶಿಬಿರದಲ್ಲಿ ಸಿಕ್ರಂನ ವಕೀಲರಾದ ಪ್ರಕಾಶ್, ಸುವರ್ಣ ಬೆಳಕು ಫೌಂಡೇಶನ್ ನ ಸಂಸ್ಥಾಪಕರಾದ ಮಹೇಶ್, ಮಂಜುನಾಥ್,ನಾಗೇಂದ್ರ, ಚೆಲುವ, ದಾಸಪ್ಪ, ಹರೀಶ್, ಸಮುದಾಯದ ಮುಖಂಡರಾದ ಹಾಗೂ ಇತರರು ಹಾಜರಿದ್ದರು.

Leave a Reply